ADVERTISEMENT

‘ಪ್ರಜಾವಾಣಿ’ ವರದಿ ಪರಿಣಾಮ |ಪಾಲಿಕೆ ಪೌರಾಯುಕ್ತ ಭೇಟಿ, ಮಾಲ್‌ಗೆ ನೋಟಿಸ್‌ ಜಾರಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 5:07 IST
Last Updated 29 ಆಗಸ್ಟ್ 2025, 5:07 IST
ಬೀದರ್‌ನ ಗುಮ್ಮೆ ಕಾಲೊನಿಗೆ ಮಹಾನಗರ ಪಾಲಿಕೆಯ ಪೌರಾಯುಕ್ತ ಶಿವರಾಜ ರಾಠೋಡ್‌ ಹಾಗೂ ಸಿಬ್ಬಂದಿ ಗುರುವಾರ ಭೇಟಿ ಕೊಟ್ಟು ಪರಿಶೀಲಿಸಿದರು
ಬೀದರ್‌ನ ಗುಮ್ಮೆ ಕಾಲೊನಿಗೆ ಮಹಾನಗರ ಪಾಲಿಕೆಯ ಪೌರಾಯುಕ್ತ ಶಿವರಾಜ ರಾಠೋಡ್‌ ಹಾಗೂ ಸಿಬ್ಬಂದಿ ಗುರುವಾರ ಭೇಟಿ ಕೊಟ್ಟು ಪರಿಶೀಲಿಸಿದರು   

ಬೀದರ್‌: ನಗರದ ಮನ್ನಳ್ಳಿ ರಸ್ತೆಯ ಬಿವಿಬಿ ಕಾಲೇಜು ಎದುರಿನ ಗುಮ್ಮೆ ಕಾಲೊನಿಗೆ ಗುರುವಾರ (ಆ.28) ಮಹಾನಗರ ಪಾಲಿಕೆಯ ಪೌರಾಯುಕ್ತ ಶಿವರಾಜ ರಾಠೋಡ್‌ ಹಾಗೂ ಸಿಬ್ಬಂದಿ ಭೇಟಿ ಕೊಟ್ಟು ಪರಿಶೀಲಿಸಿದರು.

‘ಗುಮ್ಮೆ ಕಾಲೊನಿಗೆ ಹರಿದು ಬರುತ್ತಿದೆ ಶವಗಳ ಮೂಳೆ!’ ಶೀರ್ಷಿಕೆ ಅಡಿ ಆಗಸ್ಟ್‌ 21ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

ಕಾಲೊನಿಗೆ ಮಾಲ್‌, ಹೋಟೆಲ್‌, ಕಲ್ಯಾಣ ಮಂಟಪದಿಂದ ಶೌಚಾಲಯದ ನೀರು ಹರಿದು ಬರುತ್ತಿದೆ. ಸ್ಮಶಾನ ಭೂಮಿಯಿಂದ ಮೂಳೆಗಳು ಹರಿದು ಬರುತ್ತಿದ್ದು, ಜನರ ನೆಮ್ಮದಿ ಕಂಗೆಟ್ಟಿ ಹೋಗಿದೆ. ಬಾವಿಗಳ ನೀರು ಕಲುಷಿತಗೊಂಡಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು.

ADVERTISEMENT

ವರದಿಗೆ ಎಚ್ಚೆತ್ತ ಮಹಾನಗರ ಪಾಲಿಕೆಯ ಪೌರಾಯುಕ್ತ ಶಿವರಾಜ ರಾಠೋಡ್‌ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿ, ಶೀಘ್ರ ಪರಿಹಾರ ಒದಗಿಸುವ ಆಶ್ವಾಸನೆ ನೀಡಿದರು.

‘ಶೌಚಾಲಯದ ನೀರು ಹರಿಸುತ್ತಿದ್ದು, ಮಾಲ್‌ನವರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ. ಈಗ ನೀರು ಹರಿಸುತ್ತಿಲ್ಲ. ಯುಜಿಡಿಗೆ ಸಂಪರ್ಕ ಪಡೆದುಕೊಂಡಿದ್ದಾರೆ. ಇನ್ನು, ಸ್ಮಶಾನ ಭೂಮಿಯಲ್ಲಿ ತೋಡಲಾಗಿದ್ದ ಬೃಹತ್‌ ಗುಂಡಿಯನ್ನು ಮುಚ್ಚಲಾಗುತ್ತಿದೆ. ಕಾಲೊನಿಗೆ ನೀರು ಹರಿದು ಬರುತ್ತಿದ್ದ ಸ್ಥಳಗಳನ್ನು ಬಂದ್‌ ಮಾಡಲಾಗಿದೆ. ಪ್ರತಿ ಕಾಲೊನಿಯ ಅಭಿವೃದ್ಧಿಗೆ ₹40 ಲಕ್ಷ ಮೀಸಲಿಟ್ಟಿದ್ದು, ಅದರಡಿ ವ್ಯವಸ್ಥಿತವಾದ ಚರಂಡಿ ನಿರ್ಮಿಸಿ, ಶಾಶ್ವತವಾಗಿ ಪರಿಹಾರ ಒದಗಿಸಲಾಗುವುದು. ಮಳೆ ನಿಂತ ನಂತರ ಕೆಲಸ ಶುರುವಾಗಲಿದೆ’ ಎಂದು ಶಿವರಾಜ ರಾಠೋಡ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.