ADVERTISEMENT

ಗೊಬ್ಬರ ಕೇಳಿದ ವ್ಯಕ್ತಿಗೆ ಕೇಂದ್ರ ಸಚಿವ ಖೂಬಾ ತರಾಟೆ: ಮೊಬೈಲ್‌ ಸಂಭಾಷಣೆ ವೈರಲ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ-ಚರ್ಚೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 16:08 IST
Last Updated 16 ಜೂನ್ 2022, 16:08 IST
ಭಗವಂತ ಖೂಬಾ
ಭಗವಂತ ಖೂಬಾ   

ಔರಾದ್/ ಬೀದರ್‌: ಗೊಬ್ಬರ ಕಳುಹಿಸುವಂತೆ ಫೋನ್‌ ಕರೆಯಲ್ಲಿ ಕೇಳಿದ ತಾಲ್ಲೂಕಿನ ಹೆಡಗಾಪುರ ಗ್ರಾಮದ ವ್ಯಕ್ತಿಯೊಬ್ಬರನ್ನು ಕೇಂದ್ರ ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಅವರು ತರಾಟೆಗೆ ತೆಗೆದುಕೊಂಡ ಮೊಬೈಲ್‌ ಸಂಭಾಷಣೆಯ ರೆಕಾರ್ಡ್‌ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದೆ.

ಕುಶಾಲ ಪಾಟೀಲ ಎನ್ನುವವರು ಕೇಂದ್ರ ಸಚಿವರಿಗೆ ಕರೆ ಮಾಡಿ, ‘ನಮ್ಮ ಊರಲ್ಲಿ ಗೊಬ್ಬರ ಸಿಗುತ್ತಿಲ್ಲ. ಜನ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಹೀಗಾದರೆ ನಿಮಗೆ ಮುಂದೆ ಚುನಾವಣೆಯಲ್ಲಿ ತೊಂದರೆಯಾಗುತ್ತದೆ’ ಎಂದು ಹೇಳಿದ್ದಾರೆ.

ಇದಕ್ಕೆ ಕೇಂದ್ರ ಸಚಿವರು ಖಾರವಾಗಿಯೇ ಪ್ರತಿಕ್ರಿಯಿಸಿ ‘ಗೊಬ್ಬರ ಮನೆ ಮನೆಗೆ ಹಂಚುವ ಕೆಲಸ ನನ್ನದಲ್ಲ. ನಾನು ಕೇಂದ್ರ ಸಚಿವ. ಯಾವ ರಾಜ್ಯಕ್ಕೆ ಎಷ್ಟು ಗೊಬ್ಬರ ಕೊಡಬೇಕು ಅಷ್ಟು ಕೊಟ್ಟಿದ್ದೇನೆ. ನಿಮ್ಮ ಎಂಎಲ್ಎ ಇದ್ದಾನೆ. ಅಧಿಕಾರಿಗಳು ಇದ್ದಾರೆ ಅವರನ್ನು ಕೇಳಿ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ADVERTISEMENT

ಸಚಿವರ ಮಾತಿಗೆ ತಿರುಗೇಟು ನೀಡಿದ ಕುಶಾಲ ಪಾಟೀಲ ‘ನೀವು ಈ ರೀತಿ ಮಾತನಾಡಿದರೆ ಅಂಜುವ ವ್ಯಕ್ತಿ ನಾನಲ್ಲ. ನಾನು ಎಲ್ಲದಕ್ಕೂ ತಯಾರಿದ್ದೀನಿ’ ಎನ್ನುವ ಖೂಬಾ ಅವರ ಜತೆಗಿನ ನಾಲ್ಕು ನಿಮಿಷದ ಸಂಭಾಷಣೆಯ ರೆಕಾರ್ಡ್ ಎಲ್ಲೆಡೆ ಹರಿದಾಡುತ್ತಿದೆ.

ಸಚಿವ ಖೂಬಾ ಅವರ ಆಪ್ತ ಬಿಜೆಪಿಯ ದೀಪಕ ಪಾಟೀಲ ಚಾಂದೋರಿ ಅವರು ಹೇಳಿಕೆ ನೀಡಿದ್ದು, ‘ಕೇಂದ್ರ ಸಚಿವರ ಜತೆ ದೂರವಾಣಿಯಲ್ಲಿ ಮಾತನಾಡಿದ ವ್ಯಕ್ತಿ ರೈತನಲ್ಲ. ಆತ ಸರ್ಕಾರಿ ಶಾಲೆಯ ಶಿಕ್ಷಕ. ಜನಪ್ರತಿನಿಧಿಗಳ ಜತೆ ಕೆರಳಿಸುವ ರೀತಿಯಲ್ಲಿ ಮಾತನಾಡಿ ಅದನ್ನು ರಿಕಾರ್ಡ್ ಮಾಡಿ ನಂತರ ಬ್ಲ್ಯಾಕ್‌ಮೇಲ್ ಮಾಡುವ ಕೆಲಸ ಅವರದ್ದು. ಹೀಗಾಗಿ ಅವರು ಬಿಡುಗಡೆ ಮಾಡಿದ ಧ್ವನಿ ಸುರುಳಿಯ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಬಾರದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.