ADVERTISEMENT

ಕ್ರಿಯಾಯೋಜನೆ ಅವಧಿಯೊಳಗೆ ಮುಗಿಯಲಿ: ಸಂಸದ ಸಾಗರ್‌ ಖಂಡ್ರೆ

ಧರ್ತಿ ಆಭಾ ಜನಜಾತಿ ಗ್ರಾಮ ಉತ್ಕರ್ಷ ಕಾರ್ಯಕ್ರಮದಡಿ ಆದಿ ಕರ್ಮಯೋಗಿ ಅಭಿಯಾನದ ಸಭೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 4:08 IST
Last Updated 25 ಸೆಪ್ಟೆಂಬರ್ 2025, 4:08 IST
ಸಭೆಯಲ್ಲಿ ಸಂಸದ ಸಾಗರ್‌ ಖಂಡ್ರೆ ಮಾತನಾಡಿದರು. ಜಿಪಂ ಸಿಇಒ ಡಾ. ಗಿರೀಶ್‌ ಬದೋಲೆ ಇದ್ದರು
ಸಭೆಯಲ್ಲಿ ಸಂಸದ ಸಾಗರ್‌ ಖಂಡ್ರೆ ಮಾತನಾಡಿದರು. ಜಿಪಂ ಸಿಇಒ ಡಾ. ಗಿರೀಶ್‌ ಬದೋಲೆ ಇದ್ದರು   

ಬೀದರ್‌: ‘ಜಿಲ್ಲೆಯ 196 ಗ್ರಾಮಗಳಲ್ಲಿ ಏನೇನು ಅಗತ್ಯ ಸೌಲಭ್ಯಗಳು ಬೇಕಿವೆ ಎಂಬುದರ ಬಗ್ಗೆ ನಿಗದಿತ ಅವಧಿಯೊಳಗೆ ಕ್ರಿಯಾ ಯೋಜನೆ ತಯಾರಿಸಿ, ಅಂದಾಜು ಮೊತ್ತ ಸಿದ್ಧಪಡಿಸಬೇಕು’ ಎಂದು ಸಂಸದ ಸಾಗರ್‌ ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಕೇಂದ್ರದ ಬುಡಕಟ್ಟು ವ್ಯವಹಾರಗಳ ಸಚಿವಾಲಯ, ಜಿಲ್ಲಾಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಬುಧವಾರ ಏರ್ಪಡಿಸಿದ್ದ ‘ಧರ್ತಿ ಆಭಾ ಜನಜಾತಿ ಗ್ರಾಮ ಉತ್ಕರ್ಷ’ ಕಾರ್ಯಕ್ರಮದಡಿ ಆದಿ ಕರ್ಮಯೋಗಿ ಅಭಿಯಾನದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಯೋಜನೆಯಡಿ ಜಿಲ್ಲೆಯ 196 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಆಯಾ ವಿಧಾನಸಭಾ ಕ್ಷೇತ್ರಗಳ ಶಾಸಕರಿಗೆ ಯೋಜನೆಯಡಿ ಆಯ್ಕೆಯಾದ ಗ್ರಾಮಗಳಲ್ಲಿ ಏನೇನು ಮಾಡಲಾಗುತ್ತದೆ ಎಂಬುದನ್ನು ತಿಳಿಸಬೇಕು. ಅವರು ಪ್ರಸ್ತಾವ ಕೊಟ್ಟರೆ ಅದು ಕೂಡ ಸೇರಿಸಬೇಕು. ಶಾಸಕರು, ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಿದ ನಂತರ ಅಕ್ಟೋಬರ್‌ 2ರೊಳಗೆ ಕ್ರಿಯಾ ಯೋಜನೆ ತಯಾರಿಸಬೇಕು ಎಂದು ತಿಳಿಸಿದರು.

