ADVERTISEMENT

ಬೀರಲಿಂಗೇಶ್ವರ ಸಮುದಾಯ ಭವನಕ್ಕೆ ₹1 ಕೋಟಿ: ಶಾಸಕ ಡಾ.ಸಿದ್ದಲಿಂಗಪ್ಪ ಭರವಸೆ

ಕನಕದಾಸ ಜಯಂತಿ: ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 5:36 IST
Last Updated 8 ಡಿಸೆಂಬರ್ 2025, 5:36 IST
ಹುಮನಾಬಾದ್ ಪಟ್ಟಣದಲ್ಲಿ ಕನಕದಾಸರ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ಡಾ ಸಿದ್ದಲಿಂಗಪ್ಪ ಪಾಟೀಲ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.‌
ಹುಮನಾಬಾದ್ ಪಟ್ಟಣದಲ್ಲಿ ಕನಕದಾಸರ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ಡಾ ಸಿದ್ದಲಿಂಗಪ್ಪ ಪಾಟೀಲ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.‌   

ಹುಮನಾಬಾದ್: ‘ಪಟ್ಟಣದಲ್ಲಿ ಬೀರಲಿಂಗೇಶ್ವರ ಸಮುದಾಯ ಭವನಕ್ಕೆ ₹1 ಕೋಟಿ ಅನುದಾನ ಮಂಜೂರು ಮಾಡಿದ್ದೇನೆ. ಅನುದಾನ ಸಾಕಾಗದಿದ್ದರೆ ದದಿದ್ದರೆ ಮತ್ತೆ ₹50 ಲಕ್ಷ ನೀಡಲಾಗುವುದು’ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಭರವಸೆ ನೀಡಿದರು.

ಪಟ್ಟಣದ ತೇರು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹುಮನಾಬಾದ್ ವಿಧಾನಸಭಾ ಕ್ಷೇತ್ರದ ಕುರುಬ ಮತ್ತು ಗೊಂಡ ಸಮಾಜದ ಮತಗಳಿಂದ ಮಾಜಿ ಸಚಿವ ರಾಜಶೇಖರ ಪಾಟೀಲ ಅವರು, ಸುಮಾರು 4 ಬಾರಿ ಶಾಸಕ, ಸಚಿವರಾಗಿದ್ದಾರೆ. ಆದರೆ ಸಮಾಜಕ್ಕೆ ಕೊಡುಗೆ ಏನಿದೆ. ನಾನು ಶಾಸಕನಾದ ಬಳಿಕ ವಾಲ್ಮೀಕಿ ಸಮುದಾಯದ ಭವನಕ್ಕೆ ₹1 ಕೋಟಿ, ಹೇಮರೆಡ್ಡಿ ಮಲ್ಲಮ್ಮ ಸಮುದಾಯದ ಭವನಕ್ಕೆ ₹40 ಲಕ್ಷ್ಮ ಅನುದಾನ ನೀಡಿದ್ದೇನೆ. ಮುಂಬರುವ ದಿನಗಳಲ್ಲಿ ಕ್ಷೇತ್ರದ ಎಲ್ಲಾ ಸಮುದಾಯದಗಳ ಜನರ ಅಭಿವೃದ್ಧಿಗೆ ಶ್ರಮಿಸಲಾಗುವುದು’ ಎಂದು ಹೇಳಿದರು.

ADVERTISEMENT

ಮಾಜಿ ಸಚಿವ ಬಂಡೇಪ್ಪ ಖಾಶೆಂಪೂರ ಮಾತನಾಡಿ , ‘ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಎಲ್ಲ ಮಹಾಪುರುಷರು ಒಂದು ಜಾತಿಗೆ ಸೀಮಿತವಾಗಿಲ್ಲ. ಕನಕದಾಸರರಂತಹ ಮಹಾತ್ಮರ ಜಯಂತಿ ಹುಮನಾಬಾದ್ ಪಟ್ಟಣದಲ್ಲಿ ಮುಂದಿನ ಬಾರಿ ಪಕ್ಷಾತೀತವಾಗಿ ಆಚರಿಸಬೇಕು’ ಎಂದು ಸಲಹೆ ನೀಡಿದರು.

ಕಾಗಿನೆಲೆ ಶಾಖಾ ಮಠದ ಚಿಕ್ಕಲಿಂಗ ಬೀರದೇವರು, ಉಚ್ಚಾದ ಗೋಪಾಲ ಮುತ್ಯಾ, ಸಿಂಧನಕೇರಾದ ಪ್ರವೀಣ ಪೂಜಾರಿ, ವಿಧಾನ ಪರಿಷತ್ ಮಾಜಿ ಸಭಾಪತಿ ರಘುನಾಥರಾವ ವಲ್ಕಾಪುರೆ, ಜನರ ಧ್ವನಿ ಸಂಘಟನೆ ರಾಜ್ಯಾಧ್ಯಕ್ಷ ಅಂಕುಶ ಗೋಖಲೆ, ರೆಡ್ಡಿ ಸಮಾಜದ ಮುಖಂಡ ಬ್ಯಾಂಕ್ ರೆಡ್ಡಿ, ಶಿವರಾಜ ಚೀನಕೇರಿ, ಸಂತೋಷ ಪಾಟೀಲ, ಬಾಬುರಾವ ಮಲ್ಕಾಪುರೆ, ಗುಂಡು ರೆಡ್ಡಿ ಕಮಲಾಪುರೆ, ಅನೀಲ ಪಸರ್ಗಿ, ನಾರಾಯಣ ರಾಂಪುರೆ, ಗಜೇಂದ್ರ ಕನಕಟಕರ, ವಿನಾಯಕ ಹಂದಿಕೇರಾ, ಪವನಗೊಂಡ, ಖಂಡಪ್ಪ, ಪಂಡಿತ, ಅಂಬರೀಷ್, ಜಗದೀಶ, ಮಲ್ಲಿಕಾರ್ಜುನ, ಗುಂಡಪ್ಪ, ಸಂತೋಷ, ಬಸವರಾಜ ಸೇರಿದಂತೆ ಇತರರು ಹಾಜರಿದ್ದರು.‌

