ADVERTISEMENT

ಎಲ್ಲರೂ ಶಾಂತಿಯಿಂದ ಇರಬೇಕು: ವಿಧಾನಪರಿಷತ್ ಮಾಜಿ ಸದಸ್ಯ ವಿಜಯಸಿಂಗ್

ಬಸವಕಲ್ಯಾಣದ: ಕುರಾನ್ ಕನ್ನಡ ಪ್ರವಚನದ ದಶಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 5:50 IST
Last Updated 14 ಡಿಸೆಂಬರ್ 2025, 5:50 IST
ಬಸವಕಲ್ಯಾಣದಲ್ಲಿ ಶುಕ್ರವಾರ ನಡೆದ ಕುರಾನ್ ಕನ್ನಡ ಪ್ರವಚನದ ದಶಮಾನೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಹಮ್ಮದ್ ಕುಂಞ ಮಾತನಾಡಿದರು
ಬಸವಕಲ್ಯಾಣದಲ್ಲಿ ಶುಕ್ರವಾರ ನಡೆದ ಕುರಾನ್ ಕನ್ನಡ ಪ್ರವಚನದ ದಶಮಾನೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಹಮ್ಮದ್ ಕುಂಞ ಮಾತನಾಡಿದರು   

ಬಸವಕಲ್ಯಾಣ: ‘ವಿವಿಧ ಧರ್ಮಗಳ ಉತ್ತಮ ಅಂಶಗಳ ಬಗ್ಗೆ ಪದೇ ಪದೇ ಕಾರ್ಯಕ್ರಮ ಆಯೋಜಿಸಬೇಕು. ಸತ್ಯವನ್ನು ಸತತವಾಗಿ ಹೇಳಿ ಅದಕ್ಕೆ ಬೆಲೆ ಬರುವಂತೆ ಮಾಡಬೇಕೇ ಹೊರತು ಸುಳ್ಳು ಹೇಳಿಹೇಳಿ ಅದನ್ನೇ ಸತ್ಯ ಎಂದು ಬಿಂಬಿಸಬಾರದು’ ಎಂದು ವಿಧಾನಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಹೇಳಿದ್ದಾರೆ.

ನಗರದ ತೇರು ಮೈದಾನದಲ್ಲಿನ ಸಭಾ ಭವನದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆಯಿಂದ ಶುಕ್ರವಾರ ಆಯೋಜಿಸಿದ್ದ ಮೂರು ದಿನಗಳ ಕುರಾನ್ ಕನ್ನಡ ಪ್ರವಚನದ ದಶಮಾನೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರತಿಯೊಂದು ಧರ್ಮಗ್ರಂಥದಲ್ಲಿ ಮಾನವ ಏಕತೆ, ಸಹೋದರತ್ವ, ಸಹಬಾಳ್ವೆಯ ಸಂದೇಶವಿದೆ. ದೇಶದ ಸಂವಿಧಾನದಲ್ಲೂ ಸಮಾನತೆ, ನ್ಯಾಯದ ಬಗ್ಗೆಯೇ ಹೇಳಲಾಗಿದೆ. ಆದ್ದರಿಂದ ಎಲ್ಲರೂ ಶಾಂತಿಯಿಂದ ಇರಬೇಕು’ ಎಂದರು.

ADVERTISEMENT

ಕರ್ನಾಟಕ ಉರ್ದು ಅಕಾಡೆಮಿಯ ಅಧ್ಯಕ್ಷ ಅಪ್ಜಲ್ ಉಲಮಾ ಮೊಹಮ್ಮದ್ ಅಲಿ ಕಾಜಿ ಮಾತನಾಡಿ, ‘ಕುರಾನ್ ಪ್ರವಚನ ಮಾನವೀಯ ಮೌಲ್ಯಗಳನ್ನು ಪಸರಿಸುವ ಸದುದ್ದೇಶ ಹೊಂದಿದೆ. ಜಾತಿ, ಧರ್ಮದ ಆಧಾರದಲ್ಲಿ ಭೇದಭಾವ ಸಲ್ಲದು’ ಎಂದರು.

ಕಲಬುರಗಿಯ ಫಾದರ್ ಸಂತೋಷ ಬಾಪು ಮಾತನಾಡಿ, ‘ಧರ್ಮಗಳ ಸಂದೇಶ ಮತ್ತು ತತ್ವದ ಬಗ್ಗೆ ಬರೀ ಮಾತನಾಡದೇ ಪಾಲಿಸಬೇಕು ಮತ್ತು ಅನ್ಯ ಧರ್ಮ ಹಾಗೂ ಅನ್ಯರ ವಿಚಾರಗಳನ್ನು ಗೌರವಿಸಬೇಕು’ ಎಂದರು.

