ಬಸವಕಲ್ಯಾಣ ನಗರದ ತ್ರಿಪುರಾಂತ ಕೆರೆಯಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿದ ಬಸವಣ್ಣನವರ ಮತ್ತು ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯ ನೀಲನಕ್ಷೆ
ಬಸವಕಲ್ಯಾಣ: ನಗರದ ತ್ರಿಪುರಾಂತ ಕೆರೆ ದಂಡೆಯಲ್ಲಿನ ನಿಜಶರಣ ಅಂಬಿಗರ ಚೌಡಯ್ಯನವರ ಗವಿ ಅಸ್ತವ್ಯಸ್ತವಾಗಿದೆ. ಕೆರೆಯಲ್ಲಿ ನಿರ್ಮಿಸುತ್ತಿದ್ದ ಬಸವಣ್ಣನವರ ಮತ್ತು ಚೌಡಯ್ಯನವರ ಮೂರ್ತಿ ಕಾರ್ಯ ಸ್ಥಗಿತಗೊಂಡಿದೆ.
ನಗರ ಪ್ರವೇಶಿಸುವಾಗ ತ್ರಿಪುರಾಂತ ಸೇತುವೆಗಿಂತ ಮೊದಲು ಪೂರ್ವಕ್ಕೆ ಚೌಡಯ್ಯನವರ ಗವಿಯಿದೆ. ಎರಡು ಕಮಾನು ಮಾದರಿಯ ದ್ವಾರಗಳನ್ನು ದಾಟಿದಾಗ ತಗ್ಗಿನಲ್ಲಿರುವ ಈ ಸ್ಥಳವನ್ನು ತಲುಪಬಹುದು. ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಇಲ್ಲಿನ ಎಲ್ಲ ಅಭಿವೃದ್ಧಿ ಕಾರ್ಯ ನಡೆದಿದೆ. ಗವಿಯೊಳಗೆ ಸಿಮೆಂಟ್ ಮೆತ್ತಿ ಮಣ್ಣು ಸೋರದಂತೆ ಕ್ರಮ ಕೈಗೊಳ್ಳಲಾಗಿದೆ. ಎದುರಲ್ಲಿ ಕೆತ್ತನೆ ಕಲ್ಲುಗಳ ಕಂಬಗಳನ್ನು ಅಳವಡಿಸಿ ಚಾಲುಕ್ಯ ಶೈಲಿಯ ಮುಖ ಮಂಟಪ ಕಟ್ಟಲಾಗಿದೆ.
ಆವರಣಗೋಡೆ ಇದೆ. ಶೌಚಾಲಯವಿದೆ. ನಿರ್ವಹಣೆಯಿಲ್ಲದೆ ಉದ್ಯಾನ ಹಾಳಾಗಿದೆ. ಆವರಣದಲ್ಲಿ ದೊಡ್ಡ ದೊಡ್ಡ ಮರಗಳಿವೆ. ಹೀಗಾಗಿ ತಂಪು ವಾತಾವರಣ ಇರುವುದರಿಂದ ಜನರು ಇಲ್ಲಿಗೆ ಬಂದು ವಿಶ್ರಾಂತಿ ಪಡೆಯುತ್ತಾರೆ. ಶಾಲಾ ಮಕ್ಕಳು ಪ್ರವಾಸಕ್ಕೆ ಬರುತ್ತಾರೆ. ಆದರೆ, ಈಚೆಗೆ ಉದ್ಯಾನ ಒಣಗಿದ್ದರಿಂದ ಎಲ್ಲವೂ ಅಂದಗೆಟ್ಟಿದೆ. ಇಲ್ಲಿ ವ್ಯವಸ್ಥಾಪಕರ ಕೊಠಡಿ ಇರುವುದರಿಂದ ಕಾಯಂ ವ್ಯವಸ್ಥಾಪರನ್ನು ಹಾಗೂ ಪ್ರವಾಸಿಗರಿಗೆ ಮಾಹಿತಿ ನೀಡುವುದಕ್ಕೆ ಗೈಡ್ ನೇಮಿಸಬೇಕು ಎಂಬುದು ಜನರ ಆಗ್ರಹ.
ಚೌಡಯ್ಯನವರು ಪಕ್ಕದಲ್ಲಿನ ಕೆರೆಯಲ್ಲಿಯೇ ದೋಣಿ ಕಾಯಕ ಕೈಗೊಂಡಿದ್ದರು. ಆದ್ದರಿಂದ ಕೆರೆಯಲ್ಲಿ ಬಸವಣ್ಣನವರ ಮತ್ತು ಚೌಡಯ್ಯನವರ 50 ಅಡಿ ಎತ್ತರದ ಮೂರ್ತಿ ಸ್ಥಾಪಿಸಲು ಉದ್ದೇಶಿಸಿ ನೀಲನಕ್ಷೆ ಸಿದ್ಧಪಡಿಸಲಾಗಿತ್ತು. ಮೂರ್ತಿಗಳ ಕಟ್ಟೆಗಾಗಿ ಅಡಿಪಾಯಹಾಕಿ ಕೆಲ ಮಟ್ಟಿನ ನಿರ್ಮಾಣ ಕಾಮಗಾರಿಯೂ ಕೈಗೊಳ್ಳಲಾಗಿದೆ. ಆದರೆ, ನಂತರದಲ್ಲಿ ಕೆಲಸ ಸ್ಥಗಿತಗೊಂಡಿದೆ.
