ಬೀದರ್: ‘ಜಗತ್ತಿಗೆ ಮೊಟ್ಟ ಮೊದಲನೆ ಸಂಸತ್ತು, ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟ ಬಸವಣ್ಣನವರನ್ನು ಹಿಂದೂವಾದಿಯೆಂದು ಬಿಂಬಿಸುವ ಹುನ್ನಾರ ನಡೆಯುತ್ತಿದ್ದು, ಅದರ ಬಗ್ಗೆ ಲಿಂಗಾಯತ ಧರ್ಮೀಯರು ಜಾಗೃತರಾಗಿರಬೇಕು’ ಎಂದು ಬಸವಕಲ್ಯಾಣ ಬಸವಮಹಾಮನೆಯ ಬೆಲ್ದಾಳ ಸಿದ್ದರಾಮ ಶರಣರು ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾ ಬೀದರ್ ಜಿಲ್ಲಾ ಘಟಕದಿಂದ ಶನಿವಾರ ಸಂಜೆ ನಗರದ ಗಾಂಧಿ ಗಂಜ್ ಬಸವೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಿದ್ದ ‘ವಚನ ಮಂಟಪ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಜಾತಿವಾದಿಗಳು ಅನುಭವ ಮಂಟಪ ಕೆಡವಿ ಅದರ ಅಸ್ತಿತ್ವ ಕೊನೆಗಾಣಿಸಲು ಯತ್ನಿಸಿದ್ದರು. ಈಗ ಬಸವಾದಿ ಶರಣರ ಚರಿತ್ರೆ, ಅವರ ಅನುಭವ ಮಂಟಪ, ವಚನ ಸಾಹಿತ್ಯ ಹಾಳುಗೆಡವಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಲಿಂಗಾಯತರು ಎಚ್ಚರದಿಂದ ಇರಬೇಕು. ಮನುಕುಲದ ಲೇಸಿಗೆ ಕೆಲಸ ಮಾಡಿದವರು ಬಸವಾದಿ ಶರಣರು. ಸಮಾಜದ ಪ್ರತಿಯೊಬ್ಬ ಪ್ರಜ್ಞಾವಂತ ಕೂಡ ಇಂತಹ ಹುನ್ನಾರದ ವಿರುದ್ಧ ದನಿ ಎತ್ತಬೇಕು ಎಂದು ತಿಳಿಸಿದರು.
ವೀಣಾ ಬನ್ನಂಜೆ ಎಂಬುವರು ಅನುಭವ ಮಂಟಪದ ಕಟ್ಟಡವಿರಲಿಲ್ಲ ಎಂದಿದ್ದಾರೆ. ಅನುಭವ ಮಂಟಪ ಮಿಥಿಲೆಯಲ್ಲಿತ್ತು ಎಂದು ಹೇಳಿದ್ದಾರೆ. ಆದರೆ, ಅದಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿಯವರೇ ಕಾರ್ಯಕ್ರಮವೊಂದರಲ್ಲಿ ಉತ್ತರ ಕೊಟ್ಟಿದ್ದಾರೆ. ಜಗತ್ತಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟವರು, ‘ಅನುಭವ ಮಂಟಪ’ ಎಂಬ ಸಂಸತ್ತು ಸ್ಥಾಪಿಸಿದವರು ಬಸವಣ್ಣನವರು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ನವದೆಹಲಿಯಲ್ಲಿ ‘ಅನುಭವ ಮಂಟಪಂ’ ಎಂಬ ಕಟ್ಟಡ ಕೂಡ ನಿರ್ಮಿಸಿದ್ದಾರೆ. 12ನೇ ಶತಮಾನದಲ್ಲಿ ಅನುಭವ ಮಂಟಪ ಇತ್ತು ಎನ್ನುವುದಕ್ಕೆ ಹಲವು ಸಾಕ್ಷ್ಯಧಾರಗಳಿವೆ. ಬಸವಣ್ಣನವರು ಮಹಾಮನೆ ಮಾಡಿ, ಅದರೊಳಗೆ ಅನುಭವ ಮಂಟಪ ಸೇರಿದಂತೆ ಎಲ್ಲ ರೀತಿಯ ಚಟುವಟಿಕೆ ನಡೆಸಿಕೊಂಡು ಹೋಗುತ್ತಿದ್ದರು ಎಂದು ಹೇಳಿದರು.
