ಬಸವಕಲ್ಯಾಣ: ತಾಲ್ಲೂಕಿನ ರಾಮತೀರ್ಥ(ಡಿ) ಹಾಗೂ ಬಟಗೇರಾ ಮಧ್ಯದ ರಸ್ತೆ ತೀರ ಹದಗೆಟ್ಟಿದ್ದು, ತಗ್ಗುಗುಂಡಿಗಳು ಬಿದ್ದಿವೆ. ಬಸ್ ಹಾಗೂ ಇತರೆ ವಾಹನಗಳ ಸಂಚಾರ ವಾರದಿಂದ ಸ್ಥಗಿತಗೊಂಡಿದ್ದು ಜನರು ಪರದಾಡುವಂತಾಗಿದೆ.
ತಾಲ್ಲೂಕು ಸ್ಥಳದಿಂದ 40 ಕಿ.ಮೀ ಅಂತರದಲ್ಲಿ ಗಡಿ ಭಾಗದಲ್ಲಿ ಈ ಗ್ರಾಮಗಳಿವೆ. ಬಸವಕಲ್ಯಾಣ, ಆಳಂದ, ಕಲಬುರಗಿ ಹಾಗೂ ಮಹಾರಾಷ್ಟ್ರದ ಉಮರ್ಗಾ ಪಟ್ಟಣಕ್ಕೆ ಈ ಮಾರ್ಗದಿಂದ ವಾಹನಗಳು ಸಂಚರಿಸುತ್ತವೆ. ಕೊಹಿನೂರ ಹೋಬಳಿಯ ಬಹಳಷ್ಟು ಗ್ರಾಮದವರಿಗೆ ಇದೇ ರಸ್ತೆಯಿಂದ ಈ ಪ್ರಮುಖ ಸ್ಥಳಗಳು ಸಮೀಪ ಆಗುತ್ತವೆ. ಕೃಷಿ ಉತ್ಪನ್ನಗಳ ಮಾರಾಟದ ಪ್ರಮುಖ ಕೇಂದ್ರವಾದ ಲಾತೂರಗೂ ಇಲ್ಲಿಂದ ಸರಕು ಸಾಗಣೆ ನಡೆಯುತ್ತದೆ. ಆದರೆ ಅನೇಕ ತಿಂಗಳುಗಳಿಂದ ರಸ್ತೆ ಹಾಳಾಗಿದ್ದರಿಂದ ಹತ್ತಾರು ಕಿ.ಮೀ ಹೆಚ್ಚಿನ ದೂರ ಕ್ರಮಿಸಿ ಇತರೆ ರಸ್ತೆಗಳಿಂದ ವಾಹನಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತಿದೆ.
ರಾಮತೀರ್ಥದಿಂದ ಬಟಗೇರಾಕ್ಕೆ ಹೋಗುವ 3 ಕಿ.ಮೀ ರಸ್ತೆಯಲ್ಲಿ ಎಲ್ಲೆಂದರಲ್ಲಿ ತಗ್ಗುಗುಂಡಿಗಳಿವೆ. ಡಾಂಬರು ಕಿತ್ತಿದ್ದರಿಂದ ಜೆಲ್ಲಿ ಕಲ್ಲುಗಳು ರಸ್ತೆ ಆವರಿಸಿದ್ದು, ನಡೆದುಕೊಂಡು ಹೋಗುವುದಕ್ಕೆ ಸಂಕಟ ಆಗುತ್ತಿದೆ. ದ್ವಿಚಕ್ರ ವಾಹನಗಳನ್ನು ತೆಗೆದುಕೊಂಡು ಹೋಗುವುದಕ್ಕೂ ಹರಸಾಹಸ ಪಡಬೇಕಾಗಿದೆ. ಬಿತ್ತನೆ ಕಾರ್ಯ ಆರಂಭ ಆಗಿದ್ದರಿಂದ ಎತ್ತುಗಳು, ಟ್ರ್ಯಾಕ್ಟರ್ ಹಾಗೂ ಬೀಜ, ಗೊಬ್ಬರ ಮತ್ತಿತರೆ ಸಾಮಾನು ಸಾಗಿಸುವುದಕ್ಕೆ ಕಷ್ಟವಾಗುತ್ತಿದೆ ಎಂಬುದು ಜನರ ಅಳಲು.
ಮುಖ್ಯವೆಂದರೆ, ರಸ್ತೆ ರಾಮತೀರ್ಥ(ಡಿ) ಗ್ರಾಮದ ಮಧ್ಯದಿಂದ ಹಾದು ಹೋಗುತ್ತದೆ. ಇಲ್ಲಿ ಒಂದೇ ವಾಹನ ಸಾಗುವಷ್ಟು ಜಾಗ ಇಕ್ಕಟ್ಟಾಗಿದೆ. ಸಮೀಪವೇ ಮನೆಗಳು ಇರುವುದರಿಂದ ಸುಧಾರಣಾ ಕಾರ್ಯ ನಡೆದಿಲ್ಲ. ಚರಂಡಿ ಕೂಡ ನಿರ್ಮಿಸಿಲ್ಲ. ಈ ಕಾರಣದಿಂದ ಮಳೆ ಬಂದಾಗ ರಸ್ತೆ ಮೂಲಕವೇ ನೀರು ಹರಿಯುತ್ತದೆ. ಆಗ ರಸ್ತೆಯೇ ನಾಲೆಯ ರೂಪ ಪಡೆಯುತ್ತದೆ. ಈಚೆಗೆ ಹೀಗೆ ನೀರು ಹೋಗಿದ್ದರಿಂದ ಎಲ್ಲೆಡೆ ಕೆಸರು ಆಗಿದ್ದು ಕೆಲ ದಿನಗಳಿಂದ ವಾಹನ ಸಂಚಾರ ನಿಂತುಹೋಗಿದೆ.