ಸಮೀಪವೇ ಸರ್ಕಾರ ₹620 ಕೋಟಿ ವೆಚ್ಚದ ಬೃಹತ್ ಅನುಭವ ಮಂಟಪ ನಿರ್ಮಿಸುತ್ತಿದೆ. ಕೆರೆ ಇದಕ್ಕೆ ಹತ್ತಿಕೊಂಡೇ ಇರುವುದರಿಂದ ಇದರ ಸೌಂದರೀಕರಣಕ್ಕೂ ಯೋಜನೆ ರೂಪಿಸಲಾಯಿತು. ಕೊಂಗಳಿ ಬ್ಯಾರೇಜ್ ನಿಂದ ಏತ ನೀರಾವರಿ ಯೋಜನೆ ಮೂಲಕ 16 ಕೆರೆಗಳಿಗೆ ತುಂಬಿಸುವ ನೀರು ಇಲ್ಲಿಗೂ ಬರುವಂತೆ ಮಾಡಿ ಕೆರೆ ಯಾವಾಗಲೂ ಭರ್ತಿ ಆಗಿರುವಂತೆ ನೋಡಿಕೊಳ್ಳುವುದು, ಜನರನ್ನು ಆಕರ್ಷಿಸುವುದಕ್ಕಾಗಿ ಎರಡು ಮೂರ್ತಿಗಳನ್ನು ಕೂಡಿಸಿ ದೋಣಿ ವಿಹಾರದ ವ್ಯವಸ್ಥೆ ಕೈಗೊಳ್ಳುವುದಕ್ಕೆ ಯೋಜಿಸಲಾಗಿತ್ತು. ಆದರೆ, ಎರಡು ವರ್ಷಗಳಿಂದ ಇದ್ಯಾವುದೇ ಕೆಲಸ ನಡೆಯದಿರುವುದು ಕೆಲ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಕೆರೆ ಅಕ್ಕಪಕ್ಕದಲ್ಲೇ ಶರಣರ ಬಹಳಷ್ಟು ಸ್ಮಾರಕಗಳಿವೆ. ಇಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದಲ್ಲದೆ, ವಿದ್ಯುತ್ ದೀಪಗಳನ್ನು ಅಳವಡಿಸಬೇಕಾಗಿದೆ. ಇನ್ನಿತರೆ ಅಭಿವೃದ್ಧಿ ಕಾರ್ಯ ಕೈಗೊಂಡರೆ ಈ ಸ್ಥಳಕ್ಕೆ ಇನ್ನಷ್ಟು ಜೀವಕಳೆ ಬರುವುದು ನಿಶ್ಚಿತವಾಗಿದೆ. ಆದ್ದರಿಂದ ಸಂಬಂಧಿತರು ಯೋಜನೆ ಶೀಘ್ರ ಜಾರಿಗೊಳಿಸಲು ಪ್ರಯತ್ನಿಸುವುದು ಅತ್ಯಗತ್ಯವಾಗಿದೆ.
ಅಂಬಿಗರ ಚೌಡಯ್ಯನವರ ಗವಿಯಲ್ಲಿನ ಉದ್ಯಾನ ಯವಾಗಲೂ ಹಸಿರಾಗಿರುವಂತೆ ನೋಡಿಕೊಳ್ಳಬೇಕು. ನಿಯಮಿತವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳುವುದು ಅಗತ್ಯಮಲ್ಲಿಕಾರ್ಜುನ ಬೊಕ್ಕೆ ನಗರಸಭೆ ಸದಸ್ಯ
ತ್ರಿಪುರಾಂತ ಕೆರೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ದೋಣಿ ಕಾಯಕ ಕೈಗೊಂಡಿದ್ದರಿಂದ ಅಲ್ಲಿನ ಅವರ ಮೂರ್ತಿ ಸ್ಥಾಪನೆಯ ಕಾರ್ಯ ಕೈಬಿಡಬಾರದುನಾಗನಾಥ ಚಾಮಾಲೆ ಅಧ್ಯಕ್ಷ ನಿಜಶರಣ ಅಂಬಿಗರ ಚೌಡಯ್ಯ ಟ್ರಸ್ಟ್
ಅಂಬಿಗರ ಚೌಡಯ್ಯನವರ ಗವಿ ಆವರಣದಲ್ಲಿ ಸಭೆ ಸಮಾರಂಭಗಳಿಗಾಗಿ ನಗರದಲ್ಲಿನ ಇತರೆ ಸ್ಮಾರಕಗಳಲ್ಲಿ ಇರುವಂತೆ ಸಭಾಭವನ ವೇದಿಕೆ ನಿರ್ಮಿಸಬೇಕುಗೋವಿಂದ ಚಾಮಾಲೆ ಮುಖಂಡರು
ಬಸವಣ್ಣನವರ ಸಮಕಾಲೀನರಾದ ಅಂಬಿಗರ ಚೌಡಯ್ಯನವರು ಸಮಾಜಕ್ಕೆ ದಾರಿದೀಪವಾದ ವಚನಗಳನ್ನು ರಚಿಸಿದ್ದಾರೆ. ಅವರ ಸ್ಮಾರಕ ಪ್ರೇರಣೆ ನೀಡುವಂತಿರಬೇಕುರಾಜಕುಮಾರ ಇರ್ಲೆ ಸಾಮಾಜಿಕ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.