ಶರಣರು ಗುಡಿ, ಗುಂಡಾರ ಕಟ್ಟಲಿಲ್ಲ. ಅನುಭವ ಮಂಟಪ ಸ್ಥಾಪಿಸಿ, ಚಿಂತನ–ಮಂಥನಕ್ಕೆ ವೇದಿಕೆ ಒದಗಿಸಿದ್ದರು. ಎಲ್ಲ ಕಾಯಕ ಮಾಡುವ ಶರಣರು ಅದರೊಳಗೆ ಇದ್ದರು. ಹಡಪದ ಅಪ್ಪಣ್ಣ, ಹರಳಯ್ಯ, ಡೋಹರ ಕಕ್ಕಯ್ಯ ಸೇರಿದಂತೆ ಹೀಗೆ ಎಲ್ಲ ವರ್ಗದವರು ಅಲ್ಲಿದ್ದರು. ಅಂಗೈಯೊಳಗೆ ಲಿಂಗಕೊಟ್ಟು ದೇವರನ್ನು ತೋರಿಸಿದ್ದರು. ಅದು ಕೇವಲ ಪಂಡಿತರ ಅನುಭವ ಮಂಟಪ ಆಗಿರಲಿಲ್ಲ. ವಚನ ಸಾಹಿತ್ಯಕ್ಕೆ ಯಾವ ವೇದ, ಆಗಮಗಳು ಸರಿ ಹೊಂದುವುದಿಲ್ಲ. ವೀಣಾ ಬನ್ನಂಜೆಯವರನ್ನು ಟೀಕಿಸುವ ಉದ್ದೇಶ ನಮಗಿಲ್ಲ. ಆದರೆ, ವಚನ ಸಾಹಿತ್ಯ, ಬಸವಾದಿ ಶರಣರ ಬಗ್ಗೆ ಇಲ್ಲಸಲ್ಲದ ವಿಚಾರ ಮಾತನಾಡಿದರೆ ಸುಮ್ಮನೆ ಕೂರಲ್ಲ ಎಂದು ಎಚ್ಚರಿಕೆಯ ಧಾಟಿಯಲ್ಲಿ ತಿಳಿಸಿದರು.
ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು ಮಾತನಾಡಿ, ನೋವಿರಲಿ–ನಗುವಿರಲಿ ಸದಾ ಸಮಾಧಾನಿಯಾಗಿರಬೇಕು. ಇದ್ದುದರಲ್ಲಿಯೇ ಖುಷಿಯಾಗಿರಬೇಕು ಎಂದು ಹೇಳಿದವರು ಬಸವಾದಿ ಶರಣರು. ಅಂತಹ ಶರಣರ ಮಾರ್ಗದಲ್ಲಿ ನಡೆದರೆ ಸಮಾಧಾನದ ಬದುಕು ಸಾಗಿಸಬಹುದು ಎಂದರು.
ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಮಾತನಾಡಿ, ವಚನಗಳ ಚಿಂತನೆಯ ಕಾರ್ಯಕ್ರಮಕ್ಕೆ ವಚನ ಮಂಟಪ ಹೆಸರಿಟ್ಟಿರುವುದು ಅತ್ಯಂತ ಸೂಕ್ತವಾಗಿದೆ. ಇದು, ಐತಿಹಾಸಿಕ ಶೀರ್ಷಿಕೆ. ಜನಪದರು ವಚನ ಮಂಟಪ ಪದವನ್ನು ಬಳಸಿದ್ದರು ಎಂದು ಹೇಳಿದರು.
ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಪ್ರತಿ ಅಮಾವಾಸ್ಯೆಯೆಂದು ವಚನ ಮಂಟಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಂಸದ ಸಾಗರ್ ಖಂಡ್ರೆ ಕಾರ್ಯಕ್ರಮ ಉದ್ಘಾಟಿಸಿದರು. ಹುಲಸೂರಿನ ಶಿವಾನಂದ ಸ್ವಾಮೀಜಿ, ಭಾರತೀಯ ಬಸವ ಬಳಗದ ರಾಜ್ಯ ಘಟಕದ ಅಧ್ಯಕ್ಷ ಬಾಬುವಾಲಿ, ಮಹಾಸಭಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಜೊನ್ನಿಕೇರಿ, ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಮಿರ್ಚೆ, ಪ್ರಧಾನ ಕಾರ್ಯದರ್ಶಿ ಜಯದೇವಿ ಯದಲಾಪೂರೆ, ಸುವರ್ಣಾ ಬಸವರಾಜ ಧನ್ನೂರ ಪಾಲ್ಗೊಂಡಿದ್ದರು.
‘ಕಾಲಾನಂತರದಲ್ಲಿ ವೀರಶೈವ ಪದ ಸೇರ್ಪಡೆ’
‘ಸದ್ಯ ನಮಗೆ 22 ಸಾವಿರ ವಚನಗಳು ಲಭಿಸಿವೆ. ಅವುಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸಬೇಕಿದೆ. ಕೆಲ ವಚನಗಳಲ್ಲಿ ಬೇಡವಾದ ಸಂಗತಿಗಳು ವೀರಶೈವ ಎಂಬ ಪದವನ್ನು ಕಾಲಾನಂತರದಲ್ಲಿ ಸೇರಿಸಲಾಗಿದೆ. ಹೆಚ್ಚಿನ ಸಂಶೋಧನೆ ಮೂಲಕ ಅವುಗಳ ಶುದ್ಧೀಕರಣ ಕಾರ್ಯ ನಡೆದಿದೆ’ ಎಂದು ಬೆಲ್ದಾಳ ಸಿದ್ದರಾಮ ಶರಣರು ಹೇಳಿದರು.
ಜಾತಿವಾದಿಗಳು ಶರಣರ ಅನೇಕ ವಚನಗಳು ಸಿಗದಂತೆ ಮಾಡಿದ್ದಾರೆ. ಆದರೆ ಸತತವಾಗಿ ಅವುಗಳನ್ನು ಹೊರತೆಗೆಯುವ ಕೆಲಸ ನಡೆದಿದೆ. ಏಳು ಲಕ್ಷ ತಾಡೋಲೆ ತಾಳೆಗರಿಗಳಿವೆ. ಅವುಗಳಿಂದ ವಚನ ಮುದ್ರಿಸುವ ಕೆಲಸ ನಡೆದಿದೆ ಎಂದು ತಿಳಿಸಿದರು.
ವಚನಗಳು ವೇದಗಳು ಹಾಗೂ ಉಪನಿಷತ್ತುಗಳ ಮುಂದುವರೆದ ಭಾಗ ಎಂದು ಪೇಜಾವರ ಸ್ವಾಮೀಜಿ ಸೇರಿದಂತೆ ಕೆಲ ಸ್ವಾಮೀಜಿಗಳು ಹೇಳಿರುವುದು ಸರಿಯಲ್ಲ. ಲಿಂಗಾಯತ ಸ್ವತಂತ್ರ ಧರ್ಮವಾದುದು. ಅದಕ್ಕೆ ಪೂರಕವಾದ ಎಲ್ಲ ದಾಖಲೆಗಳು ನಮ್ಮ ಬಳಿ ಇವೆ. ವಚನ ಸಾಹಿತ್ಯ ವೇದಾಗಮನಗಳ ಮೂಲ ಅಲ್ಲ ಬಸವಾದಿ ಶರಣರ ಸ್ವಾನುಭವದಿಂದ ಹುಟ್ಟಿಕೊಂಡಿದ್ದು.ಬಸವಣ್ಣನವರ ವಚನಗಳಲ್ಲಿ ವೀರಶೈವ ಪದ ಬಂದಿದೆ ಎಂದು ಪಂಚಾಚಾರ್ಯರು ಹೇಳುತ್ತಾರೆ. ಆದರೆ ಆ ಪದ ಕಾಲಾನಂತರದಲ್ಲಿ ವಚನದೊಳಗೆ ಸೇರಿಸಲಾಗಿದೆ. ಮೂಲ ವಚನಗಳಲ್ಲಿ ಅದರ ಉಲ್ಲೇಖವಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.