ADVERTISEMENT

ಜಿಲ್ಲೆಯ ಔರಾದ್‌, ಚಿಟಗುಪ್ಪ, ಹುಮನಾಬಾದ್‌ ಹಾಗೂ ಕಮಲನಗರ ತಾಲ್ಲೂಕಿನ ಹೆಚ್ಚು ಹಳ್ಳಿಗಳನ್ನು ಯೋಜನೆಯಗೆ ಆಯ್ಕೆ ಮಾಡಲಾಗಿದೆ. ಆದರೆ, ಇದುವರೆಗೆ ಕ್ರಿಯಾ ಯೋಜನೆ ತಯಾರಿಸಿಲ್ಲ. ಅ. 2ರ ವರೆಗೆ ಎಲ್ಲ ಪ್ರಕ್ರಿಯೆ ಮುಗಿಸಬೇಕು. ಒಂದು ಗ್ರಾಮಕ್ಕೆ ₹2 ಕೋಟಿ ಕ್ರಿಯಾ ಯೋಜನೆ ರೂಪಿಸಬೇಕಿದೆ ಎಂದು ಹೇಳಿದರು.

ಎಲ್ಲಾ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಹೆಚ್ಚಿನ ಒತ್ತು ಕೊಡಬೇಕು. ಕ್ರಿಯಾ ಯೋಜನೆಯಲ್ಲಿ ಕಡ್ಡಾಯವಾಗಿ ಸೇರಿಸಬೇಕು. ಅಧಿಕಾರಿಗಳು, ಪಿಡಿಒಗಳು ಸಂಬಂಧಿಸಿದ ಗ್ರಾಮಗಳಿಗೆ ಹೋಗಿ ಸಮಸ್ಯೆ ಅರಿತು ಕೆಲಸ ಮಾಡಬೇಕು. ಯಾರ್‍ಯಾರನ್ನು ಭೇಟಿ ಮಾಡಿ, ಚರ್ಚಿಸಿದ್ದೀರಿ ಅದರ ಫೋಟೋ, ವಿಡಿಯೋ ಮಾಡಬೇಕು. ಒಂದು ವಾಟ್ಸ್ಯಾಪ್‌ ಗ್ರುಪ್‌ ಮಾಡಿ, ಎಲ್ಲ ವಿವರ ನಿತ್ಯ ಅದರಲ್ಲಿ ಅಪ್‌ಡೇಟ್‌ ಮಾಡಬೇಕು. ನನಗೂ ಸಹ ಆ ಗ್ರುಪ್‌ನಲ್ಲಿ ಸೇರಿಸಬೇಕು ಎಂದು ಸೂಚಿಸಿದರು.

ನಾನು ಎಲ್ಲೇ ಹೋದರೂ ಸಮುದಾಯ ಭವನ ನಿರ್ಮಿಸಿಕೊಡಬೇಕೆಂದು ಜನ ಹೆಚ್ಚಾಗಿ ಕೇಳುತ್ತಾರೆ. ಇದನ್ನು ಸಹ ಕ್ರಿಯಾ ಯೋಜನೆಯಲ್ಲಿ ಸೇರಿಸಬೇಕು. ಹಳ್ಳಿಗಳಲ್ಲಿ ಸಣ್ಣ ಪ್ರಮಾಣದಲ್ಲಿ ಸಮುದಾಯ ಭವನಗಳನ್ನು ನಿರ್ಮಿಸುವುದರ ಬದಲು ಸುತ್ತಮುತ್ತಲಿನ ನಾಲ್ಕೈದು ಹಳ್ಳಿಗಳ ಜನರಿಗೆ ಪ್ರಯೋಜನವಾಗುವಂತಹ ಸ್ಥಳಗಳನ್ನು ಗುರುತಿಸಿ, ದೊಡ್ಡ ಮಟ್ಟದ ಸಮುದಾಯ ಭವನ ನಿರ್ಮಿಸಿದರೆ ಅನುಕೂಲವಾಗುತ್ತದೆ. ಇದರ ಬಗ್ಗೆ ಚಿಂತಿಸಬೇಕು ಎಂದು ಹೇಳಿದರು.

