ADVERTISEMENT

ರಾಷ್ಟ್ರಪತಿ, ಗಣ್ಯರು, ಮಠಾಧೀಶರಿಗೆ ಆಹ್ವಾನ: ಸಚಿವ ಖಂಡ್ರೆ

ಭಾಲ್ಕಿ ಹಿರೇಮಠ ಸಂಸ್ಥಾನದಲ್ಲಿ ಪಟ್ಟದ್ದೇವರ ಅಮೃತ ಮಹೋತ್ಸವ ಕರಪತ್ರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 7:52 IST
Last Updated 25 ಫೆಬ್ರುವರಿ 2026, 7:52 IST
ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವದ ಕರಪತ್ರ ಬಿಡುಗಡೆಗೊಳಿಸಿದರು
ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವದ ಕರಪತ್ರ ಬಿಡುಗಡೆಗೊಳಿಸಿದರು   

ಭಾಲ್ಕಿ: ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಸವಲಿಂಗ ಪಟ್ಟದ್ದೇವರು ಸಲ್ಲಿಸುತ್ತಿರುವ ಸೇವೆ ಅನುಪಮ. ಪೂಜ್ಯರು 75 ವಸಂತಗಳನ್ನು ಪೂರೈಸುತ್ತಿರುವುದು ಸಂತಸದ ಸಂಗತಿ. ಅವರ ಅಮೃತ ಮಹೋತ್ಸವ ಐತಿಹಾಸಿಕವಾಗಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಹಿರೇಮಠ ಸಂಸ್ಥಾನ, ಅಮೃತ ಮಹೋತ್ಸವ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಬಸವಣ್ಣನವರ ಜಯಂತ್ಯುತ್ಸವ, ವಚನ ಜಾತ್ರೆ-2026, ಚನ್ನಬಸವ ಪಟ್ಟದ್ದೇವರ 27ನೇ ಸ್ಮರಣೋತ್ಸವ ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವದ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಪಟ್ಟಣದಲ್ಲಿ ಬರುವ ಏಪ್ರಿಲ್‍ನಲ್ಲಿ ಮೂರು ದಿವಸ ಐತಿಹಾಸಿಕವಾಗಿ ಸಮಾರಂಭ ಜರುಗಲಿದೆ. ಈಗಾಗಲೇ ರಾಷ್ಟ್ರಪತಿ ದ್ರೌಪದಿ ಮುರ್ಮು, ಸುತ್ತೂರು, ತುಮಕೂರು, ಆದಿಚುಂಚನಗಿರಿ ಶ್ರೀಗಳಿಗೆ, ರವಿಶಂಕರ ಗುರೂಜಿ ಸೇರಿ ನಾಡಿನ ನಾನಾ ಮಠಾಧೀಶರು, ಗಣ್ಯರನ್ನು ಭೇಟಿಯಾಗಿ ಈ ಸಮಾರಂಭಕ್ಕೆ ಆಹ್ವಾನ ನೀಡಲಾಗಿದ್ದು, ಎಲ್ಲರೂ ಭಾಗವಹಿಸುವ ನಿರೀಕ್ಷೆಯಿದೆ’ ಎಂದು ಹೇಳಿದರು.

ADVERTISEMENT

ಸಮಿತಿ ಗೌರವಾಧ್ಯಕ್ಷ ಪ್ರಕಾಶ ಖಂಡ್ರೆ ಮಾತನಾಡಿ, ‘ಶತಾಯಷಿ ಚನ್ನಬಸವ ಪಟ್ಟದ್ದೇವರು ಅಪ್ಪಟ ಬಸವತತ್ವ ಅನುಯಾಯಿ ಆಗಿದ್ದರು. ಅವರ ದಾರಿಯಲ್ಲೇ ಬಸವಲಿಂಗ ಪಟ್ಟದ್ದೇವರು ನಡೆದು ಈ ಭಾಗದ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಅವರ ಅಮೃತ ಮಹೋತ್ಸವ ಎಲ್ಲರೂ ಸೇರಿ ಅರ್ಥಪೂರ್ಣವಾಗಿ ಆಚರಿಸೋಣ’ ಎಂದು ತಿಳಿಸಿದರು.

ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಭಕ್ತರ ಒತ್ತಾಸೆಗೆ ಮಣಿದು ಅಮೃತ ಮಹೋತ್ಸವ ಆಚರಿಸಿಕೊಳ್ಳಲು ಒಪ್ಪಿಗೆ ನೀಡಿದ್ದೇನೆ’ ಎಂದು ತಿಳಿಸಿದರು.

ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಹಣಮಂತರಾವ ಚವ್ಹಾಣ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ, ತಾಲ್ಲೂಕು ಬಿಜೆಪಿ ಅಧ್ಯಕ್ಷ ವೀರಣ್ಣ ಕಾರಬಾರಿ, ಪ್ರಮುಖರಾದ ಝರೆಪ್ಪ, ಅಮರ ಜಲ್ದೆ, ಮಹಾದೇವ ಬೇಲೂರೆ, ಕಾಶಿನಾಥ ಲದ್ದೆ, ಪ್ರಶಾಂತ ಕೊಟಗೀರಾ, ದೀಪಕ ಸಿಂಧೆ ಸೇರಿದಂತೆ ಹಲವರು ಹಾಜರಿದ್ದರು.

ಬಸವಲಿಂಗ ಪಟ್ಟದ್ದೇವರು ಅನೇಕ ವಿಧಾಯಕ ಕಾರ್ಯಗಳ ಮೂಲಕ ಶ್ರೀಮಠದ ಕೀರ್ತಿ ರಾಜ್ಯ ರಾಷ್ಟ್ರ ವ್ಯಾಪಿ ಪಸರಿಸುವ ಕೆಲಸ ಮಾಡಿದ್ದಾರೆ. ಅವರ ಅಮೃತ ಮಹೋತ್ಸವ ಎಲ್ಲರೂ ಸೇರಿ ಐತಿಹಾಸಿಕವಾಗಿಸೋಣ

–ಈಶ್ವರ ಖಂಡ್ರೆ ಅಧ್ಯಕ್ಷ ಅಮೃತ ಮಹೋತ್ಸವ ಸಮಿತಿ ಭಾಲ್ಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.