ADVERTISEMENT

ಬಸವಕಲ್ಯಾಣ ಉಪ ಚುನಾವಣೆ: ಬಿಜೆಪಿ, ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ

ಗೊಂದಲದಲ್ಲಿ ಟಿಕೆಟ್‌ ಆಕಾಂಕ್ಷಿಗಳು

ಚಂದ್ರಕಾಂತ ಮಸಾನಿ
Published 17 ಮಾರ್ಚ್ 2021, 19:30 IST
Last Updated 17 ಮಾರ್ಚ್ 2021, 19:30 IST
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ನಕ್ಷೆ
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ನಕ್ಷೆ   

ಬೀದರ್: ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆ ಚುನಾವಣೆ ಅಧಿಸೂಚನೆ ಪ್ರಕಟವಾದರೂ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಕ್ಷೇತ್ರದ ಅಭ್ಯರ್ಥಿಗಳ ಬಗ್ಗೆ ಗೊಂದಲ ಮುಂದುವರಿದಿದೆ. ಎರಡೂ ಪಕ್ಷಗಳಲ್ಲಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಟಿಕೆಟ್‌ ಪಡೆಯಲಿರುವ ಅಭ್ಯರ್ಥಿಗಳ ಹೆಸರು ಇನ್ನೂ ನಿಗೂಢವಾಗಿಯೇ ಇದೆ.

ಕಾಂಗ್ರೆಸ್‌ನಲ್ಲಿ ಬಿ.ನಾರಾಯಣರಾವ್ ಪತ್ನಿ ಮಲ್ಲಮ್ಮ, ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ಚಂದ್ರಶೇಖರ ಪಾಟೀಲ, ಶಾಂತಪ್ಪ ಪಾಟೀಲ, ಬಸವರಾಜ ಬುಳ್ಳಾ, ಆನಂದ ದೇವಪ್ಪ. ಶಿವರಾಜ ನರಶೆಟ್ಟೆ ಅವರ ಹೆಸರುಗಳು ಮುಂಚೂಣಿಯಲ್ಲಿವೆ.

ಬಿಜೆಪಿಯಲ್ಲಿ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ವಿಜಯೇಂದ್ರ, ವಿಜಯೇಂದ್ರ ಪತ್ನಿ ಕಲಬುರ್ಗಿ ಮೂಲದ ಶಾಲಿನಿ,
ಸೂರ್ಯಕಾಂತ ನಾಗಮಾರಪಳ್ಳಿ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಶರಣು ಸಲಗರ, ಆರ್‌ಎಸ್‌ಎಸ್‌ನ ಸಂಜಯ ಪಟವಾರಿ, ಉಮೇಶ ಬೀರಬಿಟ್ಟೆ, ಗುಂಡು ರೆಡ್ಡಿ, ಪ್ರದೀಪ ವಾತಡೆ, ಪದ್ಮಾಕರ್ ಪಾಟೀಲ ಮೊದಲಾದವರ ಹೆಸರುಗಳು ಕೇಳಿ ಬರುತ್ತಿವೆ.

ADVERTISEMENT

ಬಸವಕಲ್ಯಾಣದಲ್ಲಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿಜಯೇಂದ್ರ ಅವರು ಈಚೆಗೆ ನಡೆಸಿದ್ದ ಕಾರ್ಯಕರ್ತರ ಸಮಾವೇಶದ ಸಂಪೂರ್ಣ ವೆಚ್ಚವನ್ನು ಪಕ್ಷವೇ ನೋಡಿಕೊಂಡಿದೆ. ಆಕಾಂಕ್ಷಿಗಳಿಗೆ ಯಾವುದೇ ರೀತಿಯ ಹಣ ಖರ್ಚು ಮಾಡಲು ಅವಕಾಶ ಕಲ್ಪಿಸಿಲ್ಲ. ಹೊರಗಿನ ವ್ಯಕ್ತಿ ಸ್ಪರ್ಧಿಸಲಿದ್ದಾರೆ ಎನ್ನುವ ಸುಳಿವು ದೊರೆತ ಕಾರಣ ಟಿಕೆಟ್‌ ಆಕಾಂಕ್ಷಿಗಳಾದ ಸ್ಥಳೀಯ ಮುಖಂಡರು ತೊಳಲಾಟದಲ್ಲಿದ್ದಾರೆ.

