ಭಗವಂತ ಖೂಬಾ
ಬೀದರ್: ‘ಡಿಸಿಸಿ ಬ್ಯಾಂಕ್‌ನವರು ಮೈಕ್ರೋ ಫೈನಾನ್ಸ್ ತರಹ ಕೆಲಸ ನಿರ್ವಹಿಸುತ್ತಿದ್ದು, ರೈತರಿಗೆ ಬ್ಯಾಂಕಿಗೆ ಹೋಗಲು ಹೆದರಿಕೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಕೇಂದ್ರದ ಮಾಜಿಸಚಿವರೂ ಆದ ಬಿಜೆಪಿ ಮುಖಂಡ ಭಗವಂತ ಖೂಬಾ ಆರೋಪಿಸಿದ್ದಾರೆ.
ಪ್ರೋತ್ಸಾಹ ಧನಕ್ಕೂ ಕತ್ತರಿ ಹಾಕುವ ಕೆಲಸ ಮಾಡಲಾಗುತ್ತಿದೆ ಎಂದು ರೈತರು ನನ್ನ ಗಮನಕ್ಕೆ ತಂದಿದ್ದಾರೆ. ಆದರೆ, ಪ್ರಧಾನಿಗಳು ರೈತರಿಗೆ ಸಹಾಯವಾಗಲಿ, ಅವರ ಸಣ್ಣ ಪುಟ್ಟ ಅವಶ್ಯಕತೆಗಳು ಈಡೇರಲಿ ಎನ್ನುವ ಉದ್ದೇಶದಿಂದ ಪ್ರೋತ್ಸಾಹ ಧನ ನೀಡುತ್ತಿದ್ದಾರೆ. ಡಿಸಿಸಿ ಬ್ಯಾಂಕಿನವರು ಯಾವುದೇ ಕಾರಣಕ್ಕೂ ಈ ಪ್ರೋತ್ಸಾಹ ಧನವನ್ನು ತಮ್ಮ ಬ್ಯಾಂಕಿನ ರೈತರ ಸಾಲಗಳಲ್ಲಿ ಕಟ್ ಮಾಡಿಕೊಳ್ಳದೆ, ರೈತರಿಗೆ ಈ ಹಣ ನೀಡಬೇಕೆಂದು ಭಾನುವಾರ ಹೊರಡಿಸಿರುವ ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
ಕಾಂಗ್ರೆಸ್‌ನವರು ಹೆಚ್ಚೂ ಕಡಿಮೆ 60 ವರ್ಷಗಳ ಕಾಲ ಈ ದೇಶದಲ್ಲಿ ಅಧಿಕಾರ ನಡೆಸಿದ್ದಾರೆ. ರೈತರಾಗಲಿ, ಮಹಿಳೆಯರಾಗಲಿ, ಬಡವರ ಬಗ್ಗೆ ಕಾಳಜಿ ತೋರಿಲ್ಲ. ಆದರೆ, ಮೋದಿಯವರು ಬಂದ ನಂತರ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತೆ ಸಹಾಯ ಹಸ್ತ ಚಾಚುತ್ತಿದ್ದಾರೆ. ಎಲ್ಲರ ಅಭಿವೃದ್ಧಿಗೆ ಯೋಜನೆಗಳು ರೂಪಿಸುತ್ತಿದ್ದಾರೆ ಎಂದಿದ್ದಾರೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 20ನೇ ಕಂತಿನ ಪ್ರೋತ್ಸಾಹ ಧನವನ್ನು ದೇಶದ ರೈತರ ಖಾತೆಗೆ ಜಮೆ ಮಾಡಿದ್ದಾರೆ. ಇದರಲ್ಲಿ ಬೀದರ್ ಲೋಕಸಭಾ ಕ್ಷೇತ್ರದ 3 ಲಕ್ಷ ರೈತರ ಖಾತೆಗೆ ಒಟ್ಟು ₹60 ಕೋಟಿ ಪ್ರೋತ್ಸಾಹ ಧನ ಜಮೆಯಾಗಿರುತ್ತದೆ. 3 ಲಕ್ಷ ರೈತರ ಪೈಕಿ ಬೀದರ್ ಡಿಸಿಸಿ ಬ್ಯಾಂಕ್ ಮೂಲಕ ಒಟ್ಟು 57,916 ರೈತರ ಖಾತೆಗೆ ₹11.58 ಕೋಟಿ ಜಮೆ ಯಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.