ತಹಶೀಲ್ದಾರ್ ಶಿವಾನಂದ ಮೇತ್ರೆ ಮಾತನಾಡಿ, ‘ಎಲ್ಲರ ಸೌಖ್ಯ ಶಾಂತಿಯ ಉದ್ದೇಶದಿಂದ ವಿಶ್ವಸಂಸ್ಥೆ ಸಹ ಫೆಬ್ರವರಿಯಲ್ಲಿ ಸಾಮಾಜಿಕ ನ್ಯಾಯದ ದಿನ ಆಚರಿಸುತ್ತಿದೆ’ ಎಂದರು.

ಹುಲಸೂರ ಶಿವಾನಂದ ಸ್ವಾಮೀಜಿ, ಜುಲ್ಫೇಕಾರ್ ಅಹ್ಮದ್, ಅಸ್ಲಂ ಜನಾಬ್, ನೈಮೊದ್ದೀನ್ ಚಾಬೂಕಸವಾರ ಮಾತನಾಡಿದರು. ಬೇಲೂರ ಉರಿಲಿಂಗಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ, ಬ್ರಹ್ಮಕುಮಾರಿ ಈಶ್ವರೀಯ ಕೇಂದ್ರದ ಸರಸ್ವತಿ, ಕಾಡಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಬಾಬು ಹೊನ್ನಾನಾಯಕ್, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಅರ್ಜುನ ಕನಕ, ಕಾರ್ಯಕ್ರಮ ಸಮಿತಿ ಅಧ್ಯಕ್ಷ ಡಾ.ಜಿ.ಎಸ್.ಭುರಳೆ, ಕಾರ್ಯಾಧ್ಯಕ್ಷ ಮುಜಾಹಿದಪಾಶಾ ಕುರೇಶಿ ಮತ್ತಿತರರು ಉಪಸ್ಥಿತರಿದ್ದರು.

ಬಸವಕಲ್ಯಾಣದಲ್ಲಿ ಶುಕ್ರವಾರ ನಡೆದ ಕುರಾನ್ ಕನ್ನಡ ಪ್ರವಚನದ ದಶಮಾನೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರು

ಧರ್ಮಾಧಾರದ ಸಮರ್ಥನೆಯೇ ಕೋಮುವಾದ

ಪ್ರವಚನಕಾರ ಮುಹಮ್ಮದ್ ಕುಂಞ ಮಾತನಾಡಿ ‘ರಾಷ್ಟ್ರೀಯತೆ ಭಾಷೆ ಜಾತಿ ಧರ್ಮದ ಆಧಾರದಲ್ಲಿ ಸಮರ್ಥನೆ ನೀಡುವುದೇ ಕೋಮುವಾದ. ಇದನ್ನು ಕುರಾನ್ ಒಪ್ಪುವುದಿಲ್ಲ. ಬಡವ ಶ್ರೀಮಂತ ಎನ್ನದೇ ನ್ಯಾಯನಿಷ್ಠನಾಗಿರುವುದೇ ನಿಜಧರ್ಮ’ ಎಂದರು. ‘ಅನೇಕ ಕಡೆ ಪಕ್ಷಪಾತ ನಡೆಸಿ ನ್ಯಾಯ ನಿರಾಕರಿಸಲಾಗುತ್ತಿದೆ. ಮಸೀದಿ ಚರ್ಚ್ ಮಂದಿರ ಕಟ್ಟುವುದೇ ಧರ್ಮ ಎಂದು ಹೇಳಿ ವಿವಾದ ಹುಟ್ಟಿಸಲಾಗುತ್ತಿದೆ. ಆದ್ದರಿಂದಲೇ ವಿಶ್ವದಲ್ಲಿ ಯುದ್ಧಗಳು ನಡೆಯುತ್ತಿವೆ. ಅನ್ಯಾಯಕ್ಕೆ ಜನರು ಭಯಗೊಳ್ಳುತ್ತಿದ್ದಾರೆ. ಅಸಹನೆ ಅಸಮಾಧಾನ ಹೆಚ್ಚುತ್ತಿದೆ. ಪರಿಸರ ಸಂರಕ್ಷಣೆಗೂ ಕುರಾನ್ ಮಹತ್ವ ನೀಡಿದೆ. ನೀರು ಗಾಳಿ ಉತ್ತಮವಾಗಿ ಇರಬೇಕು. ಯಾವುದೇ ಕಂಪನಿ ನಡೆಸಲು ನೀರು ಅಗತ್ಯ. ಆದರೆ ವಿಶ್ವದಲ್ಲಿನ ಯಾವ ಕಂಪನಿಯೂ ನೀರು ಉತ್ಪಾದಿಸುವುದಿಲ್ಲ ಎಂಬುದು ತಿಳಿದಿರಲಿ. ಉತ್ತಮವಾದುದನ್ನು ಪಡೆಯುವುದಕ್ಕೆ ಚಿನ್ನದ ಮೊಟ್ಟೆ ಕೊಡುವ ಕೋಳಿಯ ಹೊಟ್ಟೆ ಕೊಯ್ದಂತೆ ಒಳ್ಳೆಯದನ್ನು ನಾಶಪಡಿಸುತ್ತಿರುವುದು ವಿಷಾದಕರ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.