
ಬಸವಕಲ್ಯಾಣ: ಹುಲಸೂರ- ಬಸವಕಲ್ಯಾಣ ಹೀಗೆ ಎರಡೂ ತಾಲ್ಲೂಕುಗಳನ್ನು ಒಳಗೊಂಡಿರುವ ಹಾಗೂ 60 ಕಿ.ಮೀ ಉದ್ದ ಹರಡಿರುವ ಜಿಲ್ಲೆಯ ಏಕೈಕ ದೊಡ್ಡ ವಿಧಾನಸಭಾ ಕ್ಷೇತ್ರದಲ್ಲಿ ಬೇಡಿಕೆಗಳ ಪಟ್ಟಿಯೂ ಅಷ್ಟೇ ದೊಡ್ಡದಿದೆ. ಸರ್ಕಾರದ ₹742 ಕೋಟಿಯ ಅನುಭವ ಮಂಟಪ ನಿರ್ಮಾಣದಂಥ ಬೃಹತ್ ಯೋಜನೆಗಳು ಜಾರಿಗೊಂಡರೂ ಈ ಎರಡೂ ತಾಲ್ಲೂಕು ಕೇಂದ್ರಗಳಲ್ಲಿ ಮಾತ್ರ ಮೂಲಸೌಕರ್ಯಗಳಿಲ್ಲದೆ ಸಂಕಷ್ಟ ಅನುಭವಿಸಬೇಕಾಗಿದೆ.
ಬಸವಕಲ್ಯಾಣ ನಗರದಲ್ಲಿ ಪ್ರೇಕ್ಷಣೀಯ ಮತ್ತು ಧಾರ್ಮಿಕ ಶ್ರದ್ಧಾ ಸ್ಥಾನಗಳ ವಿಕಾಸ ಭರದಿಂದ ಸಾಗಿರುವುದರಿಂದ ಪ್ರವಾಸಿಗರ ಸಂಖ್ಯೆಯೂ ದಿನದಿಂದ ದಿನಕ್ಕೆ ಅಧಿಕಗೊಳ್ಳುತ್ತಿದೆ. ಆದರೆ ಅದಕ್ಕೆ ತಕ್ಕಂತೆ ಮುಖ್ಯ ರಸ್ತೆ, ಒಳ ರಸ್ತೆಗಳ ಹಾಗೂ ಮಂಟಪದ ಸಂಪರ್ಕ ರಸ್ತೆಯ ಅಗಲೀಕರಣ ಆಗಿಲ್ಲ. ನಗರ ಪ್ರವೇಶಿಸುವ ರಸ್ತೆಯಲ್ಲಿನ ತ್ರಿಪುರಾಂತ ಕೆರೆ ಮೇಲಿನ ಸೇತುವೆ ಎತ್ತರಿಸುತ್ತಿಲ್ಲ. ಹೀಗಾಗಿ ವಾಹನ ಅಪಘಾತಗಳು ಹೆಚ್ಚುತ್ತಿವೆ. ಉತ್ತಮ ಚರಂಡಿಗಳಿಲ್ಲ. ಎಲ್ಲೆಂದರಲ್ಲಿ ಕಸ ಸಂಗ್ರಹದಿಂದ ದುರ್ನಾತ ಸೂಸುತ್ತಿದ್ದು ಪ್ರವಾಸಿಗರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ನಗರಸಭೆ ಈ ಬಗ್ಗೆ ನಿರ್ಲಕ್ಷ ವಹಿಸುತ್ತಿದೆ. ಇದೆಲ್ಲದರ ಸುಧಾರಣೆಗಾಗಿ ಬಜೆಟ್ ನಲ್ಲಿ ಪ್ಯಾಕೇಜ್ ಘೋಷಿಸಬೇಕು ಎಂಬುದು ಸ್ಥಳೀಯರ ಆಗ್ರಹ.
ಬೇಸಿಗೆ ಬಂತೆಂದರೆ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತದೆ. ಕೊಹಿನೂರ ಹೋಬಳಿಯ ಬಟಗೇರಾ, ಲಾಡವಂತಿ, ಭೊಸ್ಗಾ ಪಂಚಾಯಿತಿಗಳ ಗ್ರಾಮಗಳಿಗೆ ನೀರು ಒದಗಿಸುವುದಕ್ಕಾಗಿ ಬಹುಗ್ರಾಮ ನೀರು ಸರಬರಾಜು ಯೋಜನೆ ಕಾರ್ಯಗತಗೊಳ್ಳುತ್ತಿದೆ. ಹುಲಸೂರ, ಬೇಲೂರ, ಬೆಟಬಾಲ್ಕುಂದಾ, ಬಸವಕಲ್ಯಾಣ ಒಳಗೊಂಡು 16 ಕೆರೆಗಳಿಗೆ ಮತ್ತು ಚುಳಕಿನಾಲಾ ಜಲಾಶಯಕ್ಕೆ ನೀರು ಹರಿಸುವ ಕೊಂಗಳಿ ಏತ ನೀರಾವರಿ ಯೋಜನೆಯ ಪಂಪ್ ಹೌಸ್ ಕೆಲಸ ಪೂರ್ಣಗೊಂಡಿದೆ. ಪೈಪಲೈನ್ ಅಳವಡಿಸಿದ್ದರೂ ಕೆರೆಗಳಿಗೆ ನೀರು ಮಾತ್ರ ಹರಿಸಿಲ್ಲ. ಕೆರೆಗಳ ದುರಸ್ತಿಗೆ ಮತ್ತು ಯೋಜನೆಯ ಲಾಭಕ್ಕಾಗಿ ಬಜೆಟ್ ನಲ್ಲಿ ಅನುದಾನ ಒದಗಿಸುವ ಅಗತ್ಯವಿದೆ.
