
ಭಾಲ್ಕಿ: ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ಸುಮಾರು 13 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ 11 ದಿನಗಳ ಜಾತ್ರೆಯು ಗ್ರಾಮವಾಸಿಗಳಲ್ಲಿ ಆಧ್ಯಾತ್ಮಿಕ ವಾತಾವರಣ ಸೃಷ್ಟಿಸಿ, ಯುವಕರನ್ನು, ಜನರನ್ನು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತಿದೆ.
ಹಾವಗಿಲಿಂಗೇಶ್ವರ ಶಿವಾಚಾರ್ಯರು ಮಠಕ್ಕೆ ಪೀಠಾಧಿಪತಿ ಆಗಿ, ಪಾಳು ಬಿದ್ದ ಭೂಮಿಯನ್ನು ಭಕ್ತರ ಸಹಕಾರದಿಂದ ಪಾವನ ಭೂಮಿಯನ್ನಾಗಿಸಲು ಆರಂಭಿಸಿರುವ ಸಿದ್ಧರಾಮೇಶ್ವರ ನಮ್ಮೂರ ಜಾತ್ರಾ ಮಹೋತ್ಸವ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ಜಾತ್ರೆ ಆರಂಭದಿಂದ ಸಮಾರೋಪದವರೆಗೂ ಪ್ರತಿನಿತ್ಯ ನಡೆಯುವ ಧಾರ್ಮಿಕ ಕಾರ್ಯಕ್ರಮ ಭಕ್ತರಲ್ಲಿ ಸದ್ಭಾವ ಮೂಡುವಂತೆ ಮಾಡಿದೆ ಎನ್ನುತ್ತಾರೆ ರಮೇಶ ಪಾಟೀಲ ಕರಡ್ಯಾಳ, ಶಿವಕುಮಾರ ಗುಮ್ತಾ.
ಭಾನುವಾರ ನಡೆದ ಸಿದ್ಧರಾಮೇಶ್ವರ ನಮ್ಮೂರ ಜಾತ್ರಾ ಮಹೋತ್ಸವ ಸಮಾರೋಪ ಸಮಾರಂಭವನ್ನು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಉದ್ಘಾಟಿಸಿ, ‘ಗುರುಗಳು, ಶರಣರು ನೆಲೆಸುವ ಭೂಮಿ ಪಾವನವಾಗುತ್ತದೆ. ಈ ನಿಟ್ಟಿನಲ್ಲಿ ಹಾವಗಿಲಿಂಗೇಶ್ವರ ಶಿವಾಚಾರ್ಯರು ತಮ್ಮ ನಿಷ್ಕಲ್ಮಶ, ಶ್ರೇಷ್ಠ ಕಾರ್ಯಗಳ ಮೂಲಕ ಪಾವನ ಭೂಮಿಯನ್ನಾಗಿಸಿದ್ದಾರೆ’ ಎಂದು ಹೇಳಿದರು.
‘ಪ್ರೀತಿ, ಸಂಸ್ಕಾರ ಮತ್ತು ಸಮಾಧಾನದ ನಡೆಯ ಮೂಲಕ ಜನರ ಮನಸ್ಸು ಗೆಲ್ಲಬೇಕು. ಭಕ್ತರು ಮಠಗಳಿಗೆ ಪಾಲಕರಿದ್ದಂತೆ, ಗುರುಗಳು ಅವರ ಮಕ್ಕಳಿದ್ದಂತೆ. ಹಾಗಾಗಿ, ಪಾಲಕರು ಮಕ್ಕಳನ್ನು ತುಂಬಾ ಕಾಳಜಿ, ಕಳಕಳಿಯಿಂದ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.
ಹಂಚಿ ಹೋಗಿದ್ದ ವೀರಶೈವ ಸಮಾಜವನ್ನು ಒಗ್ಗೂಡಿಸಿ, ಗುರುತಿಸಿ, ನೆಲೆ ಕೊಟ್ಟವರು ಭೀಮಣ್ಣ ಖಂಡ್ರೆ. ಈಗ ಸಮಾಜ ಮತ್ತೆ ಹರಿದು ಹಂಚಿ ಹೋಗುತ್ತಿದೆ. ಮತ್ತೆ ಖಂಡ್ರೆ ಅವರಂತಹ ವ್ಯಕ್ತಿ ಬರಬೇಕು. ಈಶ್ವರ ಖಂಡ್ರೆ ಆ ನಿಟ್ಟಿನಲ್ಲಿ ಕಾರ್ಯ ಮಾಡುತ್ತಾರೆ’ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ‘ಯುವಶಕ್ತಿ ದೇಶದ ಅಮೂಲ್ಯ ಸಂಪತ್ತು. ಈ ಸಂಪತ್ತು ಯಾವುದೇ ಕಾರಣಕ್ಕೂ ದುರ್ಬಲವಾಗಬಾರದು’ ಎಂದರು.