50ವರ್ಷಗಳ ಆಳಿದವರ ಕೊಡುಗೆ ಏನು?

ಹುಮನಾಬಾದ್ ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು 50 ವರ್ಷಗಳಿಂದ ರಾಜಶೇಖರ ಪಾಟೀಲ ಅವರ ಒಂದೇ ಕುಟುಂಬ ಅಧಿಕಾರ ಮಾಡಿದೆ. ಆದರೆ ಕುರುಬ ಸಮಾಜಕ್ಕೆ ಅವರ ಕೊಡುಗೆ ಏನಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ರಘುನಾಥರಾವ ಮಲ್ಕಾಪುರೆ ಪ್ರಶ್ನಿಸಿದರು. ಡಾ.ಸಿದ್ದಲಿಂಗಪ್ಪ ಪಾಟೀಲ ಅವರು ಶಾಸಕರಾಗಿ ಆಯ್ಕೆಯಾದ ನಂತರ ಮೊದಲು ಕುರುಬ ಸಮುದಾಯ ಭವನ ನಿರ್ಮಾಣಕ್ಕೆ ₹ 1 ಕೋಟಿ ಅನುದಾನ ನೀಡಿರುವುದು ಸಂತಸ ತಂದಿದೆ. ಬರುವ ದಿನಗಳಲ್ಲಿ ಈ ಭವನ ಸಂಪೂರ್ಣವಾಗಿ ನಿಮ್ಮ ಅನುದಾನದಲ್ಲಿ ನಿರ್ಮಾಣ ಆಗಬೇಕು. ನೀವೇ ಅದರ ಉದ್ಘಾಟನೆ ಮಾಡಬೇಕು ಎಂದರು.

ಒಂದೇ ಜಯಂತಿ ಮಾಡುವಂತೆ ಹೇಳಿದ್ದೆ: ಮಹಾಪುರುಷರ ಜಯಂತಿಯಲ್ಲಿ ರಾಜಕೀಯ ಬೇಡ. ಪಕ್ಷಾತೀತವಾಗಿ ಕನಕದಾಸ ಜಯಂತಿ ಆಚರಿಸಿ ಎಂದು ವಿಧಾನ ಪರಿಷತ್ ಸದಸ್ಯ ಭೀಮಾರಾವ ಪಾಟೀಲ ಅವರಿಗೆ ಹೇಳಿದ್ದೆ. ಅದಕ್ಕೆ ಸಮ್ಮತಿಸಿದ್ದ ಅವರು, ನಾಲ್ಕು ದಿನಗಳಲ್ಲೇ ಮಾಜಿ ಸಚಿವ ರಾಜಶೇಖರ ಪಾಟೀಲ ಅವರಿಂದ ಡಿ.7ರಂದು ಕನಕದಾಸರ ಜಯಂತಿ ಕಾರ್ಯಕ್ರಮದ ಬಿತ್ತಿ ಪತ್ರ ಬಿಡುಗಡೆ ಮಾಡಿದರು.‌ ಆ ಬಿತ್ತಿ ಪತ್ರದಲ್ಲಿ ಸಮಾಜದವರಿಗಿಂತಲು ಅವರ ಕುಟುಂಬದ ಸದಸ್ಯರ ಭಾವಚಿತ್ರಗಳಿದ್ದವು. ನಂತರ ಇನ್ನೂ ಕೆಲವು ಸಮಾಜದ ಮುಖಂಡರು ನನ್ನ ಬಳಿ ಬಂದಾಗ, ಅರ್ಥಪೂರ್ಣ ಕನಕದಾಸರ ಜಯಂತಿ ಆಚರಿಸೋಣ ಎಂದು ಹೇಳಿದ್ದೆ ಎಂದು ಹೇಳಿದರು.

ಉಡಿ ತುಂಬುವ ಕಾರ್ಯಕ್ರಮ: ಕನಕದಾಸ ಜಯಂತಿಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರಿಗೆ ಉಡಿತುಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರಿಗೆ ಸೀರೆಗಳನ್ನು ವಿತರಿಸಲಾಯಿತು. ವಿತರಣೆ ವಿಡಿಯೊಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡಿದವು.

ಜಯಂತಿಗೆ ಬಂದ ಮಹಿಳೆಯರಿಗೆ ಸೀರೆ ವಿತರಣೆ ಮಾಡಲಾಯಿತು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.