ADVERTISEMENT

ಬೀದರ್‌: ಒಂದೇ ದಿನ ಭಗವಂತ ಖೂಬಾಗೆ ಎರಡು ನೋಟಿಸ್‌

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನಿಂದಿಸಿದ ಆರೋಪ ಪ್ರಕರಣ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 5:31 IST
Last Updated 21 ಫೆಬ್ರುವರಿ 2026, 5:31 IST
ಭಗವಂತ ಖೂಬಾ
ಭಗವಂತ ಖೂಬಾ   

ಬೀದರ್‌: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರನ್ನು ನಿಂದಿಸಿದ ಪ್ರಕರಣ ಸಂಬಂಧ ಪೊಲೀಸರು ಕೇಂದ್ರದ ಮಾಜಿಸಚಿವರೂ ಆದ ಬಿಜೆಪಿ ಮುಖಂಡ ಭಗವಂತ ಖೂಬಾ ಅವರಿಗೆ ಒಂದೇ ದಿನ ಎರಡು ಸಲ ನೋಟಿಸ್‌ ಜಾರಿ ಮಾಡಿದ್ದಾರೆ.

ಖೂಬಾ ಅವರನ್ನು ಕೇರಳ ರಾಜ್ಯದ ಚುನಾವಣಾ ಪ್ರಚಾರದ ಜವಾಬ್ದಾರಿ ವಹಿಸಿರುವುದರಿಂದ ಸದ್ಯ ಅವರು ಆ ರಾಜ್ಯದಲ್ಲಿದ್ದಾರೆ. ಅವರು ಬೀದರ್‌ನ ಶಿವನಗರದ ಸ್ವಗೃಹದಲ್ಲಿ ಇಲ್ಲದಿದ್ದಾಗ ಅವರ ಮನೆಯ ಗೋಡೆಗೆ ಪೊಲೀಸರು ನೋಟಿಸ್‌ ಅಂಟಿಸಿದ್ದಾರೆ.

‘ಫೆ. 19ರಂದು ಮಧ್ಯಾಹ್ನ 3ಕ್ಕೆ ಪೊಲೀಸರು ಸಿವಿಲ್‌ ಡ್ರೆಸ್‌ನಲ್ಲಿ ಬಂದು ನೋಟಿಸ್‌ ಅಂಟಿಸಿ ಹೋಗಿದ್ದಾರೆ. ಬಳಿಕ ಅದೇ ದಿನ ಮಧ್ಯರಾತ್ರಿ 12ಕ್ಕೆ ಬಂದು ಮಧ್ಯಾಹ್ನ ಅಂಟಿಸಿದ ನೋಟಿಸ್‌ ತೆಗೆದು ಹೊಸ ನೋಟಿಸ್‌ ಪ್ರತಿ ಅಂಟಿಸಿದ್ದಾರೆ. ಮೊದಲು ಅಂಟಿಸಿದ ನೋಟಿಸ್‌ನಲ್ಲಿ ಫೆ. 25ರಂದು ಬೆಳಿಗ್ಗೆ 10ಕ್ಕೆ ಭಾಲ್ಕಿ ಠಾಣೆಗೆ ಹಾಜರಾಗಿ ಹೇಳಿಕೆ ನೀಡಬೇಕು ಎಂದು ಭಾಲ್ಕಿ ನಗರ ಠಾಣೆ ಸಿಪಿಐ ಹೆಸರಲ್ಲಿ ನೋಟಿಸ್‌ ಅಂಟಿಸಲಾಗಿತ್ತು. ಎರಡನೇ ನೋಟಿಸ್‌ನಲ್ಲಿ ಫೆ. 21ರಂದು ಬೆಳಿಗ್ಗೆ 10ಕ್ಕೆ ಖುದ್ದು ಹಾಜರಾಗಿ ಹೇಳಿಕೆ ನೀಡಬೇಕು ಎಂದು ತಿಳಿಸಲಾಗಿದೆ’ ಎಂದು ಅವರ ಕಚೇರಿಯ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

‘ನಿಮ್ಮ ವಿರುದ್ಧ ದಾಖಲಾದ ಪ್ರಕರಣ ಅಪರಾಧ ಸ್ವರೂಪದ್ದಾಗಿದೆ. ಇದಕ್ಕೆ ಏಳು ವರ್ಷಗಳವರೆಗೆ ಶಿಕ್ಷೆ ಇದೆ. ತನಿಖಾಧಿಕಾರಿ ವಿವೇಚನಾಧಿಕಾರ ಬಳಸಿ, ನಿಮ್ಮನ್ನು ಬಂಧಿಸುತ್ತಿಲ್ಲ. ಆದರೆ, ಈ ನೋಟಿಸ್‌ ಮೂಲಕ ಠಾಣೆಗೆ ಹಾಜರಾಗಿ ಹೇಳಿಕೆ ನೀಡಬೇಕು. ತನಿಖಾಧಿಕಾರಿಗೆ ಸಹಕರಿಸಬೇಕು. ಇದನ್ನು ಪಾಲಿಸಲು ವಿಫಲವಾದರೆ ನಿಮ್ಮನ್ನು ನನ್ನ ವಿವೇಚನಾಧಿಕಾರ ಬಳಸಿ, ಕಾನೂನಿನ ಪ್ರಕಾರ ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಬೇಕಾಗುತ್ತದೆ. ಅಗತ್ಯಬಿದ್ದಾಗ ಹಾಜರಾಗಬೇಕು’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಬೀದರ್‌ ನಗರದ ಪಾಪನಾಶದಲ್ಲಿ ಫೆ. 7ರಂದು ನಡೆದ ಅಭಿವೃದ್ಧಿ ಕಾಮಗಾರಿ ಚಾಲನೆ ಕಾರ್ಯಕ್ರಮದ ದಿನ ಭಗವಂತ ಖೂಬಾ ಅವರು ಈಶ್ವರ ಬಿ. ಖಂಡ್ರೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡಿತ್ತು. ಭಾಲ್ಕಿ ಗಂಜ್‌ ಪ್ರದೇಶದ ನಿವಾಸಿ, ಕಾಂಗ್ರೆಸ್‌ ಕಾರ್ಯಕರ್ತ ಸುರೇಶ್‌ ಬಿರಾದಾರ ಅವರು ಖೂಬಾ ವಿರುದ್ಧ ದೂರು ನೀಡಿದ್ದರು. ಈ ಸಂಬಂಧ ಫೆ. 16ರಂದು ಭಾಲ್ಕಿ ನಗರ ಠಾಣೆಯಲ್ಲಿ ಖೂಬಾ ವಿರುದ್ಧ ಬಿಎನ್‌ಎಸ್‌ ಕಲಂ 352, 353ರ ಅಡಿ ದ್ವೇಷ, ಶಾಂತಿಭಂಗ ಯತ್ನ ಪ್ರಕರಣ ದಾಖಲಾಗಿತ್ತು. ಈಗ ಪೊಲೀಸರು ಇದಕ್ಕೆ ಸಂಬಂಧಿಸಿದಂತೆ ನೋಟಿಸ್‌ ಜಾರಿ ಮಾಡಿದ್ದಾರೆ.