ರಾಚೋಟೇಶ್ವರ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರು, ಹುಲಸೂರಿನ ಶಿವಾನಂದ ಸ್ವಾಮೀಜಿ, ಹವಾ ಮಲ್ಲಿನಾಥ ಮಹಾರಾಜರು ಮಾತನಾಡಿದರು. ಪ್ರಮುಖರಾದ ಮಡಿವಾಳಪ್ಪ ಮಂಗಲಗಿ, ಬಸವರಾಜ ವಂಕೆ, ದತ್ತಾತ್ರಿ ಮೂಲಗೆ, ರಾಜಕುಮಾರ ಚೆಲುವಾ, ರಮೇಶ ಪ್ರಭಾ, ಧನರಾಜ ಪಾಟೀಲ, ರಮೇಶ ಪಾಟೀಲ ಕರಡ್ಯಾಳ, ರೇವಣಪ್ಪ ಮೂಲಗೆ ಸೇರಿದಂತೆ ಇದ್ದರೂ ಇದ್ದರು.
ಭಕ್ತರ ಸಹಕಾರದಿಂದ 11 ದಿನಗಳ ಆಧ್ಯಾತ್ಮಿಕ ಜಾತ್ರೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸುಗಮವಾಗಿ ನೆರವೇರಲು ಸಹಾಯವಾಗುತ್ತಿದೆ.
–ಹಾವಗಿಲಿಂಗೇಶ್ವರ ಶಿವಾಚಾರ್ಯರು ರಾಚೋಟೇಶ್ವರ ಮಠದ ಪೀಠಾಧಿಪತಿ
13 ವರ್ಷಗಳಿಂದ ನಿರಂತರವಾಗಿ ಪ್ರತಿವರ್ಷ ನಡೆಯುತ್ತಿರುವ ಜಾತ್ರೆ ಗ್ರಾಮದಲ್ಲಿ ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸಿ ಯುವಕರನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತಿದೆ.
-ಶಿವಕುಮಾರ ಗುಮ್ತಾ ಗ್ರಾಮ ನಿವಾಸಿ
ಅಲಂಕೃತ ರಥದಲ್ಲಿ ಕೋಡಿ ಮಠದ ಸ್ವಾಮೀಜಿ ಭವ್ಯ ಮೆರವಣಿಗೆ
ಭಾಲ್ಕಿ: ಹನ್ನೊಂದು ದಿನಗಳ ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವ ಭಾನುವಾರ ಸಂಭ್ರಮದ ಮಧ್ಯೆ ತೆರೆ ಕಂಡಿತು. ಗ್ರಾಮದ ರಾಚೋಟೇಶ್ವರ ಕತೃ ಗದ್ದುಗೆಗೆ ವಿಶೇಷ ಪೂಜೆ ಮಹಾ ರುದ್ರಾಭಿಷೇಕ ಭಕ್ತರಿಗೆ ಅನ್ನ ಪ್ರಸಾದ ವಿತರಣೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನ ಹಾರನಹಳ್ಳಿಯ ಕೋಡಿ ಮಠಮಹಾ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜ ಹಾಗೂ ಹುಲಸೂರಿನ ಶಿವಾನಂದ ಸ್ವಾಮೀಜಿ ಅವರನ್ನು ಬೀದರ್-ಭಾಲ್ಕಿ ಮುಖ್ಯ ರಸ್ತೆಯಲ್ಲಿನ ಗ್ರಾಮದ ಜ್ಯಾಂತಿ ಪೆಟ್ರೋಲ್ ಬಂಕ್ ಬಳಿಯಿಂದ ಅಲಂಕೃತ ರಥದಲ್ಲಿ ಭವ್ಯ ಮೆರವಣಿಗೆಯಲ್ಲಿ ರಾಚೋಟೇಶ್ವರ ಸಂಸ್ಥಾನ ಮಠಕ್ಕೆ ಕರೆ ತರಲಾಯಿತು. ರಾಚೋಟೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ವಿವಿಧೆಡೆಯ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡರು. ಕುಂಭ ಕಳಸ ಹೊತ್ತ ಮಹಿಳೆಯರು ಮೆರವಣಿಗೆಯ ಮೆರುಗು ಹೆಚ್ಚಿಸಿದರು. ನಂತರ ಮಠದಲ್ಲಿ ಜಾತ್ರಾ ಮಹೋತ್ಸವದ ಸಮಾರೋಪ ಹಾಗೂ ಧರ್ಮಸಭೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.