ಯೋಜನೆಗೆ ಆಯ್ಕೆಯಾದ ಗ್ರಾಮಗಳ ಪ್ರಮುಖ ಸ್ಥಳಗಳಲ್ಲಿ ಯೋಜನೆಗೆ ಸಂಬಂಧಿಸಿದ ಸಮಗ್ರ ವಿವರವನ್ನು ಒಳಗೊಂಡ ಬ್ಯಾನರ್‌ ಹಾಕಬೇಕು. ಅದರಲ್ಲಿ ನೋಡಲ್‌ ಅಧಿಕಾರಿಗಳ ಮೊಬೈಲ್‌ ಸಂಖ್ಯೆ ಕೂಡ ಹಾಕಬೇಕು. ಆನಂತರ ಗೋಡೆ ಬರಹ ಬರೆಸಬಹುದು ಎಂದು ಸಲಹೆ ಮಾಡಿದರು.

ಜಿಪಂ ಸಿಇಒ ಡಾ. ಗಿರೀಶ್‌ ಬದೋಲೆ ಮಾತನಾಡಿ, ಈ ಯೋಜನೆಯೂ ವಸತಿ, ಸ್ವಚ್ಛತೆ, ಆರೋಗ್ಯ, ಪೌಷ್ಟಿಕಾಂತ ಸೇರಿದಂತೆ ಹಲವಾರು ವಿಷಯಗಳನ್ನು ಒಳಗೊಂಡಿದೆ. ಪರಿಣಾಮಕಾರಿ ಜಾರಿಗೆ ಶ್ರಮಿಸಬೇಕು ಎಂದು ತಿಳಿಸಿದರು. 17 ಇಲಾಖೆಗಳ ಅಧಿಕಾರಿಗಳು, ಇಒಗಳು, ಪಿಡಿಒಗಳು ಪಾಲ್ಗೊಂಡಿದ್ದರು.

ಸಭೆಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಬಳಿರಾಮ್‌ ಕುಶಾಲರಾವ್ ಮಾತನಾಡಿದರು

‘ಹಳ್ಳಿಗಳ ಆಯ್ಕೆಯಲ್ಲಿ ವ್ಯತ್ಯಾಸವೇಕೆ?’

‘ಆದಿ ಕರ್ಮಯೋಗಿ ಅಭಿಯಾನದ ಯೋಜನೆಯಡಿ ಜಿಲ್ಲೆಯ 196 ಹಳ್ಳಿಗಳನ್ನು ಆಯ್ಕೆ ಮಾಡಲಾಗಿದೆ. ಭಾಲ್ಕಿ ತಾಲ್ಲೂಕಿನಲ್ಲಿ 4 ಹಳ್ಳಿಗಳನ್ನು ಆಯ್ಕೆ ಮಾಡಲಾಗಿದೆ. ಆದರೆ ಔರಾದ್‌ನಲ್ಲಿ ಭಾಲ್ಕಿಗಿಂತ 20 ಪಟ್ಟು ಹೆಚ್ಚಿನ ಹಳ್ಳಿಗಳನ್ನು ಆಯ್ಕೆ ಮಾಡಲಾಗಿದೆ. ಹಾಗೆ ನೋಡಿದರೆ ಔರಾದ್‌ಗಿಂತ ಭಾಲ್ಕಿಯ ಜನಸಂಖ್ಯೆ ಹೆಚ್ಚಿದೆ. ಈ ರೀತಿಯ ವ್ಯತ್ಯಾಸವೇಕೆ’ ಎಂದು ಸಂಸದ ಸಾಗರ್‌ ಖಂಡ್ರೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಬಳಿರಾಮ್‌ ಕುಶಾಲರಾವ್ ಮಾತನಾಡಿ ಇದು ಮೊದಲ ಹಂತದ ಆಯ್ಕೆ ಪ್ರಕ್ರಿಯೆ. ನಂತರ ಹಂತ ಹಂತವಾಗಿ ಹಳ್ಳಿಗಳನ್ನು ಸೇರಿಸಲಾಗುತ್ತದೆ ಎಂದು ವಿವರಣೆ ನೀಡಿದರು.