ಬಸವಣ್ಣನವರ ಪರುಷಕಟ್ಟೆ ಎಲ್ಲ ಶರಣ ಸ್ಮಾರಕಗಳಕ್ಕಿಂತ ಮಹತ್ವದ ಸ್ಥಳ. ಅದರ ಜೀರ್ಣೋದ್ಧಾರವಾಗಲಿ, ನಗರದ 108 ಅಡಿ ಎತ್ತರದ ಬೃಹತ್ ಬಸವ ದ್ವಾರದಲ್ಲಿನ ಅತಿಕ್ರಮಣ ತೆರವಾಗಿಸಿ ಇಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಹಣ ನೀಡಲಿ ಎನ್ನುತ್ತಾರೆ ಸಾಮಾಜಿಕ ಸಮತಾ ವೇದಿಕೆ ಸಂಚಾಲಕ ಆಕಾಶ ಖಂಡಾಳೆ ಮತ್ತು ರಾಜಕುಮಾರ ತೊಂಡಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದೂರದಲ್ಲಿರುವ ಕಾರಣ ವಿದ್ಯಾರ್ಥಿಗಳು ನಡೆದುಕೊಂಡು ಹೋಗಬೇಕಿದ್ದು ನಗರದಲ್ಲೇ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಿ ಎಂಬುದು ಸಾಮಾಜಿಕ ಕಾರ್ಯಕರ್ತರಾದ ತಹಶೀನಅಲಿ ಜಮಾದಾರ ಮತ್ತು ಧನರಾಜ ರಾಜೋಳೆ ಅವರ ಒತ್ತಾಯವಾಗಿದೆ.
ಶಾಸಕರು ಏನಂತಾರೆ?
'ಅನುಭವ ಮಂಟಪ ನಿರ್ಮಾಣವಾದರೆ ಬಸವಕಲ್ಯಾಣ ಅಂತರರಾಷ್ಟ್ರೀಯ ಪ್ರವಾಸಿ ತಾಣವಾಗಲಿದೆ. ಪ್ರತಿದಿನವೂ ಸಾವಿರಾರು ಜನರು ನಗರಕ್ಕೆ ಬಂದು ಹೋಗಬಹುದು ಎಂಬ ಲೆಕ್ಕಾಚಾರವಿದೆ. ಹಾಗಾದರೆ ಅದಕ್ಕೆ ತಕ್ಕಂತೆ ರಸ್ತೆಗಳು ಸಿದ್ಧವಾಗಬೇಕು. ಮೂಲಸೌಕರ್ಯ ಒದಗಿಸಬೇಕು. ರಿಂಗ್ ರೋಡ್ ಆಗಲೇಬೇಕು. ಅದಕ್ಕಾಗಿ ಪ್ಯಾಕೇಜ್ ಘೋಷಿಸಲಿ' ಎನ್ನುತ್ತಾರೆ ಕ್ಷೇತ್ರದ ಶಾಸಕ ಶರಣು ಸಲಗರ. ನಗರದ ಸುಧಾರಣೆಗೂ ಸಹಕಾರ ನೀಡಿ ಎಂದು ಈಚೆಗೆ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೇಳಿಕೊಂಡಿದ್ದೇನೆ. ಅನುಭವ ಮಂಟಪಕ್ಕೆ ಹೆಚ್ಚಿನ ಅನುದಾನ ನೀಡಿ ಇದೇ ವರ್ಷ ಅದರ ಕಾಮಗಾರಿ ಪೂರ್ಣಗೊಳಿಸಲು ಬಜೆಟ್ ಸಹಕಾರಿ ಆಗಬೇಕು. ಕೊಂಗಳಿ ಏತ ನೀರಾವರಿ ಯೋಜನೆ ಕಾರ್ಯಗತಗೊಂಡ ಸಂಬಂಧ ಶೇ 95 ರಷ್ಟು ಹಣ ಪಾವತಿಸಿಲಾಗಿದೆ. ಆದರೂ ಕೆರೆಗಳಿಗೆ ನೀರು ಹರಿಸುವುದಕ್ಕೆ ಸಂಬಂಧಿತರು ವಿಫಲ ಆಗಿದ್ದಾರೆ. ಅತಿವೃಷ್ಟಿಯಿಂದಾದ ಬೆಳೆ ಹಾನಿಗೆ ಕ್ಷೇತ್ರದ ಎಲ್ಲ ಕೃಷಿಕರಿಗೂ ಪರಿಹಾರ ದೊರಕುವಂತಾಗಲು ಬಜೆಟ್ ರೈತಸ್ನೇಹಿ ಆಗಿರಲಿ ಎಂದಿದ್ದಾರೆ.
