ಮಾತೆ ಗಂಗಾದೇವಿ
ಬಸವಕಲ್ಯಾಣ (ಬೀದರ್ ಜಿಲ್ಲೆ): `ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ನವರಾತ್ರಿ ಹಬ್ಬದಲ್ಲಿ ನಗರದಲ್ಲಿ ಹಮ್ಮಿಕೊಂಡಿರುವ ದಸರಾ ದರ್ಬಾರ್ ಕಾರ್ಯಕ್ರಮ ಗುರು ಬಸವಣ್ಣನವರನ್ನು ಅವಮಾನಿಸುವ ಉದ್ದೇಶ ಹೊಂದಿದ್ದು ಅದನ್ನು ತಡೆಯಬೇಕಾಗಿದೆ' ಎಂದು ಬಸವಕಲ್ಯಾಣ -ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದ್ದಾರೆ.
ಅವರು ಗುರುವಾರ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ. `ಬಸವಾದಿ ಶರಣರಿಗೆ ಮತ್ತು ವಚನ ಸಾಹಿತ್ಯಕ್ಕೆ ಅವಮಾನಿಸುವ ಯಾವುದೇ ಕಾರ್ಯಕ್ರಮ ನಡೆದರೂ ಬಸವಧರ್ಮ ಪೀಠ ಮತ್ತು ರಾಷ್ಟ್ರೀಯ ಬಸವದಳ ಬಲವಾಗಿ ವಿರೋಧಿಸುತ್ತದೆ. ದಾವಣಗೆರೆಯಲ್ಲಿ ಈಚೆಗೆ ಆಯೋಜಿಸಿದ್ದ ಪಂಚಪೀಠಾಧೀಶರ ಶೃಂಗಸಭೆಯಲ್ಲಿ ಬಸವಣ್ಣನವರ ಹೆಸರಿಗೆ ಮಸಿ ಬಳಿಯುವ ಹೇಳಿಕೆ ನೀಡಿ ಸಮಾಜದಿಂದ ಛೀಮಾರಿ ಹಾಕಿಸಿಕೊಂಡವರು ಬಸವಣ್ಣನವರ ನಾಡಿನಲ್ಲೇ ಮತ್ತೆ ದಸರಾ ದರ್ಬಾರ್, ಅಡ್ಡಪಲ್ಲಕ್ಕಿ ನಡೆಸಲು ನಿರ್ಧರಿಸಿರುವುದು ಖಂಡನೀಯ' ಎಂದಿದ್ದಾರೆ.
ದಸರಾ ದರ್ಬಾರ್ ವಿರೋಧಿಸುವುದಕ್ಕಾಗಿ ಆಗಸ್ಟ್ 17 ರಂದು ನಗರದಲ್ಲಿ ಸಭೆ ನಡೆಯಲಿದ್ದು ಜಿಲ್ಲೆ ಹಾಗೂ ನಾಡಿನ ಮಠಾಧೀಶರು ಪಾಲ್ಗೊಳ್ಳುವರು. ಎಲ್ಲ ಬಸವಾಭಿಮಾನಿಗಳು, ವಿವಿಧ ಬಸವಪರ ಸಂಘಟನೆಗಳ ಪ್ರಮುಖರು, ರಾಷ್ಟ್ರೀಯ ಬಸವದಳದ ಪದಾಧಿಕಾರಿಗಳು ತಪ್ಪದೇ ಭಾಗವಹಿಸಿ ಪ್ರತಿಭಟನಾ ಸಂದೇಶದ ಪತ್ರಗಳನ್ನು ಸಲ್ಲಿಸಬೇಕು. ಲಿಂಗಾಯತ ಧರ್ಮ ಹಾಗೂ ಬಸವಣ್ಣನವರ ರಕ್ಷಣೆಗಾಗಿ ಎಲ್ಲರೂ ಕಟಿಬದ್ಧರಾಗುವುದು ಅತ್ಯಂತ ಅಗತ್ಯವಾಗಿದೆ' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.