ಪ್ರಸ್ತುತ ಕಾಂಗ್ರೆಸ್‌ನ 22 ಹಾಗೂ ಬಿಜೆಪಿಯ 16 ಮುಖಂಡರು ಪಕ್ಷದ ಟಿಕೆಟ್‌ ಕೇಳಿದ್ದಾರೆ. ಜೆಡಿಎಸ್‌ ಇನ್ನೂ ಅಭ್ಯರ್ಥಿಯ ಶೋಧದಲ್ಲಿ ಇದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಟಿಕೆಟ್‌ ಸಿಗದ ಅಭ್ಯರ್ಥಿಗಳು ಕೊನೆಯ ಕ್ಷಣದಲ್ಲಿ ಜೆಡಿಎಸ್‌ ನಿಂದ ಸ್ಪರ್ಧಿಸಿದರೆ ಅಚ್ಚರಿ ಇಲ್ಲ ಎಂದು ಜೆಡಿಎಸ್‌ ಕಾರ್ಯಕರ್ತರೇ ಆಡಿಕೊಳ್ಳುತ್ತಿದ್ದಾರೆ.

ಹೆಚ್ಚಲಿದೆ ಸ್ಪರ್ಧಿಗಳ ಸಂಖ್ಯೆ: 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸೇರಿ ಒಟ್ಟು 12 ಜನ ಸ್ಪರ್ಧಿಸಿದ್ದರು. ಈ ಬಾರಿ ಸ್ಪರ್ಧಿಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

2018ರ ಚುನಾವಣೆಯಲ್ಲಿ ಬಿ.ನಾರಾಯಣರಾವ್ (ಕಾಂಗ್ರೆಸ್). ಮಲ್ಲಿಕಾರ್ಜುನ ಖೂಬಾ (ಬಿಜೆಪಿ), ಪಿ.ಜಿ.ಆರ್.ಸಿಂಧ್ಯ (ಜೆಡಿಎಸ್), ದೀಪಕ್ ಮಾಲಗಾರ(ಎಎಪಿ), ರಾಮ ಜಾಧವ (ಎನ್.ಸಿ.ಪಿ), ಅಜಿಂಕ್ಯ ಮುಳೆ (ಬಹುಜನ ಮುಕ್ತಿ ಮೋರ್ಚಾ), ಪುರುಷೋತ್ತಮ ಜಾಧವ (ಎಐಎಂಇಪಿ), ಅನಿಲಕುಮಾರ ರಾಠೋಡ್ (ಭಾರತೀಯ ಬಹುಜನ ಕ್ರಾಂತಿ ಪಕ್ಷ) ಹಾಗೂ ನಾಲ್ವರು ಪಕ್ಷೇತರರು ಸೇರಿ 12 ಜನ ಕಣದಲ್ಲಿದ್ದರು.

ಕಾಂಗ್ರೆಸ್‌ನ ನಾರಾಯಣರಾವ್‌ ಅವರು 61,425 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮಲ್ಲಿಕಾರ್ಜುನ ಖೂಬಾ ಅವರನ್ನು 17,272 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ಅಹಿಂದ ತಂತ್ರ ಇಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡಿತ್ತು. ಈ ಅಂಶವನ್ನು ಮಾನದಂಡವಾಗಿಟ್ಟುಕೊಂಡೇ ಕೆಲವರು ಸ್ಪರ್ಧಿಸಲು ಮುಂದಾಗಿದ್ದಾರೆ.

2.38 ಲಕ್ಷ ಮತದಾರರು: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ 1,24,530 ಪುರುಷರು ಹಾಗೂ 1,14,325 ಮಹಿಳೆಯರು ಸೇರಿ ಒಟ್ಟು 2,38,855 ಮತದಾರರು ಇದ್ದಾರೆ. ಮಾರ್ಚ್‌ ಅಂತ್ಯದ ವರೆಗೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಬಸವಕಲ್ಯಾಣದ ಮಿನಿ ವಿಧಾನಸೌಧ ಕಟ್ಟಡದಲ್ಲಿ ಮತದಾರರ ಮಾಹಿತಿ ಕೇಂದ್ರವನ್ನೂ (ಮೊಬೈಲ್‌ ಸಂಖ್ಯೆ: 9480347656) ತೆರೆಯಲಾಗಿದೆ.

ಕ್ಷೇತ್ರದಲ್ಲಿ 264 ಮೂಲ ಮತಗಟ್ಟೆಗಳು ಹಾಗೂ 81 ಅಕ್ಷಿಲರಿ ಮತಗಟ್ಟೆಗಳು ಸೇರಿ ಒಟ್ಟು 345 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಅಧಿಕಾರಿಯನ್ನಾಗಿ ಜಿಲ್ಲಾ ಪಂಚಾಯಿತಿ ಸಿಇಒ ಜಹೀರಾ ನಸೀಮ್‌ ಅವರನ್ನು ನೇಮಕ ಮಾಡಲಾಗಿದೆ.

ಏಪ್ರಿಲ್‌ 4ರಂದು ಚುನಾವಣಾ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಹಿನ್ನೆಲೆಯನ್ನು ಅವಲೋಕಿಸಿ ಜಿಲ್ಲಾ ಚುನಾವಣಾ ಅಧಿಕಾರಿ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.