ADVERTISEMENT

ಭೀಮಣ್ಣ ಖಂಡ್ರೆ ಆರೋಗ್ಯದಲ್ಲಿ ಚೇತರಿಕೆ: ಗಂಜಿ, ಸೇಬು ಹಣ್ಣಿನ ಜ್ಯೂಸ್‌ ಸೇವನೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 13:55 IST
Last Updated 14 ಜನವರಿ 2026, 13:55 IST
   

ಭಾಲ್ಕಿ (ಬೀದರ್‌ ಜಿಲ್ಲೆ): ಮಾಜಿ ಸಚಿವ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ ಅವರ ಆರೋಗ್ಯ ಸ್ಥಿರವಾಗಿದೆ.

ಉಸಿರಾಟ, ಬಿಪಿ ಸಹ ಚೇತರಿಕೆಯಾಗಿದ್ದು, ಆಗಾಗ ಕಣ್ಣು ತೆರೆದು ನೋಡುತ್ತಿದ್ದಾರೆ. ಬುಧವಾರ  ಅವರು ಬಿಳಿ ಜೋಳದ ಹಿಟ್ಟಿನ ಗಂಜಿ ಮತ್ತು ಸೇಬು ಹಣ್ಣಿನ ಜ್ಯೂಸ್ ಸೇವಿಸಿದ್ದಾರೆ. ಅವರ ಆರೋಗ್ಯ ಯಥಾಸ್ಥಿತಿ ಇದೆ ಎಂದು ಕುಟುಂಬದವರು ಹಾಗೂ ಅವರನ್ನು ಉಪಚರಿಸುತ್ತಿರುವ ವೈದ್ಯರು ತಿಳಿಸಿದ್ದಾರೆ. 

ಇಳಕಲ್‍ನ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ಅವರು ಭೇಟಿ ನೀಡಿ, ಯೋಗಕ್ಷೇಮ ವಿಚಾರಿಸಿದರು. ಸಚಿವ ಈಶ್ವರ ಬಿ. ಖಂಡ್ರೆಯವರಿಂದ ಮಾಹಿತಿ ಪಡೆದರು. 

ADVERTISEMENT

ಬುಧವಾರವೂ ಅನೇಕ ಜನ ಅವರ ಮನೆಗೆ ಭೇಟಿ ಕೊಟ್ಟು ಯೋಗಕ್ಷೇಮ ವಿಚಾರಿಸಿದರು. ಬಸವಕಲ್ಯಾಣ ಮಹಾಮನೆಯ ಬೆಲ್ದಾಳ ಸಿದ್ದರಾಮ ಶರಣರು, ಭಾಲ್ಕಿ ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮೀಜಿ, ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಆಡಳಿತಾಧಿಕಾರಿ ಮೋಹನ್‌ ರೆಡ್ಡಿ, ವಿಧಾನ ಪರಿಷತ್‌ ಸದಸ್ಯ ಜಗದೇವ ಗುತ್ತೇದಾರ್‌ ಪ್ರಮುಖರು ಸೇರಿದ್ದಾರೆ. 

ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ, ಸಂಸದ ಸಾಗರ ಖಂಡ್ರೆ ಸೇರಿದಂತೆ ಕುಟುಂಬ ಸದಸ್ಯರು ಮನೆಯಲ್ಲೇ ಇದ್ದು, ವೈದ್ಯರ ತಂಡದಿಂದ ಕಾಲಕಾಲಕ್ಕೆ ಮಾಹಿತಿ ಪಡೆಯುತ್ತಿದ್ದಾರೆ.

ವಯೋ ಸಹಜ ಕಾಯಿಲೆಯಿಂದ ಬಳಲುತ್ತಿರುವ ಭೀಮಣ್ಣ ಖಂಡ್ರೆ ಅವರು ಒಂದು ವಾರ ಬೀದರ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಸೋಮವಾರವಷ್ಟೇ ಮನೆಗೆ ಹಿಂತಿರುಗಿದ್ದಾರೆ. ಮನೆಯಲ್ಲೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

‘ತಮ್ಮ ತಂದೆ ಭೀಮಣ್ಣ ಖಂಡ್ರೆ ಅವರ ಮೇಲಿನ ಪ್ರೀತಿ, ಕಾಳಜಿಯಿಂದ ಆರೋಗ್ಯ ವಿಚಾರಿಸಲು ರಾಜ್ಯದ ಮೂಲೆ ಮೂಲೆಯಿಂದ ಮಠಾಧೀಶರು, ಗಣ್ಯರು ಭೇಟಿ ನೀಡುತ್ತಿದ್ದಾರೆ. ತಂದೆಯವರ ಆರೋಗ್ಯ ಸುಧಾರಿಸುತ್ತಿದೆ. ಯಾರೂ ಆತಂಕ ಪಡಬೇಕಿಲ್ಲ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.