
ಬಸವಕಲ್ಯಾಣ: ನಗರದಲ್ಲಿ ಬಸವತತ್ವದ ಕಾರ್ಯಕ್ರಮವಾಗಲಿ ಅಥವಾ ಅನುಭವ ಮಂಟಪದಲ್ಲಿ, ವೀರಶೈವ ಮತ್ತು ಲಿಂಗಾಯತ ಸಮುದಾಯದಿಂದ ಏನೇ ಸಭೆ ಸಮಾರಂಭ ಏರ್ಪಡಿಸಿದ್ದರೂ ಭೀಮಣ್ಣ ಖಂಡ್ರೆಯವರು ಅಲ್ಲಿ ಹಾಜರಿರುತ್ತಿದ್ದರು. ಅವರು ಇಲ್ಲಿನವರಿಗೆ `ಭೀಮಬಲ'ದಂತಿದ್ದರು. ಅವರು ಬಂದಿದ್ದಾರೆ, ಬರುವವರಿದ್ದಾರೆ ಎಂಬುದನ್ನು ಕೇಳಿಯೇ ಅನೇಕರು ಸಂತಸದಿಂದ ಓಡೋಡಿ ಹೋಗಿ ಅವರನ್ನು ಭೇಟಿ ಆಗುವ ಕಾಲವೊಂದಿತ್ತು.
ನಡೆದಾಡುವ ದೇವರಂತಿದ್ದ ಭಾಲ್ಕಿಯ ಲಿಂ.ಚನ್ನಬಸವ ಪಟ್ಟದ್ದೇವರನ್ನು ಗುರು ಆಗಿಸಿದ್ದರು. ಅವರ ಅಣತಿಯಂತೆಯೇ ಕಾರ್ಯಗೈಯುತ್ತಿದ್ದರು. ಅವರು ಹೋದ ಕಡೆಗಳಲ್ಲೆಲ್ಲ ಹಿಂಬಾಲಿಸುತ್ತಿದ್ದರು. ಅರ್ಧಕ್ಕೆ ನಿಂತಿದ್ದ ತ್ರಿಪುರಾಂತ ಕೆರೆ ದಂಡೆಯಲ್ಲಿನ ನೂತನ ಅನುಭವ ಮಂಟಪದ ಕೆಲಸ ಪೂರ್ಣಗೊಳಿಸಲು ಭಾಲ್ಕಿ ಪಟ್ಟದ್ದೇವರ ಜೊತೆಯಲ್ಲಿ ಇವರೂ ಪ್ರಯತ್ನಿಸಿದ್ದಾರೆ.
ಮಂಟಪಕ್ಕೆ ಆರ್ಥಿಕ ಸಹಾಯ ಒದಗಿಸುವ ಜೊತೆಯಲ್ಲೇ ದೈಹಿಕವಾಗಿಯೂ ಶ್ರಮಿಸಿದರು. ಪಟ್ಟದ್ದೇವರು ತಲೆಮೇಲೆ ಕಲ್ಲು ಮಣ್ಣಿನ ಬುಟ್ಟಿ ಹೊತ್ತಿಕೊಂಡಾಗ ಇವರೂ ಆ ಕಾರ್ಯದಲ್ಲಿ ಕೈಗೂಡಿಸಿದರು. ಈಗ ಸರ್ಕಾರ ₹750 ಕೋಟಿ ವೆಚ್ಚದಲ್ಲಿ ಹೊಸ ಮಂಟಪ ಕಟ್ಟುತ್ತಿದೆ. ಆದರೆ, ಚನ್ನಬಸವ ಪಟ್ಟದ್ದೇವರು ಮತ್ತು ಭೀಮಣ್ಣ ಖಂಡ್ರೆಯವರ ಸಂಕಲ್ಪದ ಫಲವಾಗಿ ರೂಪುಗೊಂಡಿರುವ ಮಂಟಪ ಮಾತ್ರ 12 ನೇ ಶತಮಾನದಲ್ಲಿನ ಬಸವಣ್ಣನವರ ಅನುಭವ ಮಂಟಪದ ಇರುವಿಕೆಗೆ ಸಾಕ್ಷಿ ಎಂಬಂತೆ ಬಂದ ಭಕ್ತರಿಗೆ ಇಂದಿಗೂ ದಿವ್ಯಾನುಭೂತಿ ನೀಡುತ್ತಿದೆ.
ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ಅಧ್ಯಕ್ಷರಾಗಿದ್ದ ಖಂಡ್ರೆಯವರು ಮಂಟಪದಲ್ಲಿ ನಾನಾ ಚಟುವಟಿಕೆಗಳನ್ನು ಹಮ್ಮಿಕೊಂಡರು. ಅಖಿಲ ಭಾರತ ವೀರಶೈವ ಮಹಾಸಭೆಯ ರಾಜ್ಯ ಅಧ್ಯಕ್ಷ ಆಗಿದ್ದಾಗ 2011 ರಲ್ಲಿ ತೇರು ಮೈದಾನದಲ್ಲಿ ಮಹಾಸಭೆಯಿಂದ ರಾಜ್ಯಮಟ್ಟದ ಹುತಾತ್ಮ ದಿನಾಚರಣೆ ಆಯೋಜಿಸಿದ್ದರು. ಶರಣ ಹರಳಯ್ಯ ಮತ್ತು ಮಧುವರಸರ ಮಕ್ಕಳ ಅಂತರ್ಜಾತಿಯ ಮದುವೆಯ ಕಾರಣಕ್ಕಾಗಿ `ಕಲ್ಯಾಣ ಕ್ರಾಂತಿ' ಘಟಿಸಿದ್ದರಿಂದ ಅವರ ಸ್ಮರಣಾರ್ಥ ರಾಷ್ಟ್ರಮಟ್ಟದ ಸ್ಮಾರಕವೊಂದನ್ನು ಇಲ್ಲಿ ನಿರ್ಮಿಸಬೇಕು ಎಂಬ ಅವರ ಕನಸು ಮಾತ್ರ ನನಸಾಗಲಿಲ್ಲ. ಅವರ ಈ ಎಲ್ಲ ಕಾರ್ಯವನ್ನು ಪರಿಗಣಿಸಿ ಶರಣ ಲಿಂಗವಂತ ಹರಳಯ್ಯ ಪೀಠಾಧ್ಯಕ್ಷೆ ಅಕ್ಕ ಗಂಗಾಂಬಿಕಾ ನೇತೃತ್ವದಲ್ಲಿ 2020 ರಲ್ಲಿ ಖಂಡ್ರೆ ಅವರಿಗೆ `ರಾಷ್ಟ್ರಮಟ್ಟದ ಶರಣ ವಿಜಯ' ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.