ADVERTISEMENT

ಚಿತಾಗಾರ | ಭ್ರಷ್ಟಾಚಾರದ ಆರೋಪ ನಿರಾಧಾರ: ಮುಹಮ್ಮದ್‌ ಗೌಸ್‌

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 6:37 IST
Last Updated 4 ನವೆಂಬರ್ 2025, 6:37 IST
ಬೀದರ್‌ನ ಗೋರನಳ್ಳಿಯಲ್ಲಿರುವ ಎಸ್‌ಟಿಪಿ ಘಟಕದಲ್ಲಿ ಚಿತಾಗಾರದ ಯಂತ್ರ ಇರಿಸಿರುವುದನ್ನು ತೋರಿಸಿ, ದಾಖಲೆ ತೋರಿಸಿದ ಮಹಾನಗರ ಪಾಲಿಕೆ ಅಧ್ಯಕ್ಷ ಮುಹಮ್ಮದ್‌ ಗೌಸ್‌. ಪಾಲಿಕೆ ಸದಸ್ಯರು ಹಾಜರಿದ್ದರು
ಬೀದರ್‌ನ ಗೋರನಳ್ಳಿಯಲ್ಲಿರುವ ಎಸ್‌ಟಿಪಿ ಘಟಕದಲ್ಲಿ ಚಿತಾಗಾರದ ಯಂತ್ರ ಇರಿಸಿರುವುದನ್ನು ತೋರಿಸಿ, ದಾಖಲೆ ತೋರಿಸಿದ ಮಹಾನಗರ ಪಾಲಿಕೆ ಅಧ್ಯಕ್ಷ ಮುಹಮ್ಮದ್‌ ಗೌಸ್‌. ಪಾಲಿಕೆ ಸದಸ್ಯರು ಹಾಜರಿದ್ದರು   

ಬೀದರ್‌: ‘ನಗರದ ಬಿ.ವಿ. ಭೂಮರಡ್ಡಿ ಕಾಲೇಜು ಎದುರಿಗಿರುವ ಸಾರ್ವಜನಿಕ ಸ್ಮಶಾನಭೂಮಿಯ ಚಿತಾಗಾರದ ಯಂತ್ರ ಖರೀದಿಯಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ ಎಂಬ ಮಹಾನಗರ ಪಾಲಿಕೆ ಸದಸ್ಯ ಶಶಿಧರ ಹೊಸಳ್ಳಿ ಅವರ ಆರೋಪ ನಿರಾಧಾರವಾದುದು’ ಎಂದು ಕಾರ್ಪೊರೇಶನ್‌ ಅಧ್ಯಕ್ಷ ಮುಹಮ್ಮದ್‌ ಗೌಸ್‌ ಸ್ಪಷ್ಟಪಡಿಸಿದರು.

ಶಶಿಧರ ಹೊಸಳ್ಳಿ ಅವರು ಭಾನುವಾರ ಪತ್ರಿಕಾಗೋಷ್ಠಿ ನಡೆಸಿ, ಯಂತ್ರ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಪೌರಾಡಳಿತ ಸಚಿವ ರಹೀಂ ಖಾನ್ ಅವರ ಸೋದರ ಸಂಬಂಧಿ, ಪಾಲಿಕೆ ಅಧಿಕಾರಿಗಳು ಹಾಗೂ ಕಾಂಗ್ರೆಸ್‌ ಪಕ್ಷದ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ನಾಸಿರ್ ಖಾನ್ ಅವರು ರಹೀಂ ಖಾನ್‌ ಅವರ ಸಂಬಂಧಿಯಲ್ಲ. ಅವರು ಗುತ್ತಿಗೆದಾರರಷ್ಟೇ. ನಗರದ ಗೋರನಳ್ಳಿಯಲ್ಲಿರುವ ಎಸ್‌ಟಿಪಿಯಲ್ಲಿ ಚಿತಾಗಾರದ ಯಂತ್ರ ಭದ್ರವಾಗಿದೆ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

