
ಭಾಲ್ಕಿ: ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಮಂಗಳವಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯಡಿ ವಿವಿಧೆಡೆ ₹ 3.20 ಕೋಟಿ ಅನುದಾನದ ಕಾಮಗಾರಿಗೆ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದರು.
₹ 1.20 ಕೋಟಿ ಅನುದಾನದಲ್ಲಿ ಮಹಾತ್ಮ ಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತ ವರೆಗಿನ ರಸ್ತೆ ಡಾಂಬರೀಕರಣ, ₹ 2 ಕೋಟಿ ಅನುದಾನದಲ್ಲಿ ವಿವೇಕಾನಂದ ವೃತ್ತ ಸಮೀಪದ ದಾದರ್‌ನಿಂದ ಅಂಬೇಸಾಂಗವಿ ಕ್ರಾಸ್‌ವರೆಗಿನ ರಸ್ತೆ ಅಗಲೀಕರಣ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ, ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರ, ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಮಾತನಾಡಿದ ಅವರು, ‘ಪಟ್ಟಣ ನಗರೀಕರಣವಾಗಿ ರೂಪಗೊಳ್ಳುತ್ತಿದೆ. ಶಿಕ್ಷಣ, ಉದ್ಯೋಗ, ವ್ಯಾಪಾರಕ್ಕಾಗಿ ಗ್ರಾಮೀಣ ಭಾಗದ ಜನರು ಪಟ್ಟಣಕ್ಕೆ ವಲಸೆ ಬರುತ್ತಿದ್ದಾರೆ. ಹೀಗಾಗಿ ಎಲ್ಲರಿಗೂ ಮೂಲಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ನಾನು ಶಾಸಕನಾಗಿ ಆಯ್ಕೆಯಾಗುವ ಪೂರ್ವದಲ್ಲಿ ಪಟ್ಟಣದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಂಡಿರಲಿಲ್ಲ. ನಾನು ಶಾಸಕನಾದ ಮೇಲೆ ಪಟ್ಟಣದ ಅಭಿವೃದ್ಧಿ ದಿಕ್ಕು ಬದಲಾಗಿದೆ’ ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆಯ ಇಇ ಶಿವಶಂಕರ ಕಾಮಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಅರಣ್ಯ ಅಭಿವೃದ್ಧಿ ನಿಗದಮ ಉಪಾಧ್ಯಕ್ಷ ಹಣಮಂತರಾವ ಚವ್ಹಾಣ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ, ಪ್ರಮುಖರಾದ ಶಿವಕುಮಾರ ಕಲ್ಯಾಣೆ, ದಿಲೀಪ ಸುಂಟೆ, ಅನಿಲ್ ಸುಂಟೆ, ಶಶಿಕಲಾ ಅಶೋಕ, ಓಂಕಾರ ಮೋರೆ ಸೇರಿದಂತೆ ಹಲವರು ಹಾಜರಿದ್ದರು. ದೀಪಕ ಠಮಕೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.