ಪಿಎಮ್‌ ಆವಾಸ್‌ ಯೋಜನೆ ಪ್ರಗತಿಗೆ ಅಸಮಾಧಾನ

‘ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ (ಗ್ರಾಮೀಣ) ಜಿಲ್ಲೆಯಲ್ಲಿ ಮಂದಗತಿಯ ಪ್ರಗತಿಯಾಗಿದೆ. 11 ಸಾವಿರ ಫಲಾನುಭವಿಗಳ ಜಿಯೋ ಟ್ಯಾಗ್‌ ಆಗಿದೆ. ಇದು ಬಹಳ ಕಡಿಮೆ ಸಂಖ್ಯೆ. ಇದು ಸರಿಯಾದುದಲ್ಲ. ಅತಿ ಕಳಪೆ ಸಾಧನೆಯಿದು’ ಎಂದು ಸಂಸದ ಸಾಗರ್‌ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದರು. ಕಳಪೆ ಸಾಧನೆ ಮಾಡಿರುವ ಪಿಡಿಒಗಳಿಗೆ ಮೆಮೋ ಕೊಟ್ಟು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು. ಇದಕ್ಕೆ ದನಿಗೂಡಿಸಿದ ಜಿಪಂ ಸಿಇಒ ಡಾ. ಗಿರೀಶ್‌ ಬದೋಲೆ ಇಷ್ಟು ದಿನ ನೋಟಿಸ್‌ ಕೊಟ್ಟಿದ್ದೇವೆ. ಇನ್ಮುಂದೆ ಅಮಾನತುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಏಳು ದಿನಗಳ ಒಳಗೆ ಮಿಕ್ಕುಳಿದ ಫಲಾನುಭವಿ ಅರ್ಜಿದಾರರ ಜಿಯೋ ಟ್ಯಾಗ್‌ ಮಾಡಬೇಕು. ಶೇ 50ಕ್ಕಿಂತ ಹೆಚ್ಚಿನ ಸಾಧನೆ ಆಗಬೇಕು. ಇಲ್ಲವಾದರೆ ಕ್ರಮ ಕೈಗೊಳ್ಳಲಾಗುವುದು. 3698 ಜನರಿಗೆ ಮನೆ ಮಂಜೂರಾಗಿದೆ. ಆದರೆ ಅವರಿಗೆ ಇದುವರೆಗೆ ಹಣವೇಕೆ ಪಾವತಿಸಿಲ್ಲ. ಇಒಗಳು ಇದರ ಬಗ್ಗೆ ಗಮನ ಹರಿಸಬೇಕು ಎಂದು ಸೂಚಿಸಿದರು. ಜಿಪಿಎಸ್‌ ಮಾಡಲು ಪಿಡಿಒಗಳು ಬರುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಈ ರೀತಿಯ ದೂರುಗಳು ಬರದಂತೆ ನೋಡಿಕೊಳ್ಳಬೇಕು. ಮದ್ಯವರ್ತಿಗಳಿಂದ ಫಲಾನುಭವಿಗಳಿಗೆ ಯಾವುದೇ ಸಮಸ್ಯೆ ಆಗಬಾರದು. ಎಲ್ಲ ತಾಲ್ಲೂಕುಗಳಲ್ಲಿ ತಿಳಿವಳಿಕೆ ಪತ್ರ ಕೊಡಲು ಕಾರ್ಯಕ್ರಮ ಏರ್ಪಡಿಸಬೇಕು. ಅದಕ್ಕೆ ಸ್ಥಳೀಯ ಶಾಸಕರನ್ನು ಆಹ್ವಾನಿಸಬೇಕು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.