ADVERTISEMENT

ಬಸವಕಲ್ಯಾಣ | ಸಿಎಂ, ಡಿಸಿಎಂ ಮುಖವಾಡದವರಿಂದ ಬಾರುಕೋಲು ಏಟು ತಿಂದ ಶಾಸಕ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 22:23 IST
Last Updated 17 ಅಕ್ಟೋಬರ್ 2025, 22:23 IST
ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಪರಿಹಾರ ಒದಗಿಸಲು ಆಗ್ರಹಿಸಿ ಬಸವಕಲ್ಯಾಣದಲ್ಲಿ ಶುಕ್ರವಾರ ಬಿಜೆಪಿಯಿಂದ ನಡೆದ ಅರೆಬೆತ್ತಲೆ ಪ್ರತಿಭಟನೆ ಡಾ.ಅಂಬೇಡ್ಕರ್ ವೃತ್ತಕ್ಕೆ ಬಂದಾಗ ಕಂಡು ಬಂದ ದೃಶ್ಯ
ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಪರಿಹಾರ ಒದಗಿಸಲು ಆಗ್ರಹಿಸಿ ಬಸವಕಲ್ಯಾಣದಲ್ಲಿ ಶುಕ್ರವಾರ ಬಿಜೆಪಿಯಿಂದ ನಡೆದ ಅರೆಬೆತ್ತಲೆ ಪ್ರತಿಭಟನೆ ಡಾ.ಅಂಬೇಡ್ಕರ್ ವೃತ್ತಕ್ಕೆ ಬಂದಾಗ ಕಂಡು ಬಂದ ದೃಶ್ಯ   

ಬಸವಕಲ್ಯಾಣ: ಅತಿವೃಷ್ಟಿ ಹಾನಿಗೆ ಪರಿಹಾರ ಒದಗಿಸಲು ಆಗ್ರಹಿಸಿ ನಗರದಲ್ಲಿ ಶುಕ್ರವಾರ ಬಿಜೆಪಿಯಿಂದ ನಡೆದ ಅರೆಬೆತ್ತಲೆ ಪ್ರತಿಭಟನೆಯಲ್ಲಿ ಶಾಸಕ ಶರಣು ಸಲಗರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಮುಖವಾಡ ಧರಿಸಿದ್ದವರಿಂದ ಬಾರುಕೋಲಿನಿಂದ ಬೆನ್ನು ಮತ್ತು ಹೊಟ್ಟೆಗೆ ಬರೆ ಏಳುವಂತೆ ಹೊಡೆಸಿಕೊಂಡರು.

ಪಟ್ಟಿಗಳಿರುವ ಚಡ್ಡಿ ಕಾಣುವಂತೆ ಲುಂಗಿ ಧರಿಸಿ ತಲೆಗೆ ಹಸಿರು ಟವೆಲ್ ಸುತ್ತಿಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮಹಾತ್ಮಗಾಂಧಿ ವೃತ್ತದಿಂದ ಡಾ.ಬಿ.ಆರ್‌. ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಯಿತು. ಅನೇಕರು ಪಕ್ಷ ಧ್ವಜಗಳನ್ನು ಹಿಡಿದಿದ್ದರು.

ತೊಗರಿ ಮತ್ತಿತರ ಬೆಳೆಗಳ ಒಣಗಿದ ದಂಟುಗಳನ್ನು ಸಹ ಹಿಡಿಯಲಾಗಿತ್ತು. ಹಲಗೆ, ಡಿಜೆಯ ಸದ್ದಿನೊಂದಿಗೆ ಸರ್ಕಾರ ವಿರುದ್ಧ ಘೋಷಣೆ ಕೂಗುತ್ತ ಮೆರವಣಿಗೆಯಲ್ಲಿ ಸಾಗಲಾಯಿತು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ‘ಸರ್ಕಾರ ಪರಿಹಾರ ನೀಡದೆ ಗಾಯದ ಮೇಲೆ ಮತ್ತೆ ಬರೆ ಹೇಗೆ ಎಳೆಯುತ್ತಿದೆ ಎಂಬುದನ್ನು ಬಾರುಕೋಲಿನಿಂದ ಹೊಡೆಸಿಕೊಂಡು ತೋರಿಸಿದ್ದೇನೆ’ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳು, ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು, ರೈತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.