
ತಮ್ಮ ತಂದೆಯವರ ಕಾಣಲು ಬಂದ ಜನರಿಗೆ ಕೈಮುಗಿದ ಸಚಿವ ಈಶ್ವರ ಬಿ. ಖಂಡ್ರೆ
ಬೀದರ್: ಮಾಜಿ ಸಚಿವರೂ ಆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ (102) ಅವರನ್ನು ಸೋಮವಾರ ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಿಂದ ಆಂಬ್ಯುಲೆನ್ಸ್‌ನಲ್ಲಿ ಭಾಲ್ಕಿಯಲ್ಲಿರುವ ಅವರ ಮನೆಗೆ ಕರೆದೊಯ್ದಿದ್ದು, ಜನ ತಂಡೋಪ ತಂಡವಾಗಿ ಅವರ ಮನೆಗೆ ಭೇಟಿ ಕೊಟ್ಟು ಆರೋಗ್ಯ ವಿಚಾರಿಸುತ್ತಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಅವರಿಗೆ ಜೀವರಕ್ಷಕಗಳ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿರುವ ಅವರ ಆರೋಗ್ಯದಲ್ಲಿ ಶನಿವಾರ ಚೇತರಿಕೆ ಕಂಡಿತ್ತು. ಆದರೆ, ಭಾನುವಾರ ಸತತವಾಗಿ ಆರೋಗ್ಯ ಕ್ಷೀಣಿಸುತ್ತ ಹೋಯಿತು. ಅವರ ಮಗ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಅನೇಕ ಸಲ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದರು. ಭಾನುವಾರ ತಡರಾತ್ರಿ ವರೆಗೆ ಆಸ್ಪತ್ರೆಯಲ್ಲಿಯೇ ಇದ್ದು, ಮನೆಗೆ ನಿರ್ಗಮಿಸಿದ್ದರು. ಸೋಮವಾರ ಬೆಳಿಗ್ಗೆ ಖಂಡ್ರೆ ಕುಟುಂಬದವರ ಸಮ್ಮುಖದಲ್ಲಿ ಭೀಮಣ್ಣ ಖಂಡ್ರೆ ಅವರನ್ನು ಆಸ್ಪತ್ರೆಯಿಂದ ಮನೆಗೆ ಕೊಂಡೊಯ್ಯಲಾಯಿತು.
'ಭೀಮಣ್ಣ ಖಂಡ್ರೆಯವರ ಆರೋಗ್ಯ ಬಹಳ ಕ್ಷೀಣಿಸಿದೆ. ಜೀವರಕ್ಷಕಗಳನ್ನು ಅಳವಡಿಸಿ ಆಂಬ್ಯುಲೆನ್ಸ್ ನಲ್ಲಿ ಅವರನ್ನು ಮನೆಗೆ ಕಳಿಸಿಕೊಡಲಾಗಿದೆ. ಅವರ ಕುಟುಂಬದವರ ಇಚ್ಛೆಯಂತೆ ಮನೆಗೆ ಕಳುಹಿಸಿಕೊಡಲಾಗಿದೆ' ಎಂದು ನಗರದ ಗುದಗೆ ಮಲ್ಟಿ ಸ್ಪೆಷಾಲಿಟಿ ಆ್ಯಂಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಚಂದ್ರಕಾಂತ ಗುದಗೆ ಪ್ರಜಾವಾಣಿಗೆ ತಿಳಿಸಿದ್ದಾರೆ.
ಭೀಮಣ್ಣ ಖಂಡ್ರೆ ಅವರನ್ನು ಅವರ ಮನೆಗೆ ತಂದಿರುವ ವಿಷಯ ತಿಳಿದು ವಿವಿಧ ಮಠಾಧೀಶರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಾರ್ವಜನಿಕರು ತಂಡೋಪ ತಂಡವಾಗಿ ಅವರ ಮನೆಗೆ ಭೇಟಿ ನೀಡಿದರು. ಅವರ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.