ADVERTISEMENT

ಭಾಲ್ಕಿ: ಮನಮೋಹಕ ಭಾಲ್ಕೇಶ್ವರ ದೇವಸ್ಥಾನ

ಭೀಕರ ಬರಗಾಲದಲ್ಲೂ ಬತ್ತದ ದೇವಸ್ಥಾನದ ಸಿಹಿ ನೀರಿನ ಬಾವಿ

ಬಸವರಾಜ ಎಸ್.ಪ್ರಭಾ
Published 14 ನವೆಂಬರ್ 2021, 6:27 IST
Last Updated 14 ನವೆಂಬರ್ 2021, 6:27 IST
ಭಾಲ್ಕೇಶ್ವರ ದೇವಸ್ಥಾನದಲ್ಲಿರುವ ಬಾವಿ
ಭಾಲ್ಕೇಶ್ವರ ದೇವಸ್ಥಾನದಲ್ಲಿರುವ ಬಾವಿ   

ಭಾಲ್ಕಿ: ಪ್ರಶಾಂತ ವಾತಾವರಣ, ಉದ್ದನೆಯ ಕಲ್ಲಿನಲ್ಲಿ ಕೆತ್ತಿರುವ ಉಗ್ರ ನರಸಿಂಹ ದೇವರ ಚಿತ್ರಗಳು, ಕಮಾನು ಮಾದರಿಯ ಒಳಾಂಗಣ, ಭೀಕರ ಬರಗಾಲದಲ್ಲೂ ಬತ್ತದ ಸಿಹಿ ನೀರಿನ ಬಾವಿ, ಪಟ್ಟಣದಲ್ಲಿರುವ ಹನ್ನೆರಡು ಜೋತಿರ್ಲಿಂಗಗಳಲ್ಲಿ ಒಂದಾಗಿರುವ ಭಾಲ್ಕೇಶ್ವರ ಆತ್ಮಲಿಂಗ..

ಇವು ಭಾಲ್ಕಿ-ಹುಮನಾಬಾದ್‌ ಮುಖ್ಯರಸ್ತೆಯ ಪಕ್ಕದಲ್ಲಿರುವ ಐತಿಹಾಸಿಕ ಭಾಲ್ಕೇಶ್ವರ ದೇವಸ್ಥಾನದ ವಿಶೇಷತೆಗಳು. ಪಟ್ಟಣದ ನಿವಾಸಿಗಳು ತಮ್ಮ ಮನೆಗಳಲ್ಲಿ ಏನೇ ಶುಭ ಕಾರ್ಯ ಪ್ರಾರಂಭಿಸುವುದಕ್ಕೂ ಮುನ್ನ ಭಾಲ್ಕೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿಯೇ ಒಳ್ಳೆಯ ಕಾರ್ಯಕ್ಕೆ ಚಾಲನೆ ನೀಡುತ್ತಾರೆ.

ಭಾಲ್ಕಿ ನಗರದ ಮೊದಲ ಹೆಸರು ಭದ್ರಾವತಿ ಎಂದಿತ್ತು. ನಂತರ ಭಾಲ್ಕೇಶ್ವರ ದೇವಸ್ಥಾನದ ಹೆಸರಿನಿಂದಲೇ ಭಾಲ್ಕಿ ಎಂದಾಗಿದೆ. ದೇವಸ್ಥಾನದಲ್ಲಿರುವ ಶಿವಲಿಂಗ ಉದ್ಭವ ಲಿಂಗವಾಗಿದೆ. ಮುಖದ ಮೇಲೆ ಸಿಂಹಳವಾದಾಗ (ಸಣ್ಣಗಾತ್ರದ ಹುಣ್ಣು) ದೇವಸ್ಥಾನದಲ್ಲಿರುವ ಉಗ್ರ ನರಸಿಂಹ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರೆ ಸಿಂಹಳಗಳು ಮಾಯವಾಗುತ್ತವೆ ಎಂಬುದು ಭಕ್ತರ ನಂಬಿಕೆ.

ADVERTISEMENT

ಪ್ರತಿ ಸೋಮವಾರ ದೇವಸ್ಥಾನದಲ್ಲಿ ರುದ್ರಾಭಿಷೇಕ ನಡೆಯುತ್ತದೆ. ಏಪ್ರಿಲ್‌ ತಿಂಗಳಿನಲ್ಲಿ ಬರುವ ಏಕಾದಶಿಯಿಂದ ಹುಣ್ಣಿಮೆಯ ನಂತರದ ದಿನದಂದು ಸಾವಿರಾರು ಭಕ್ತರ ಮಧ್ಯೆ ಭಾಲ್ಕೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ ವಿಜೃಂಭಣೆಯಿಂದ ನಡೆಯುತ್ತದೆ.

ದಸರಾ ಹಬ್ಬದಂದು ಸಹ ಭಾಲ್ಕೇಶ್ವರ ದೇವಸ್ಥಾನದಿಂದ ಮಾಣಿಕಪ್ರಭು ದೇವಸ್ಥಾನದವರೆಗೆ ಪಲ್ಲಕ್ಕಿ ಮೆರವಣಿಗೆ ನಡೆಯುತ್ತದೆ. ಶ್ರಾವಣ ಮಾಸ ತಿಂಗಳಿನ ಪ್ರತಿ ಸೋಮವಾರ ಕನಿಷ್ಠ 20 ಸಾವಿರ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಶಿವಲಿಂಗ, ಭಾಲ್ಕೇಶ್ವರ ದೇವರ ದರುಶನ ಪಡೆದು ಪುನೀತರಾಗುತ್ತಾರೆ ಎಂದು ಭಕ್ತರಾದ ಗುರುನಾಥ, ದಿಲೀಪ ಜೊಳದಪಕೆ, ಜಯರಾಜ ಕೊಳ್ಳಾ ಹೇಳುತ್ತಾರೆ.

ದೇವಸ್ಥಾನದಲ್ಲಿರುವ ಸಿಹಿ ನೀರಿನ ಬಾವಿ ಭೀಕರ ಬರಗಾಲದಲ್ಲೂ ಬತ್ತಿಲ್ಲ. ಈ ಮುಂಚೆ ಪಟ್ಟಣದ ಬಹುತೇಕ ನಿವಾಸಿಗಳು ಈ ಬಾವಿಯಿಂದ ನೀರನ್ನು ಕೊಂಡೊಯ್ಯುತ್ತಿದ್ದರು. ಸುರಕ್ಷತೆಯ ದೃಷ್ಟಿಯಿಂದ ಬಾವಿಗೆ ಕಬ್ಬಿಣದ ಜಾಲಿ ಅಳವಡಿಸಲಾಗಿದೆ. ಭಾಲ್ಕೇಶ್ವರ ದೇವರ ದರ್ಶನಕ್ಕೆ ನಿತ್ಯವೂ ಜಿಲ್ಲೆ ಸೇರಿದಂತೆ ವಿವಿಧೆಡೆ ಭಕ್ತರು ಆಗಮಿಸುತ್ತಾರೆ. ಶುದ್ಧ ಮನಸ್ಸಿನಿಂದ ಬೇಡಿದ್ದನ್ನು ಕರುಣಿಸುವ ಶಕ್ತಿ ಭಾಲ್ಕೇಶ್ವರ ದೇವರು ಮತ್ತು ಶಿವಲಿಂಗಕ್ಕೆ ಇದೆ ಎಂದು ಅರ್ಚಕ ಪ್ರಮೋದಗಿರ್‌, ಭಕ್ತರು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.