2020–21ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಬೀದರ್ ಜಿಲ್ಲೆಗೆ ಎರಡು ಚಿತಾಗಾರ ಯಂತ್ರಗಳು ಮಂಜೂರಾಗಿರುವುದು ನಿಜ. ಆದರೆ, ಆಗ ಪಾಲಿಕೆ ಅಸ್ತಿತ್ವದಲ್ಲಿ ಇರಲಿಲ್ಲ. ಜಿಲ್ಲಾಧಿಕಾರಿ ಆಡಳಿತಾಧಿಕಾರಿಗಳಾಗಿದ್ದರು. ಅವರು ಇದ್ದಾಗಲೇ ಖರೀದಿ ಪ್ರಕ್ರಿಯೆ ನಡೆದಿದೆ. ಅದರ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು 2023ರ ಫೆಬ್ರುವರಿಯಲ್ಲಿ ಚಿತಾಗಾರ ಯಂತ್ರಗಳ ಖರೀದಿ ಕಾರ್ಯ ಪೂರ್ಣಗೊಂಡಿದೆ. ಈ ಎರಡು ಯಂತ್ರಗಳ ಥರ್ಡ್ ಪಾರ್ಟಿ ಪರಿಶೀಲನೆ ಸಹ ಆಗಿದೆ. ನಗರದ ಝರಣಿ ನರಸಿಂಹ ಸ್ವಾಮಿ ದೇವಸ್ಥಾನದ ಮುಂಭಾಗದ ಚಿತಾಗಾರದ ಯಂತ್ರ ಸಹ ಕೆಟ್ಟು ಹೋಗಿದೆ. ಅದನ್ನು ದುರುಸ್ತಿ ಮಾಡಬೇಕಿದೆ. ಈಗಾಗಲೇ ಆ ಕೆಲಸ ನಡೆಯುತ್ತಿದೆ. ಬಿ.ವಿ.ಭೂಮರಡ್ಡಿ ಕಾಲೇಜು ಎದುರಿನ ಸ್ಮಶಾನದ ಚಿತಾಗಾರ ಯಂತ್ರವು ಗೋರನಳ್ಳಿಯ ಎಸ್.ಟಿ.ಪಿಯಲ್ಲಿದೆ ಎಂದರು.

ADVERTISEMENT

ಸ್ಮಶಾನಭೂಮಿಯಲ್ಲಿ ಯಂತ್ರ ಅಳವಡಿಕೆಗೆ ಅಗತ್ಯ ಸೌಕರ್ಯಗಳಿಲ್ಲ. ಅದನ್ನು ಅಳವಡಿಸಬೇಕಾದರೆ ಬೆಡ್, ಮೇಲ್ಛಾವಣಿ ಬೇಕು. ಅದು ಹಾಳಾಗಿ ಹೋಗಿದೆ. ಯಾವುದೇ ಸುರಕ್ಷಿತ ಸೌಕರ್ಯಗಳಿಲ್ಲದ ಕಾರಣ ಅದನ್ನು ಎಸ್.ಟಿ.ಪಿ. ಘಟಕದಲ್ಲಿ ಭದ್ರವಾಗಿ ಇರಿಸಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಈ ಸ್ಮಶಾನಭೂಮಿಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯ, ಯಂತ್ರ ಅಳವಡಿಕೆಗಾಗಿ ಬೇಕಾಗುವ ಬೆಡ್, ಶೆಡ್, ವಿದ್ಯುತ್‌ ವ್ಯವಸ್ಥೆ, ಕಾವಲು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಈಗಾಗಲೇ ಪೌರಾಡಳಿತ ಸಚಿವ ರಹೀಂ ಖಾನ್ ಅವರು ₹4 ಕೋಟಿ ಹಣ ಮೀಸಲಿರಿಸಿದ್ದಾರೆ. ಆದಷ್ಟು ಬೇಗ ಈ ಎರಡು ಸ್ಮಶಾನಭೂಮಿಗಳ ಚಿತಾಗಾರ ಯಂತ್ರಗಳು ಕಾರ್ಯಾರಂಭ ಮಾಡಲಿವೆ ಎಂದು ತಿಳಿಸಿದರು.

ಪಾಲಿಕೆಯ ಸದಸ್ಯರಾದ ಪ್ರಶಾಂತ ದೊಡ್ಡಿ, ಹಣಮಂತ ಮಲ್ಕಾಪುರೆ, ನವೀದ್ ಶೇರಿಕಾರ, ಸೌದ್ ಶೇರಿಕಾರ, ನಾಮನಿರ್ದೇಶಿತ ಸದಸ್ಯರಾದ ಆಜಮ್, ಸೂರ್ಯಕಾಂತ ಸಾದುರೆ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದಕುಮಾರ ಅಪ್ಪೆ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಮುಹಮ್ಮದ್ ಯುಸೂಫ್, ಮುಖಂಡ ಧನರಾಜ ಹಂಗರಗಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.