
ಭಾಲ್ಕಿ: ಪಟ್ಟಣದ ಸಂಗಮೇಶ್ವರ ಪಿಯು ಕಾಲೇಜಿನಲ್ಲಿ ಬಡ, ಪ್ರತಿಭಾವಂತ 20 ವಿದ್ಯಾರ್ಥಿಗಳಿಗೆ ಎರಡು ವರ್ಷ ಉಚಿತ ಪಿಯುಸಿ ಶಿಕ್ಷಣ ನೀಡಲು ನಿರ್ಧರಿಸಲಾಗಿದ್ದು, ಫೆ.1ರಂದು ಮೊದಲ ಹಂತದ ಸ್ಕಾಲರ್‌ಶಿಪ್ ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ಸಂಗಮೇಶ್ವರ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ಪ್ಯಾಡ್ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಸ್ಕಾಲರ್‌ಶಿಪ್ ಪ್ರವೇಶ ಪರೀಕ್ಷೆಯಲ್ಲಿ ಮೊದಲ 20 ರ‍್ಯಾಂಕ್ ಪಡೆಯುವ ವಿದ್ಯಾರ್ಥಿಗಳಿಗೆ ಉಚಿತ ಪಿಯುಸಿ ವಿಜ್ಞಾನ ಶಿಕ್ಷಣ, ಕೋಚಿಂಗ್ ಮತ್ತು ಬಸ್ ಸೌಲಭ್ಯ ಸಿಗಲಿದೆ. ಪ್ರಸ್ತುತ ಎಸ್‌ಎಸ್‌ಎಲ್‌ಸಿಯಲ್ಲಿ ಓದುತ್ತಿರುವ ಮಾಡುತ್ತಿರುವ ವಿದ್ಯಾರ್ಥಿಗಳು ಸ್ಕಾಲರ್‌ಶಿಪ್ ಪ್ರವೇಶ ಪರೀಕ್ಷೆ ಬರೆಯಬಹುದಾಗಿದೆ ಎಂದು ತಿಳಿಸಿದರು.
ಮೂರು ವರ್ಷಗಳ ಹಿಂದೆ ಸಂಗಮೇಶ್ವರ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ಶಿಕ್ಷಣ ಆರಂಭಿಸಿದ್ದು, ಪ್ರತಿವರ್ಷ ಉತ್ತಮ ಫಲಿತಾಂಶ ದೊರೆಯುತ್ತಿದೆ. ಇಲ್ಲಿಯೂ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಚನ್ನಬಸವೇಶ್ವರ ಗುರುಕುಲ ಮಾದರಿಯಲ್ಲಿ ಗುಣಾತ್ಮಕ, ಸಂಸ್ಕಾರಯುತ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ನುರಿತ ಉಪನ್ಯಾಸಕರ ತಂಡವಿದೆ. ಹಾಗಾಗಿ ಪಾಲಕರು, ವಿದ್ಯಾರ್ಥಿಗಳು ಸ್ಕಾಲರ್‌ಶಿಪ್ ಪ್ರವೇಶ ಪರೀಕ್ಷೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಹಿರೇಮಠ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು. ಸಂಗಮೇಶ್ವರ ಶಿಕ್ಷಣ ಸಂಸ್ಥೆ ಸ್ಥಾನಿಕ ಕಮಿಟಿ ಅಧ್ಯಕ್ಷ ಧನರಾಜ ಬಂಬುಳಗೆ, ಪ್ರಾಚಾರ್ಯರಾದ ಬಸವರಾಜ ಮೊಳಕೀರೆ ಪ್ರವೀಣ ಹಿರೇಮಠ, ದೇವರಾಜ್ ಪ್ರೌಢಶಾಲೆಯ ಮುಖ್ಯಶಿಕ್ಷಕ ವಿಶ್ವನಾಥ ಪಕ್ಕಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.