‘ಶಿರಗೂರ ಗ್ರಾಮದ ಕಡೆಗೆ ಹಾಗೂ ಬಟಗೇರಾ ಕಡೆಗೆ ಹೋಗುವ ರಸ್ತೆಯಲ್ಲಿ ಕೆಸರಿದೆ. ರಸ್ತೆ ವಿಸ್ತರಿಸಲು ಜನರು ಜಾಗ ಬಿಡುವುದಕ್ಕೆ ಸಿದ್ಧರಿದ್ದಾರೆ. ಆದರೂ, ಸಂಬಂಧಿತ ಇಲಾಖೆಯವರು ಉತ್ತಮ ರಸ್ತೆ ನಿರ್ಮಿಸುತ್ತಿಲ್ಲ. ಮಳೆ ಮತ್ತು ಮನೆ ಬಳಕೆ ನೀರಿನಿಂದ ಕೆಸರಾಗುವುದನ್ನು ತಡೆಯಲು ಸಾಕಷ್ಟು ಸಲ ಗ್ರಾಮ ಪಂಚಾಯಿತಿ ಅನುದಾನ ಖರ್ಚು ಮಾಡಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಇನ್ನು ಮುಂದೆ ಸಂಬಂಧಿತ ಇಲಾಖೆಯವರು ಕ್ರಮ ತೆಗೆದುಕೊಳ್ಳದಿದ್ದರೆ ಗ್ರಾಮಸ್ಥರಿಂದ ಧರಣಿ ನಡೆಸಲು ತೀರ್ಮಾನಿಸಲಾಗಿದೆ' ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಶಿವರಾಜ ಜಮಾದಾರ.
3 ಕಿ.ಮೀ ರಸ್ತೆಯಲ್ಲಿ ಸರಣಿ ತಗ್ಗು–ಗುಂಡಿಗಳು ಡಾಂಬರು ಕಿತ್ತಿದ್ದರಿಂದ ರಸ್ತೆ ಆವರಿಸುವ ಜೆಲ್ಲಿ ಕಲ್ಲು ಮಳೆ ಸುರಿದರೆ ಹೊಳೆಯಂತಾಗುವ ರಸ್ತೆ
ರಸ್ತೆಯಲ್ಲಿ ಕೆಸರಿರುವ ಕಾರಣ ಬಸ್ ಗಳು ಬರುತ್ತಿಲ್ಲ. ಹೀಗಾಗಿ ರಾಮತೀರ್ಥ (ಡಿ) ಗ್ರಾಮದ ವಿದ್ಯಾರ್ಥಿಗಳು 3 ಕಿ.ಮೀ ನಡೆದುಕೊಂಡೇ ಹೋಗಿಬರುವ ಪರಿಸ್ಥಿತಿ ಇದೆ.ಶಿವರಾಜ ಜಮಾದಾರ ಸದಸ್ಯ ಗ್ರಾಮ ಪಂಚಾಯಿತಿ
ರಾಮತೀರ್ಥದಿಂದ ಬಟಗೇರಾವರೆಗಿನ ರಸ್ತೆಯಲ್ಲಿ ವರ್ಷದಿಂದ ತಗ್ಗುಗುಂಡಿಗಳು ಬಿದ್ದಿವೆ. ಆದರೂ ಸಂಬಂಧಿತರು ಸುಧಾರಣಾ ಕಾರ್ಯ ಕೈಗೆತ್ತಿಕೊಳ್ಳದೆ ನಿರ್ಲಕ್ಷ ತೋರಿದ್ದಾರೆಲಕ್ಷ್ಮಣ ಕಪನೂರೆ ಮಾಜಿ ಸದಸ್ಯ ಗ್ರಾಮ ಪಂಚಾಯಿತಿ
ಗ್ರಾಮಸ್ಥರ ಬೇಡಿಕೆ
ಗ್ರಾಮ ಪಂಚಾಯಿತಿಯು ರಾಮತೀರ್ಥ (ಡಿ) ಗ್ರಾಮದ ಮಧ್ಯದಿಂದ ಹೋಗುವ ರಸ್ತೆ ಸುಧಾರಣೆ ಕೈಗೊಳ್ಳುವಷ್ಟು ಆರ್ಥಿಕವಾಗಿ ಸಬಲವಿಲ್ಲ. ಆದ್ದರಿಂದ ಇತರೆ ಸಂಬಂಧಿತ ಇಲಾಖೆಯವರು ಈ ಕಡೆ ಲಕ್ಷ ವಹಿಸಲಿ. ರಸ್ತೆ ಅಗಲೀಕರಣಕ್ಕೆ ಬೇಕಾದರೆ ಇನ್ನೂ ಹೆಚ್ಚಿನ ಜಾಗ ಬಿಡುವುದಕ್ಕೆ ಸಿದ್ಧರಿದ್ದೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಆದರೂ ಗ್ರಾಮದ ಹೊರ ಭಾಗದ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಊರೊಳಗಿನ ಕೆಲಸ ಪಂಚಾಯಿತಿಯವರೇ ನಿರ್ವಹಿಸಬೇಕಾಗಿದೆ. ಇದಕ್ಕಾಗಿ ಬೇರೆ ಅನುದಾನ ಪಡೆದುಕೊಳ್ಳಬಹುದು ಎಂದು ಲೋಕೋಪಯೋಗಿ ಇಲಾಖೆ ಎಇಇ ಧನರಾಜ ಚವ್ಹಾಣ ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.