
ಬಸವಕಲ್ಯಾಣ: ಎಸ್‌ಸಿಪಿ ಹಾಗೂ ಇತರೆ ಯೋಜನೆಗಳ ಅನುದಾನ ದುರ್ಬಳಕೆ ಮಾಡಿರುವ ಪೌರಾಯುಕ್ತ ರಾಜೀವ ಬಣಕಾರ ಅವರ ಅವ್ಯವಹಾರದ ಬಗ್ಗೆ ತನಿಖೆ ಕೈಗೊಂಡು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಇಲ್ಲಿನ ನಗರಸಭೆ ಕಚೇರಿ ಎದುರು ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಧರಣಿ ನಡೆಸಿದರು. ಬಳಿಕ ತಹಶೀಲ್ದಾರ್ ರಮೇಶ ಬಾಬು ಅವರಿಗೆ ಮನವಿ ಸಲ್ಲಿಸಿದರು.
ತ್ರಿಪುರಾಂತದ ಜಮೀನಿನಲ್ಲಿ ಅಕ್ರಮ ಖಾತೆ ನೋಂದಣಿ ಮಾಡಿದ್ದು ಕಂಡು ಬಂದಿದೆ. ಇಲ್ಲಿನ ಸರ್ವೆ ನಂ.266 ಜಾಗವು ಸರ್ಕಾರದ ಹೆಸರಿನಲ್ಲಿ ಇದ್ದರೂ ಇ-ಖಾತಾ ಮಾಡಿರುತ್ತಾರೆ. 15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಕೆಲಸ ನಿರ್ವಹಿಸದೆ ಹಣ ಪಡೆದುಕೊಂಡಿದ್ದಾರೆ. ಮುಖ್ಯ ರಸ್ತೆ ದುರಸ್ತಿ ಹೆಸರಲ್ಲಿ ಅನುದಾನ ದುರ್ಬಳಕೆ ಆಗಿದೆ. ಕೊಳವೆ ಬಾವಿ ದುರುಸ್ತಿಗೊಳಿಸದೆ ಬೋಗಸ್ ಬಿಲ್ ಪಡೆದಿರುತ್ತಾರೆ. ಅವರ ಕುಮ್ಮಕ್ಕಿನಿಂದ ಸಾರ್ವಜನಿಕ ಉದ್ಯಾನಗಳನ್ನು ಅತಿಕ್ರಮಿಸಲಾಗಿದೆ ಎಂದು ಮನವಿಯಲ್ಲಿ ದೂರಿದ್ದಾರೆ.
ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನ, ಅಂಗವಿಕಲರ ಅನುದಾನದ ದುರ್ಬಳಕೆಯೂ ಆಗಿದೆ. ಈ ಬಗ್ಗೆ ವಿಚಾರಿಸಿದ ಪಕ್ಷದ ರಾಜ್ಯ ಕಾರ್ಯದರ್ಶಿ ಜ್ಞಾನೇಶ್ವರ ಸಿಂಗಾರೆ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಬೆದರಿಸುತ್ತಿದ್ದಾರೆ. ಅನೇಕ ಓಣಿಗಳಲ್ಲಿ ರಸ್ತೆ, ಚರಂಡಿಗಳಿಲ್ಲ. ಇಂಥ ಸಮಸ್ಯೆ ಬಗೆಹರಿಸಲು ವಿನಂತಿಸಿದರೂ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಶೀಘ್ರದಲ್ಲಿ ಪೌರಾಯುಕ್ತರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.
ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರ ಫುಲೆ, ಮುಖಂಡರಾದ ಅಶೋಕ ಮಂಠಾಳಕರ, ಜ್ಞಾನೇಶ್ವರ ಸಿಂಗಾರೆ, ಕಪಿಲ್ ಗೋಡಬೋಲೆ, ಸಚಿನ ಗಿರಿ, ರಮೇಶ ರಾಠೋಡ, ಸಚಿನ ಕಾಂಬಳೆ, ಮಕ್ಬುಲ್ ಸಾಬ್, ರವಿ ಉದಾತೆ, ಮಹಾದೇವ ಗಾಯಕವಾಡ, ಚಂದ್ರಶೀಲ ಗಾಯಕವಾಡ ಹಾಗೂ ಅನೇಕ ಮಹಿಳೆಯರು ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.