ಬಸವಕಲ್ಯಾಣ: ‘ನಗರಸಭೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು ದುಡ್ಡು ನೀಡಿದವರ ಕೆಲಸ ಮಾತ್ರ ಆಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ನಿರ್ಲಕ್ಷಿಸಲಾಗುತ್ತಿದೆ’ ಎಂದು ಸದಸ್ಯ ಮಲ್ಲಿಕಾರ್ಜುನ ಬೊಕ್ಕೆ ಆರೋಪಿಸಿದರು.
ನಗರದ ನಾರಾಯಣಪುರ ಕ್ರಾಸ್ ಹತ್ತಿರದ ನಗರಸಭೆ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
‘ನನ್ನ ಕೆಲಸ ಅಷ್ಟೇ ಅಲ್ಲ, ಉಪಾಧ್ಯಕ್ಷರು ಹೇಳಿರುವುದಕ್ಕೂ ಅಧಿಕಾರಿಗಳು ಮತ್ತು ಸಿಬ್ಬಂದಿ ಕಿಮ್ಮತ್ತು ಕೊಡುತ್ತಿಲ್ಲ. ಮೊದಲು ಆಡಳಿತ ಸುಧಾರಿಸಬೇಕಾಗಿದೆ. ಹಲವಾರು ಓಣಿಗಳಲ್ಲಿ ನಳಕ್ಕೆ ನೀರು ಬರುತ್ತಿಲ್ಲ. ಸ್ವಚ್ಛತೆ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಸಭೆಗಳಲ್ಲಿ ಹೇಳುವುದಕ್ಕೆ ಬಿಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯ ರವೀಂದ್ರ ಬೋರೋಳೆ ಮಾತನಾಡಿ, ‘ನಗರದ ರಸ್ತೆಗಳಲ್ಲಿ ತಗ್ಗುಗುಂಡಿಗಳು ಬಿದ್ದಿದ್ದರಿಂದ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಈ ಬಗ್ಗೆ ಟೆಂಡರ್ ಅಹ್ವಾನಿಸಿದರೂ ಕೆಲಸ ಏಕೆ ನಡೆದಿಲ್ಲ ಎಂಬುದು ಗೊತ್ತಾಗುತ್ತಿಲ್ಲ. ನೀರು ಸರಬರಾಜು ಯೋಜನೆಯ ಲೋಪದೋಷಗಳನ್ನು ಸರಿಪಡಿಸಬೇಕು. ಸಂಬಂಧವಿಲ್ಲದ ವಿಷಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಬಾರದು’ ಎಂದರು.
ನಿರ್ಮಲಾ ಶಿವಣಕರ್ ಮಾತನಾಡಿ, ‘ನಗರಸಭೆಯಲ್ಲಿನ ಇಂಧನ ಬಳಕೆಯ ಲೆಕ್ಕಪತ್ರ ಪರಿಶೋಧನೆಗೆ ಸಮಿತಿ ರಚಿಸಿ ಸಭೆ ನಡೆಸಲಾಗಿಲ್ಲ. ಅವ್ಯವಹಾರದ ಆರೋಪವಿದ್ದರೂ ಹಾಗೆಯೇ ಹಣ ಖರ್ಚು ಮಾಡಲಾಗುತ್ತಿದೆ’ ಎಂದರು.
ರಾಮ ಜಾಧವ ಮಾತನಾಡಿ, ‘ನಳದ ಸಂಪರ್ಕ ಪಡೆದುಕೊಳ್ಳುವುದಕ್ಕೆ ಬರೀ ₹2000 ನಿಗದಿಗೊಳಿಸಿ, ಪ್ರತಿ ವಾರ್ಡ್‌ನಲ್ಲಿ ಅಭಿವೃದ್ಧಿಗಾಗಿ ₹95 ಸಾವಿರದ ಬದಲಾಗಿ ₹2ಲಕ್ಷ ನೀಡಬೇಕು. ಹಲವು ಕಡೆ ಪೈಪ್ ಲೈನ್ ಇಲ್ಲದೆ ನೀರು ಸರಬರಾಜು ಆಗುತ್ತಿಲ್ಲ. ಈ ಬಗ್ಗೆ ಗಮನಹರಿಸಬೇಕು’ ಎಂದು ಆಗ್ರಹಿಸಿದರು.