ಸೋಮನಾಥ್ ಪಾಟೀಲ‌್

‘ಖಂಡ್ರೆ ಒತ್ತಡಕ್ಕೆ ಮಣಿದು ಪೊಲೀಸರು ಕೆಲಸ’

ಬೀದರ್‌: ‘ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರ ಒತ್ತಡಕ್ಕೆ ಮಣಿದು ಪೊಲೀಸರು ನನ್ನ ವಿರುದ್ಧ ನೋಟಿಸ್‌ ಜಾರಿ ಮಾಡಿದ್ದಾರೆ. ಖಂಡ್ರೆ ಕಾನೂನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಾನು ಕಾನೂನಿಗೆ ಗೌರವಿಸುತ್ತೇನೆ. ಆದರೆ ದುರಾಡಳಿತಕ್ಕೆ ಅಲ್ಲ’ ಎಂದು ಕೇಂದ್ರದ ಮಾಜಿಸಚಿವ ಭಗವಂತ ಖೂಬಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಪಾಪನಾಶ ದೇಗುಲದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಕೊಡುವ ದಿನದಂದು ನಾನು ಖಂಡ್ರೆಯವರಿಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದೇನೆ. ಪ್ರಾಮಾಣಿಕವಾಗಿದ್ದರೆ ಪಾಪನಾಶಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದೆ. ಇದರ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ಇದನ್ನ ಮರೆಮಾಚಲು ತನ್ನ ಸುಳ್ಳು ಮುಚ್ಚಿಕೊಳ್ಳಲು ಖಂಡ್ರೆ ನನ್ನ ವಿರುದ್ಧ ಮೂರನೇ ವ್ಯಕ್ತಿಯಿಂದ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ಕೇರಳದಲ್ಲಿ ಪಕ್ಷದ ಚುನಾವಣಾ ಕೆಲಸದಲ್ಲಿ ವ್ಯಸ್ತನಾಗಿರುವೆ. ಅಲ್ಲಿಂದ ಬಂದ ನಂತರ ಪೊಲೀಸರ ನೋಟಿಸ್‌ಗೆ ಉತ್ತರಿಸುತ್ತೇನೆ. ಇದರ ಬಗ್ಗೆ ಕಾನೂನು ಹೋರಾಟ ನಡೆಸುತ್ತೇನೆ. ನ್ಯಾಯಾಲಯದ ಮೇಲೆ ವಿಶ್ವಾಸವಿದೆ. ಅಲ್ಲಿ ಜಯ ಸಿಗಲಿದೆ ಎಂದು ತಿಳಿಸಿದ್ದಾರೆ.

ಖೂಬಾಗೆ ಜೀವ ಬೆದರಿಕೆ; ಬಿಜೆಪಿ ದೂರು

ಕೇಂದ್ರದ ಮಾಜಿಸಚಿವ ಭಗವಂತ ಖೂಬಾ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಜೀವ ಬೆದರಿಕೆಯೊಡ್ಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾದಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ಅವರಿಗೆ ಗುರುವಾರ (ಫೆ.19) ದೂರು ಸಲ್ಲಿಕೆಯಾಗಿದೆ. ಈ ಸಂಬಂಧ ಪ್ರದೀಪ್‌ ಗುಂಟಿ ಅವರನ್ನು ‘ಪ್ರಜಾವಾಣಿ’ ಶುಕ್ರವಾರ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ಪೊಲೀಸ್‌ ಮೂಲಗಳ ಪ್ರಕಾರ ಬಿಜೆಪಿ ಕೊಟ್ಟ ದೂರಿನ ಮೇರೆಗೆ ಇದುವರೆಗೆ ಸಂಬಂಧಿಸಿದವರ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಇನ್ನೊಂದೆಡೆ ಬಿಜೆಪಿ ಇದರ ವಿರುದ್ಧ ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ‘ಕಾನೂನಿನ ಚೌಕಟ್ಟಿನಲ್ಲಿ ಏನೆಲ್ಲ ಮಾಡಬೇಕೋ ಅದನ್ನು ಮಾಡುತ್ತೇವೆ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್‌ ಪಾಟೀಲ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.