ಏನಾಗಬೇಕಿದೆ?
`ಬಸವಕಲ್ಯಾಣ ಜಿಲ್ಲಾ ಕೇಂದ್ರ ಆಗಲಿ ಎಂಬುದು ಬಹುದಿನದ ಬೇಡಿಕೆ. ಐತಿಹಾಸಿಕ ಮಹತ್ವದ ಮತ್ತು ಕೋಟ್ಯಂತರ ಜನರ ಶ್ರದ್ಧೆಯ ಕೇಂದ್ರ ಇದಾಗಿರುವ ಕಾರಣ ಜಿಲ್ಲಾ ಕೇಂದ್ರವಾದರೆ ಇಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಆಗುತ್ತದೆ. ಪ್ರವಾಸಿಗರಿಗೆ ಸೌಕರ್ಯ ಒದಗಿಸಲು ಸಾಧ್ಯ ಆಗುತ್ತದೆ' ಎನ್ನುತ್ತಾರೆ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಮಾಜಿ ನಿರ್ದೇಶಕ ಶಿವರಾಜ ನರಶೆಟ್ಟಿ. ಕೊಂಗಳಿ ಏತ ನೀರಾವರಿ ಯೋಜನೆ ಕಾರ್ತಗತವಾದರೆ ಅನುಭವ ಮಂಟಪದ ಸುತ್ತಲಿನ ತ್ರಿಪುರಾಂತ ಕೆರೆಗೂ ನೀರು ಹರಿದು ಮಂಟಪದ ಸೌಂದರ್ಯ ಇನ್ನಷ್ಟು ಹೆಚ್ಚಲಿದೆ. ಆದ್ದರಿಂದ ಈ ಯೋಜನೆ ಪೂರ್ಣಗೊಳಿಸಬೇಕು' ಎನ್ನುತ್ತಾರೆ.
ಹುಲಸೂರ ಬಗ್ಗೆಯೂ ಗಮನವಿರಲಿ
ಹುಲಸೂರ ತಾಲ್ಲೂಕು ಕೂಡ ಈ ಕ್ಷೇತ್ರದಲ್ಲೇ ಬರುತ್ತದಾದ್ದರಿಂದ ಈ ಪಟ್ಟಣದ ಅಭಿವೃದ್ಧಿ ಬಗ್ಗೆಯೂ ಸಂಬಂಧಿತರು ಗಮನಹರಿಸಬೇಕು. ಓಣಿಗಳಲ್ಲಿನ ರಸ್ತೆಗಳನ್ನು ಅಗಲಗೊಳಿಸಿ ಚರಂಡಿ ನಿರ್ಮಿಸಬೇಕು ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ. ಎಲ್ಲ ತಾಲ್ಲೂಕು ಕಚೇರಿಗಳಿಗೂ ಕಾಯಂ ಅಧಿಕಾರಿಗಳನ್ನು ಒದಗಿಬೇಕು ಎಂದು ವಿನಂತಿಸಿದ್ದಾರೆ. ತಹಶೀಲ್ದಾರ್ ಕಚೇರಿ ಹಳೆಯ ಚಿಕ್ಕ ಕಟ್ಟಡದಲ್ಲಿದ್ದು ಅನಾನುಕೂಲ ಆಗುತ್ತಿದೆ. ಹೊಸ ಕಟ್ಟಡ ಕಟ್ಟಬೇಕು. ಇತರೆ ಎಲ್ಲ ಕಚೇರಿಗಳನ್ನೂ ಆರಂಭಿಸಬೇಕು' ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಲೋಕೇಶ ಧರ್ಮಣ್ಣೆ. `ಭಾಲ್ಕಿ ತಾಲ್ಲೂಕಿನ 18 ಗ್ರಾಮಗಳನ್ನು ಹುಲಸೂರ ತಾಲ್ಲೂಕಿಗೆ ಸೇರ್ಪಡೆಗೊಳಿಸಿ ಪರಿಪೂರ್ಣ ತಾಲ್ಲೂಕು ಆಗಿಸಬೇಕು ಎಂದು ಮುಖ್ಯಮಂತ್ರಿಯವರಿಗೆ ಮನವಿಪತ್ರ ಕಳಿಸಿದ್ದೇನೆ. ಮಿರಖಲ್ ನಲ್ಲಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಬೇಕು ಎಂದು ಆಗ್ರಹಿಸಿದ್ದೇನೆ' ಎಂದು ಜ್ಞಾನೋಬಾ ನಿಟ್ಟೂರೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.