ಅಧ್ಯಕ್ಷ ಸಗೀರುದ್ದೀನ್, ಉಪಾಧ್ಯಕ್ಷೆ ಲಕ್ಷ್ಮಿಬಾಯಿ ಭೀಮಶಾ ಪುಲೆ, ಸ್ಥಾಯಿ ಸಮಿತಿ ಅಧ್ಯಕ್ಷ ಅಮ್ಜದ್ ನವರಂಗ, ಪೌರಾಯುಕ್ತ ರಾಜೀವ ಬಣಕಾರ್ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು. ಸದಸ್ಯರಾದ ಅಬ್ದುಲ್ ಗಫಾರ್ ಪೇಶಮಾಮ್, ಮೀನಾ ರಾಮ ಗೋಡಬೋಲೆ, ಪವನ ಗಾಯಕವಾಡ, ಇಜಾಜ್ ಹುಸೇನಸಾಬ್, ದೀಪಕ ಗುಡ್ಡಾ, ಖದೀರುದ್ದೀನ್, ಯುವರಾಜ ಭೆಂಡೆ, ಈಶ್ವರ ಸೋನಾರ, ಸಮೀಯೊದ್ದೀನ್, ಶಾಂತಮ್ಮ ಲಾಡೆ, ಸಂಗೀತಾ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ನಗರಸಭೆಯಲ್ಲಿನ ಹುದ್ದೆಗಳು ಖಾಲಿ ಇರುವುದರಿಂದ ಕೆಲ ಕಾರ್ಯಗಳು ನಡೆದಿಲ್ಲ. ಸಮರ್ಪಕ ವಿದ್ಯುತ್ ಪೊರೈಕೆ ಇಲ್ಲದ್ದರಿಂದ ಪ್ರತಿದಿನ ನೀರು ಪೊರೈಸಲಾಗುತ್ತಿಲ್ಲ.– ರಾಜೀವ ಡಿ.ಬಣಕಾರ, ಪೌರಾಯುಕ್ತ
ವಿವಿಧ ವೃತ್ತ ಸ್ಥಾಪನೆ: ಗದ್ದಲ
ಸಭೆ ಗದ್ದಲದ ಗೂಡಾಗಿತ್ತು ಮೇಜು ಕುಟ್ಟಲಾಯಿತು. ಕೈಕೈ ಮಿಲಾಯಿಸುವ ಹಂತಕ್ಕೂ ವಾಗ್ವಾದ ನಡೆಯಿತು. ಸಸ್ತಾಪುರ ಬಂಗ್ಲಾ ಅಟೋನಗರದ ಮಸೀದಿ ಹತ್ತಿರ ಟಿಪ್ಪು ಸುಲ್ತಾನ ವೃತ್ತ ನಾರಾಯಣಪುರ ರಸ್ತೆ ಗೋಡಬೋಲೆ ಕಾಂಪ್ಲೆಕ್ಸ್ ಎದುರಲ್ಲಿ ಮಾತೆ ರಮಾಬಾಯಿ ವೃತ್ತ ಖಾನಾಪುರ ರಸ್ತೆ ಕ್ರಾಸ್ ನಲ್ಲಿ ರಾಜಾಬಾಗಸವಾರ ಮತ್ತು ಶರಣ ಹಡಪದ ಅಪ್ಪಣ್ಣ ವೃತ್ತ ಗೋಲಚೌಡಿ ಹತ್ತಿರ ನಾರಾಯಣಗುರು ವೃತ್ತ ಸ್ಥಾಪನೆಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವ ಸಂಬಂಧ ಚರ್ಚೆಯಾಯಿತು.
ಭಿನ್ನಾಭಿಪ್ರಾಯಗಳು ವ್ಯಕ್ತವಾಗಿ ಯಾರು ಏನು ಹೇಳುತ್ತಿದ್ದಾರೆ ಎಂಬುದೇ ಕೇಳಿಸದಂತಾಗಿತ್ತು. ಸದಸ್ಯೆ ನಿರ್ಮಲಾ ಶಿವಣಕರ್ ಮಾತನಾಡಿ ‘ಇದು ಬಸವಾದಿ ಶರಣರ ನಾಡು ಇರುವುದರಿಂದ ನಗರ ಪ್ರವೇಶದ ಸ್ಥಳದಲ್ಲಿ ಚನ್ನಬಸವಣ್ಣನವರ ವೃತ್ತವಿರಲಿ ಟಿಪ್ಪು ವೃತ್ತವನ್ನು ಬೇರೆಡೆ ಮಾಡಿ ಎಂದು ಒತ್ತಾಯಿಸಿದರು.
‘ಖಾನಾಪುರ ರಸ್ತೆಯಲ್ಲಿನ ಒಂದು ವೃತ್ತಕ್ಕೆ ರಾಜಾ ಬಾಗಸವಾರ ವೃತ್ತ ಎಂದು ಹೆಸರಿಸಲು ಅಭ್ಯಂತರವಿಲ್ಲ. ಆದರೆ ಇನ್ನೊಂದಕ್ಕೆ ಶರಣ ಹಡಪದ ಅಪ್ಪಣ್ಣ ವೃತ್ತ ಎಂದು ನಾಮಕರಣ ಮಾಡಿ’ ಎಂದು ಮಲ್ಲಿಕಾರ್ಜುನ ಬೊಕ್ಕೆ ಪಟ್ಟು ಹಿಡಿದಿದ್ದರು.
ನಾರಾಯಣ ಗುರು ಅವರ ವೃತ್ತ ಸ್ಥಾಪನೆಯ ಸ್ಥಳವನ್ನು ಬದಲಾಯಿಸಬೇಕು. ಎಲ್ಲ ವೃತ್ತಗಳನ್ನು ಕಾನೂನಿನ ಪ್ರಕಾರ ಸ್ಥಾಪಿಸಬೇಕು ಎಂದು ರವೀಂದ್ರ ಬೋರೋಳೆ ವಿನಂತಿಸಿದರು.
ಶಹಾಜಹಾನಾ ಬೇಗಂ ಮಾತನಾಡಿ ‘ನಾರಾಯಣಪುರ ಕ್ರಾಸ್ ನಲ್ಲಿ ಮಾಜಿ ಶಾಸಕ ಬಿ.ನಾರಾಯಣರಾವ್ ವೃತ್ತ ಸ್ಥಾಪಿಸುವ ಮನವಿ ಸಲ್ಲಿಸಲಾಗಿತ್ತು. ಈ ಬಗ್ಗೆಯೂ ನಿರ್ಣಯ ತೆಗೆದುಕೊಳ್ಳಬೇಕು’ ಎಂದು ಕೇಳಿಕೊಂಡರು. ಈ ಸಂದರ್ಭದಲ್ಲಿ ಸದಸ್ಯರು ಕೈ ಎತ್ತುವ ಮೂಲಕವೂ ತಮ್ಮ ಅಭಿಪ್ರಾಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.