ADVERTISEMENT

ಬಸವಲಿಂಗ ಪಟ್ಟದ್ದೇವರು ಆಧ್ಯಾತ್ಮ ರತ್ನ: ದಿನೇಶ್ ಅಮೀನ್ ಮಟ್ಟು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 5:45 IST
Last Updated 25 ಆಗಸ್ಟ್ 2025, 5:45 IST
ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಅನುಭವ ಮಂಟಪದಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪದಲ್ಲಿ ಹಿರಿಯ ಪತ್ರಕರ್ತ ದಿನೇಶ ಅಮೀನಮಟ್ಟು ಮಾತನಾಡಿದರು
ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಅನುಭವ ಮಂಟಪದಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪದಲ್ಲಿ ಹಿರಿಯ ಪತ್ರಕರ್ತ ದಿನೇಶ ಅಮೀನಮಟ್ಟು ಮಾತನಾಡಿದರು   

ಭಾಲ್ಕಿ: ಸ್ವಲ್ಪ ಕೆಲಸ ಮಾಡಿ ಜಾಸ್ತಿ ಪ್ರಚಾರ ಗಿಟ್ಟಿಸಿಕೊಳ್ಳುವವರೇ ಹೆಚ್ಚಿರುವ ಇಂದಿನ ದಿನಗಳಲ್ಲಿ. ಎಷ್ಟೆಲ್ಲ ಸಾಧನೆ ಮಾಡಿದರೂ ಹೆಚ್ಚಿನ ಪ್ರಚಾರ ಪಡೆದುಕೊಳ್ಳದ ಬಸವಲಿಂಗ ಪಟ್ಟದ್ದೇವರು ಆಧ್ಯಾತ್ಮ ರತ್ನ ಆಗಿದ್ದಾರೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಬಣ್ಣಿಸಿದರು.

ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಅನುಭವ ಮಂಟಪದಲ್ಲಿ ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪದಲ್ಲಿ ಅವರು ಮಾತನಾಡಿದರು.

ನಾನಾ ಕಾರಣಗಳಿಗಾಗಿ ಕೋರ್ಟ್ ಮೆಟ್ಟಿಲೇರಿರುವ ಸ್ವಾಮೀಜಿಗಳು ಅನೇಕರಿದ್ದಾರೆ. ಆದರೆ, ಬಸವಲಿಂಗ ಪಟ್ಟದ್ದೇವರು ಅನಾಥ ಮಕ್ಕಳ ಬದುಕಿಗೆ ಬೆಳಕಾಗಲು ಕೋರ್ಟ್ ಮೆಟ್ಟಿಲೇರಿದ್ದು, ತುಂಬಾ ಮಹತ್ವದ ಸಂಗತಿ. ಸಮಾಜಕ್ಕೆ, ಹೆತ್ತವರಿಗೆ ಬೇಡವಾಗಿ ಬೀದಿಗಳಲ್ಲಿ ಬಿದ್ದ ಮಕ್ಕಳನ್ನು ತಂದು ಅವರ ಬದುಕಿಗೆ ಬೆಳಕಾಗುತ್ತಿರುವ ಸ್ವಾಮೀಜಿ ಕಾರ್ಯ ಪುಣ್ಯದ ಕಾರ್ಯ. ಇದಕ್ಕಿಂತ ಮಹಾನ ಕಾರ್ಯ ಮತ್ತೊಂದಿಲ್ಲ ಎಂದು ತಿಳಿಸಿದರು.

ADVERTISEMENT

ವೈದಿಕ ಧರ್ಮಕ್ಕೆ ವಿರುದ್ಧವಾಗಿ ಹುಟ್ಟಿಕೊಂಡಿರುವ ಧರ್ಮವೇ ಬಸವ ಧರ್ಮ. ಬಸವ ಚಳವಳಿ ಜಗತ್ತಿನಲ್ಲಿಯೇ ತುಂಬಾ ವಿಶಿಷ್ಟವಾದ ಚಳುವಳಿ. ಈ ಚಳವಳಿಯಲ್ಲಿ ಕಾರ್ಮಿಕ, ರೈತರ, ದಲಿತರ, ಮಹಿಳೆಯರ, ಭಾಷೆ, ರಾಜಕೀಯ ಸೇರಿದಂತೆ ಎಲ್ಲ ಚಳವಳಿಗಳು ಅಡಗಿವೆ. ಬಸವಣ್ಣನ ಒಳಗಡೆ ಬುದ್ಧ, ಅಂಬೇಡ್ಕರ್‌, ಮಹಾತ್ಮ ಗಾಂಧೀಜಿ, ಪೆರಿಯಾರ್ ನಾರಾಯಣಗುರು ಸೇರಿದಂತೆ ಎಲ್ಲರ ಚಿಂತನೆಗಳು ಇವೆ. ಅದೇ ರೀತಿ ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ಬುದ್ಧ, ಜ್ಯೋತಿಬಾ ಫುಲೆ, ಪೆರಿಯಾರ್ ಸೇರಿದಂತೆ ಎಲ್ಲ ಮಹನೀಯರಲ್ಲಿ ಬಸವಣ್ಣ ಇದ್ದಾನೆ ಎಂದು ತಿಳಿಸಿದರು.

