ಬಸವಲಿಂಗ ಪಟ್ಟದ್ದೇವರು
ಬೀದರ್: ‘ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯೊಂದಿಗೆ ಪೌರಾಣಿಕ, ಕಾಲ್ಪನಿಕ ರೇಣುಕಾಚಾರ್ಯರ ಜಯಂತಿ ಆಚರಿಸಬೇಕೆಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಹೊರಡಿಸಿರುವ ಸುತ್ತೋಲೆ ತೀವ್ರ ಖಂಡನಾರ್ಹವಾದುದು’ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.
ಶಂಕರ ಬಿದರಿ ಅವರ ನಡೆ ಇತಿಹಾಸಕ್ಕೆ ಮಾಡುವ ಬಹುದೊಡ್ಡ ದ್ರೋಹ. ಅವರ ಈ ನಿರ್ಧಾರದಿಂದ ಇಡೀ ಲಿಂಗಾಯತ ಸಮಾಜಕ್ಕೆ ಬೇಸರವಾಗಿದೆ. ಬಿದರಿ ಅವರು ಬಸವತತ್ವ ಅರಿತುಕೊಂಡವರು. ಬಸವತತ್ವದ ದಂಡನಾಯಕರಾದ ಇಳಕಲ್ ಮತ್ತು ಗದಗ ಹಿರಿಯ ಸ್ವಾಮೀಜಿಗಳ ಆತ್ಮೀಯ ಶಿಷ್ಯರಾಗಿದ್ದವರು. ಬಸವ ಜಯಂತಿಯೊಂದಿಗೆ ಬೇರೊಂದು ಜಯಂತಿ ತಳುಕು ಹಾಕುವುದು ಸರಿಯಲ್ಲ. ಅವರು ತಮ್ಮ ನಿರ್ಧಾರ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.
ಬಸವಣ್ಣನವರ ಜಯಂತಿಗೆ ಶತಮಾನಕ್ಕಿಂತಲೂ ಹೆಚ್ಚಿನ ಇತಿಹಾಸವಿದೆ. ಇದನ್ನು ಆಚರಿಸಲು ಹರ್ಡೆಕರ್ ಮಂಜಪ್ಪ ಮತ್ತು ಇನ್ನಿತರ ಮಹನೀಯರು ಪಟ್ಟ ಪರಿಶ್ರಮ ಮರೆಯುವಂತಹದ್ದಲ್ಲ. ಬಿದರಿ ಅವರ ನಿರ್ಧಾರವು ಅವರ ಪರಿಶ್ರಮ, ತ್ಯಾಗಕ್ಕೆ ಚ್ಯುತಿ ತರುವಂತಹದ್ದು. ಈಗಾಗಲೇ ರೇಣುಕಾಚಾರ್ಯರನ್ನು ನಂಬುವ ಸದ್ಭಕ್ತರು ಫಾಲ್ಗುಣ ಶುದ್ಧ ತ್ರಯೋದಶಿದಂದು ಅವರ ಜಯಂತಿ ಆಚರಿಸುತ್ತಿದ್ದಾರೆ. ಆದರೆ, ಅದನ್ನು ಬಸವ ಜಯಂತಿಗೆ ತಳಕು ಹಾಕುವುದು ಅನೈತಿಕ ಮತ್ತು ಅಕ್ಷಮ್ಯವಾದದ್ದು ಎಂದಿದ್ದಾರೆ.
ತಮ್ಮ ಒಂದು ತಪ್ಪು ಹೆಜ್ಜೆ ಸಮಾಜದ ನೂರಾರು ವರ್ಷಗಳ ಭವಿಷ್ಯ ಕೆಡಿಸುತ್ತದೆ. ಇದು ಶರಣ ಚರಿತ್ರೆಯ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ನಿಮ್ಮ ಹಣೆಪಟ್ಟಿಗೆ ಅಂಟಿಕೊಳ್ಳುತ್ತದೆ. ಇದನ್ನು ಅರಿತುಕೊಳ್ಳಬೇಕು. ತಿಳಿದು ತಿಳಿಯಲಾರದೋ ಆದ ಈ ತಪ್ಪನ್ನು ವೀರಶೈವ-ಲಿಂಗಾಯತ ಮಹಾಸಭೆ ಸರಿಪಡಿಸಬೇಕು. ಇಲ್ಲದಿದ್ದರೆ ಭವ್ಯ ಪರಂಪರೆಯ ಇತಿಹಾಸ ಇರುವ ಲಿಂಗಾಯತ ಸಮಾಜ ನಿಮ್ಮನ್ನು ಎಂದು ಕ್ಷಮಿಸುವುದಿಲ್ಲ ಎಂದು ಶನಿವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.