ಭಾಲ್ಕಿ: ತಾಲ್ಲೂಕಿನ ಖಟಕ ಚಿಂಚೋಳಿ ಗ್ರಾಮದ ಹುಲಿಕುಂಟಿ ಮಠದಲ್ಲಿ ಶಾಂತಲಿಂಗೇಶ್ವರರ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ನೇತೃತ್ವದಲ್ಲಿ ರಥೋತ್ಸವ, ಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ನಡೆಯಿತು.
ದೇವಸ್ಥಾನದಿಂದ ಆರಂಭಗೊಂಡ ರಥೋತ್ಸವ, ಪಲ್ಲಕ್ಕಿ ಉತ್ಸವ ನಂದಿ ಬಸವೇಶ್ವರ ದೇವಸ್ಥಾನದವರೆಗೆ ಸಾಗಿತು. ಸಾವಿರಾರು ಜನ ಭಕ್ತರು ಸುರಿಯುತ್ನಿರುವ ಮಳೆಯನ್ನೂ ಲೆಕ್ಕಿಸದೆ ಭಕ್ತಿ ಭಾವದಿಂದ ರಥೋತ್ಸವದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಇದಕ್ಕೂ ಮುನ್ನ ಶಿವಾನಂದ ಸ್ವಾಮೀಜಿ ನೇತೃತ್ವದಲ್ಲಿ ವಿಧಿ, ವಿಧಾನಗಳಂತೆ ಶಾಂತಲಿಂಗೇಶ್ವರರ ಗದ್ದುಗೆಗೆ ಬಿಲ್ವಾರ್ಚನೆ, ವಿಶೇಷ ಪೂಜೆ ನಡೆದವು.
ನಂತರ ಆರಂಭಗೊಂಡ ಕುಸ್ತಿ ಸ್ಪರ್ಧೆಯಲ್ಲಿ ಸೊಲ್ಲಾಪುರ, ಕಲಬುರಗಿ, ಬೀದರ್ ಸೇರಿದಂತೆ ಸುಮಾರು 200ಕ್ಕೂ ಅಧಿಕ ಕುಸ್ತಿ ಪಟುಗಳು ಭಾಗವಹಿಸಿದ್ದರು. ಅಂತಿಮವಾಗಿ ಲಾತೂರ್ ಮೂಲದ ತುಕಾರಾಮ ಮಾಹನವರ ಪ್ರಥಮ ಸ್ಥಾನ ಪಡೆದು 11 ತೊಲೆ ಬೆಳ್ಳಿ ತಮ್ಮದಾಗಿಸಿಕೊಂಡರು.
ಸೊಲ್ಲಾಪುರದ ಸ್ವಾಮಿನಾಥ ಸ್ವಾಮೀಜಿ, ಠಾಣಾಕೂಶನೂರಿನ ಸಿದ್ದಲಿಂಗ ಸ್ವಾಮೀಜಿ, ಸಿರಸಂಗಿಯ ಮಹಾಂತ ಸ್ವಾಮೀಜಿ, ಸಾಯಗಾಂವದ ಶಿವಾನಂದ ಸ್ವಾಮೀಜಿ ಪ್ರಮುಖರಾದ ಸುರೇಶ ಚನಶೆಟ್ಟಿ, ಬಸವರಾಜ ಧನ್ನೂರ, ಸುವರ್ಣ ಧನ್ನೂರ, ನವಲಿಂಗ ಪಾಟೀಲ, ವೈಜಿನಾಥ ಸಜ್ಜನಶೆಟ್ಟಿ, ಅಲ್ಲಮಪ್ರಭು ನಾವದಗೇರಿ, ಗಣೇಶ ಶೀಲವಂತ, ವೀರಯ್ಯ ಸ್ವಾಮಿ, ರೇವಣಸಿದ್ದಯ್ಯ ಶಾಸ್ತ್ರಿ, ಮಲ್ಲಿಕಾರ್ಜುನ ಕಡಗಂಚಿ, ವಿಲಾಸ ಕುಲಕರ್ಣಿ, ರಾಜಶೇಖರ ಬನ್ನಾಳೆ, ವೀರಶೆಟ್ಟಿ ಕಲ್ಲಾ, ರೇವಣಸಿದ್ದ ಜಾಡರ್, ಸುರೇಶ ಬೂರಕೆ, ಬಸವರಾಜ ಕುರುಬಖೇಳಗಿ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.