ADVERTISEMENT

ಬಸವಕಲ್ಯಾಣ | ‘ಸಂಘಟನೆಗಳು ಒಗ್ಗಟ್ಟಿನಿಂದ ದೌರ್ಜನ್ಯ ತಡೆಯಿರಿ’

ವಿರಾಟ ಹಿಂದೂ ಸಮ್ಮೇಳನದಲ್ಲಿ ತಡೋಳಾ ರಾಜೇಶ್ವರ ಶಿವಾಚಾರ್ಯರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 8:04 IST
Last Updated 12 ಜನವರಿ 2026, 8:04 IST
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಹಿಂದೂ ಸಮ್ಮೇಳನದ ಮೆರವಣಿಗೆಯಲ್ಲಿ ಮಠಾಧೀಶರು ಮತ್ತು ಗಣ್ಯರು ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಹಿಂದೂ ಸಮ್ಮೇಳನದ ಮೆರವಣಿಗೆಯಲ್ಲಿ ಮಠಾಧೀಶರು ಮತ್ತು ಗಣ್ಯರು ಪಾಲ್ಗೊಂಡಿದ್ದರು   

ಬಸವಕಲ್ಯಾಣ: ‘ಬಜರಂಗದಳ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತಿತರೆ ಸಂಘಟನೆಯವರು ಶಕ್ತಿ ಸಾಮರ್ಥ್ಯ, ಒಗ್ಗಟ್ಟಿನಿಂದ ದೌರ್ಜನ್ಯ ತಡೆಗೆ ಪ್ರಯತ್ನಿಸಬೇಕು. ಗೋ ರಕ್ಷಣೆ, ಲವ್ ಜಿಹಾದ್ ವಿಷಯದಲ್ಲಿ ಒಬ್ಬೊಬ್ಬರೆ ಹೋರಾಟಕ್ಕೆ ಮುಂದಾದರೆ ಯಶಸ್ಸು ದೊರಕದು’ ಎಂದು ತಡೋಳಾ ರಾಜೇಶ್ವರ ಶಿವಾಚಾರ್ಯ ಹೇಳಿದರು.

ನಗರದ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಭಾನುವಾರ ಸಂಜೆ ನಡೆದ ವಿರಾಟ್ ಹಿಂದೂ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಜಾತಿಯತೆ ಇಲ್ಲವೇ ಇಲ್ಲ. ಆದರೂ ಕೆಲವರು ಇದೇ ಎಂಬಂತೆ ಬಿಂಬಿಸಿ ಸಮಾಜದಲ್ಲಿ ಒಡಕು ಮೂಡಿಸುತ್ತಿದ್ದಾರೆ. ಸಮಾಜ ಸುಧಾರಣೆಗೆ ಉತ್ತಮ ಮಾರ್ಗ ತೋರುವ ಮುಂದಾಳುಗಳ ಕೊರತೆ ಮಾತ್ರ ಇದೆ. ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯವಿದೆ. ಎಲ್ಲರೂ ಹಿಂದೂಗಳೇ ಆಗಿದ್ದೇವೆ. ಆದರೂ ಕೆಲವರು ಹಿಂದೂಗಳು ಅಲ್ಲ ಎಂಬ ಹೇಳಿಕೆ ನೀಡಿ ಜನರ ದಾರಿ ತಪ್ಪಿಸುತ್ತಿರುವುದು ಸಮಂಜಸ ಅಲ್ಲ’ ಎಂದರು.

ಸಮಾಜ ಕಾರ್ಯಕರ್ತ ಕೃಷ್ಣಾ ಜೋಶಿ ಕಲಬುರಗಿ ಮಾತನಾಡಿ, ‘ಒಳ ಹೊರಗಿನ ಐದು ನ್ಯೂನ್ಯತೆಗಳನ್ನು ಸರಿಪಡಿಸಬೇಕಾಗಿದೆ. ನಾಗರಿಕ ಸಮಸ್ಯೆಗಳ ಪರಿಹಾರ ಕಂಡುಕೊಳ್ಳುವ ಜೊತೆಗೆ ಸ್ವಭಾಷೆ, ಸ್ವದೇಶಿ ಉಡುಪು, ಸ್ವದೇಶಿ ಆಹಾರದ ಬಳಕೆ ಆಗಬೇಕು. ಸ್ವಧರ್ಮದ ಬಗ್ಗೆ ಅಭಿಮಾನವಿರಲಿ. ಅನ್ಯ ಧರ್ಮೀಯರ ವಿವಿಧ ರೀತಿಯ ದಬ್ಬಾಳಿಕೆ ತಡೆಯುವುದಕ್ಕೆ ಪ್ರಯತ್ನಿಸಬೇಕಾಗಿದೆ' ಎಂದರು.

ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ‘ಒಳ ಪಂಗಡ, ಜಾತಿಯ ವ್ಯವಸ್ಥೆ ಮರೆತು ಐಕ್ಯತೆ ಮೂಡದಿದ್ದರೆ ಹಿಂದೂಗಳಿಗೆ ಮುಂದೊಂದುದಿನ ದೊಡ್ಡ ಗಂಡಾಂತರ ಎದುರಾಗುವುದು ನಿಶ್ಚಿತ. ಸಮಾಜ ಜಾಗೃತಿಗೆ ಇಂಥ ಸಮಾವೇಶಗಳು ಅತ್ಯಗತ್ಯ’ ಎಂದರು.

ಆಯೋಜನಾ ಸಮಿತಿ ಅಧ್ಯಕ್ಷ ಡಾ.ಬಸವರಾಜ ಸ್ವಾಮಿ ತ್ರಿಪುರಾಂತ, ಮಹಿಳಾ ಘಟಕದ ಅಧ್ಯಕ್ಷೆ ಡಾ.ಜ್ಯೋತಿ ಹಂಚಾಟೆ, ಬಜರಂಗದಳದ ಅಧ್ಯಕ್ಷ ರವಿ ನಾವದ್ಗೇಕರ್, ಡಾ.ಧನರಾಜ ಚಂದನಕೆರೆ, ಜ್ಯೋತಿ ತೂಗಾವೆ ಮಾತನಾಡಿದರು.

ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಹಿಂದೂ ಸಮ್ಮೇಳನದ ಮೆರವಣಿಗೆಯಲ್ಲಿ ಮಕ್ಕಳು ವಿವಿಧ ವೇಷ ಧರಿಸಿ ಪಾಲ್ಗೊಂಡಿದ್ದರು

ಬೃಹತ್ ಮೆರವಣಿಗೆ ವಿರಾಟ ಹಿಂದೂ ಸಮ್ಮೇಳನದ ಅಂಗವಾಗಿ ಕೋಟೆಯಿಂದ ಮುಖ್ಯ ರಸ್ತೆಯ ಮೂಲಕ ಕಾರ್ಯಕ್ರಮದ ವೇದಿಕೆಯ ಸ್ಥಳದವರೆಗೆ ಭಾರತ ಮಾತೆಯ ಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಎಲ್ಲರೂ ಕೇಸರಿ ಟವೆಲ್ ಕೊರಳಲ್ಲಿ ಹಾಕಿಕೊಂಡು ಅಂಥದ್ದೇ ಬಣ್ಣದ ಟೊಪ್ಪಿಗೆ ಉಟ್ಟುಕೊಂಡಿದ್ದರು. ಭಗವಾ ಧ್ವಜಗಳನ್ನು ಹಿಡಿದಿದ್ದರು. ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಡೊಳ್ಳುಕುಣಿತ ಭಜನಾ ತಂಡ ಕೋಲಾಟ ಲಂಬಾಣಿ ನೃತ್ಯದ ತಂಡ ಹಲಿಗೆ ವಾದನ ಲೇಜಿಮ್ ತಂಡಗಳು ಪಾಲ್ಗೊಂಡಿದ್ದವು. ಮಕ್ಕಳು ವಿವಿಧ ವೇಷ ಧರಿಸಿ ಪಾಲ್ಗೊಂಡಿದ್ದರು. ಬಸವೇಶ್ವರ ವೃತ್ತ ಭವಾನಿ ದೇವಸ್ಥಾನ ಮತ್ತಿತರೆಡೆ ಮೆರವಣಿಗೆಯ ಮೇಲೆ ಪುಷ್ಪಗಳನ್ನು ಸುರಿಸಿ ಸ್ವಾಗತಿಸಲಾಯಿತು. ಶಾಸಕ ಶರಣು ಸಲಗರ ಮತ್ತಿತರೆ ಗಣ್ಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.