ಬಸವಣ್ಣನ ಹೋರಾಟ ಸಾಮಾಜಿಕ ನ್ಯಾಯದ ಹೋರಾಟವಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದು ಸುಮಾರು ಏಳುವರೆ ದಶಕ ಗತಿಸಿದರು. ಸಂಪತ್ತಿನ ಸಮಾನ ಹಂಚಿಕೆ ಆಗಿಲ್ಲ. ಬಸವಣ್ಣನವರ ಆಶಯಗಳನ್ನು ಈಡೇರಿಸುವಲ್ಲಿ ರಾಜಕಾರಣಿಗಳು ವಿಫಲವಾಗಿದ್ದಾರೆ ಎಂದು ಹೇಳಿದರು.

ಶಿಕ್ಷಣ, ಅನ್ನ ಅನ್ನದಾಸೋಹಕ್ಕೆ ಲಿಂಗಾಯತ ಮಠಗಳು ಕೊಟ್ಟಷ್ಟು ಮಹತ್ವ ದೇಶದ ಯಾವ ಮಠಗಳ ನೀಡಿಲ್ಲ ಎಂದು ತಿಳಿಸಿದರು.

ನಿಜವಾದ ಬಸವ ಅನುಯಾಯಿ ಜಾತಿವಾದಿ, ಕೋಮುವಾದಿ ಆಗಿರಲು ಸಾಧ್ಯವಿಲ್ಲ. ನಿಜ ಬಸವ ಅನ್ಯಾಯಗಳು ಯಾವಾಗಲೂ ಮೂಢನಂಬಿಕೆ, ಅಂಧಶ್ರದ್ಧೆ, ಮಹಿಳಾ ಶೋಷಣೆ, ಅಸಮಾನತೆ, ಲಿಂಗ ಭೇದ ವಿರುದ್ಧ ಮಾತನಾಡುತ್ತಾರೆ. ಭಕ್ತರೇ ಭಾಲ್ಕಿ ಹಿರೇಮಠದ ನಿಜ ಸಂಪತ್ತು ಎಂದು ಹೇಳಿದರು.

ಹಿರೇಮಠದ ಹಿರಿಯ ಸ್ವಾಮೀಜಿ ಬಸವಲಿಂಗ ಪಟ್ಟದ್ದೇವರು, ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಗಂಗಾಬಿಕಾ ಅಕ್ಕ, ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯವಹಿಸಿ ಮಾತನಾಡಿದರು.

ಬೆಂಗಳೂರಿನ ಹಿರಿಯ ಕಾನೂನು ಅಧಿಕಾರಿ ಬಿ.ಎಸ್. ಪಾಟೀಲ, ಸಿದ್ದಯ್ಯ ಸ್ವಾಮೀಜಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಜಾರ್ಜ್, ಶಾಹೀನ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಬ್ದುಲ್ ಖದೀರ್, ಶ್ರೀ ಗುರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉಮಾ ಪ್ರಕಾಶ ಖಂಡ್ರೆ, ಲಾತೂರಿನ ಡಾ. ಅಮರನಾಥ ಸೋಲಪುರೆ, ನವದೆಹಲಿಯ ಕಲ್ಯಾಣ ಕನ್ನಡಿಗರ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ವೈಜಿನಾಥ ಬಿರಾದರ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಸೇರಿದಂತೆ ಇತರರು ಇದ್ದರು.

ದೀಪಕ್ಳ ಠಮಕೆ ನಿರೂಪಿಸಿದರು. ಮಧುಕರ ಗಾಂವ್ಕರ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.