ADVERTISEMENT

ದುರಸ್ತಿಯಾದ ರಸ್ತೆಯಲ್ಲಿ ಮತ್ತೆ ಗುಂಡಿ

ಬೀದರ್-ಔರಾದ್ ರಸ್ತೆ; ಪ್ರಯಾಣಿಕರ ಸಮಸ್ಯೆಗೆ ಸಿಗದ ಪರಿಹಾರ

ಮನ್ನಥಪ್ಪ ಸ್ವಾಮಿ
Published 26 ಮಾರ್ಚ್ 2021, 3:09 IST
Last Updated 26 ಮಾರ್ಚ್ 2021, 3:09 IST
ಬೀದರ್-–ಔರಾದ್ ರಸ್ತೆ ಮೇಲೆ ಮತ್ತೆ ಗುಂಡಿ ಬಿದ್ದಿರುವುದು
ಬೀದರ್-–ಔರಾದ್ ರಸ್ತೆ ಮೇಲೆ ಮತ್ತೆ ಗುಂಡಿ ಬಿದ್ದಿರುವುದು   

ಔರಾದ್: ಜನರ ಸಾಕಷ್ಟು ಹೋರಾಟದ ನಂತರ ದುರಸ್ತಿಯಾದ ಬೀದರ್-ಔರಾದ್ ರಸ್ತೆ ಮೇಲೆ ಮತ್ತೆ ಗುಂಡಿಗಳು ಬೀಳುತ್ತಿವೆ.

ಕಳೆದ ವರ್ಷವೇ ಈ ರಸ್ತೆ ರಿಪೇರಿ ಮಾಡಲಾಗಿತ್ತು. ಆದರೆ ಮತ್ತೆ ಗುಂಡಿ ಗಳು ಬಿದ್ದು ಪ್ರಯಾಣಿಕರ ಓಡಾಟಕ್ಕೆ ತೊಂದರೆ ಆಗಿತ್ತು. ವಿವಿಧ ಸಂಘಟನೆಗಳ ಹೋರಾಟದ ಫಲವಾಗಿ ಎರಡನೇ ಬಾರಿ ರಿಪೇರಿ ಕೆಲಸ ಮಾಡಿದ್ದರೂ ಗುಂಡಿಗಳು ಬಿದ್ದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

‘ರಿಪೇರಿ ಕೆಲಸ ಇನ್ನೂ ಮುಗಿಯುವ ಹಂತದಲ್ಲಿದೆ. ಆದರೆ ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಇದು ಸಂಬಂಧಿತರ ನಿರ್ಲಕ್ಷ್ಯ ಧೋರಣೆ’ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಧನರಾಜ ಮುಸ್ತಾಪುರ ದೂರಿದ್ದಾರೆ.

ADVERTISEMENT

‘ಕೇವಲ ಗುಂಡಿ ಮುಚ್ಚಿದರೆ ರಸ್ತೆ ಸಮಸ್ಯೆಗೆ ಪರಿಹಾರ ಅಲ್ಲ. ಪುನಃ ಗುಂಡಿ ಬೀಳದಂತೆ ರಸ್ತೆ ಮೇಲೆ ಒಂದು ಕೋಟ್ ಡಾಂಬರ್ ಮಿಶ್ರಿತ ಕಾಂಕ್ರಿಟ್ ಹಾಕಬೇಕು. ಅಂದರೆ ಮಾತ್ರ ಸುರಕ್ಷಿತ ಪ್ರಯಾಣ ಸಾಧ್ಯ’ ಎಂದು ಅವರು ತಿಳಿಸಿದ್ದಾರೆ.

‘ಬೀದರ್- ಔರಾದ್ ನಡುವಿನ 46 ಕಿ.ಮೀ. ರಸ್ತೆ ತುಂಬಾ ಹಾಳಾಗಿದೆ. ₹50 ಲಕ್ಷದಲ್ಲಿ ರಿಪೇರಿ ಮಾಡಲು ಯಾವ ಗುತ್ತಿಗೆದಾರರು ಮುಂದೆ ಬರುತ್ತಿಲ್ಲ. ಆದಾಗ್ಯೂ ಒಬ್ಬ ಗುತ್ತಿಗೆದಾರರಿಂದ ಗುಂಡಿ ತುಂಬಿಸುವ ಕೆಲಸ ಮಾಡಿಸಲಾಗಿದೆ. ಅವರು ಕೆಲಸ ಸರಿ ಮಾಡಿದ್ದಾರೆ. ಹೊಸ ಗಂಡಿಗಳು ಬಿದ್ದಿರಬಹುದು’ ಎಂದು ರಾಷ್ಟ್ರೀಯ ಹೆದ್ದಾರಿ ಬೀದರ್ ವಿಭಾಗದ ಎಂಜಿನಿಯರ್ ಶಿವಪ್ರಸಾದ ತಿಳಿಸಿದ್ದಾರೆ.

‘ಬೀದರ್-ಔರಾದ್ ನಡುವಿನ ರಸ್ತೆ ₹335 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ. ಟೆಂಡರ್ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಈಗ ಕಾಮಗಾರಿ ಆರಂಭವಾಗಬೇಕಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.