
ಬೀದರ್: ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಗರದ ಅರುಣೋದಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಆಹಾರ ಕೂಟದಲ್ಲಿ ವಿವಿಧ ಬಗೆಯ 54 ತಿಂಡಿ, ತಿನಿಸುಗಳು ಎಲ್ಲರ ಬಾಯಲ್ಲಿ ನೀರೂರಿಸಿದವು.
ಲಡ್ಡು, ಪುಟಾಣಿ ಉಂಡಿ, ಶೇಂಗಾ ಉಂಡಿ, ರವೆ ಉಂಡಿ, ಕಾಯಿ ಹೋಳಿಗೆ, ಸಜ್ಜೆ ರೊಟ್ಟಿ, ಬಿಳಿ ಜೋಳದ ರೊಟ್ಟಿ, ಧಪಾಟಿ, ಕುಟ್ಟಿದ ಗೋಧಿ ಹುಗ್ಗಿ, ಕಾಳುಗಳು, ಹಣ್ಣುಗಳು ಗಮನ ಸೆಳೆದವು.
ವಿದ್ಯಾರ್ಥಿಗಳೇ ಬಗೆ ಬಗೆಯ ತಿಂಡಿ, ತಿನಿಸುಗಳನ್ನು ಮನೆಯಿಂದ ಮಾಡಿಸಿಕೊಂಡು ಬಂದದ್ದು ವಿಶೇಷವಾಗಿತ್ತು. ವಿದ್ಯಾರ್ಥಿಗಳು ವಚನ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟು ಸಭಿಕರನ್ನು ರಂಜಿಸಿದರು.
ಋಷಿಕೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ರಾಯಚೂರು ವಲಯದ ಸಂಚಾಲಕ ಕುಶಾಲರಾವ್ ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಸ್ಪಷ್ಟ ಗುರಿ ಇಟ್ಟುಕೊಳ್ಳಬೇಕು. ಪರಿಶ್ರಮ ವಹಿಸಿ ಅದನ್ನು ಸಾಕಾರ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಉಜ್ವಲ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಿಂದಲೇ ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಆಗಬೇಕು ಎಂದು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜೈ ಗೋಪಾಲ್ ಭತ್ಮೆ ಅಭಿಪ್ರಾಯಪಟ್ಟರು.
ಹಿರಿಯ ಪತ್ರಕರ್ತ ಸದಾನಂದ ಜೋಶಿ, ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲೆ ಆಡಳಿತ ಮಂಡಳಿ ಸಂಘದ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಮಣಗೇರೆ, ಪಟ್ಟಣ ಯೋಜನೆ ಸದಸ್ಯೆ ಶ್ರತಿ ಅರ್ಥಂ , ಗಜೇಂದ್ರ ಎಸ್. ಕೆ., ಶಾಲೆಯ ಆಡಳಿತಾಧಿಕಾರಿ ಸಂತೋಷ ಕುಮಾರ ಮಂಗಳೂರೆ ಇದ್ದರು. ಸಂಗಮೇಶ ಗಂದಗೆ ಸ್ವಾಗತಿಸಿದರು. ಅಲ್ಕಾವತಿ ಹೊಸದೊಡ್ಡೆ ನಿರೂಪಿಸಿದರು. ನೀಲಮ್ಮ ಗಜಲೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.