ADVERTISEMENT

ವಿಧಾನಸಭೆ: ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಬೆಲ್ದಾಳೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 4:47 IST
Last Updated 23 ಆಗಸ್ಟ್ 2025, 4:47 IST
ಡಾ. ಶೈಲೇಂದ್ರ ಕೆ. ಬೆಲ್ದಾಳೆ
ಡಾ. ಶೈಲೇಂದ್ರ ಕೆ. ಬೆಲ್ದಾಳೆ   

ಬೀದರ್‌: ‘ಬೀದರ್‌ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿ ನಷ್ಟವಾಗಿದ್ದು, ಕೂಡಲೇ ಸರ್ಕಾರ ಪರಿಹಾರ ವಿತರಿಸಬೇಕು’ ಎಂದು ಶಾಸಕ ಡಾ.ಶೈಲೇಂದ್ರ ಕೆ. ಬೆಲ್ದಾಳೆ ಒತ್ತಾಯಿಸಿದರು.

ವಿಧಾನಸಭೆಯ ಅಧಿವೇಶನದಲ್ಲಿ ಬುಧವಾರ ಬೀದರ್‌ ಜಿಲ್ಲೆಯ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ಒಂದು ವಾರ ಸತತ ಸುರಿದ ಮಳೆ, ಪ್ರವಾಹದಿಂದ 8 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿನ ಉದ್ದು, ಹೆಸರು, ಸೋಯಾಬೀನ್, ತೊಗರಿ ಸೇರಿದಂತೆ ವಿವಿಧ ಬೆಳೆಗಳು ನೀರುಪಾಲಾಗಿದ್ದು, ರೈತರು ಕಂಗಾಲಾಗಿದ್ದಾರೆ. ಸರ್ಕಾರ ಕೂಡಲೇ ಪ್ರತಿ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ನೀಡಬೆಕು. ಸಂಕಷ್ಟಕ್ಕೆ ಸಿಲುಕಿರುವ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.50ರಷ್ಟು ಹೆಚ್ಚು ಮಳೆಯಾಗಿದೆ. ಕಾರಂಜಾ ಜಲಾಶಯ ತುಂಬಿ ನೀರು ಬಿಟ್ಟಿದ್ದರಿಂದ ಮಾಂಜ್ರಾ ನದಿಗೆ ಪ್ರವಾಹ ಬಂದು ಸಮಸ್ಯೆಯಾಗಿದೆ. ಬೆಳೆ ಹಾನಿ ಜೊತೆಗೆ ಅನೇಕ ಕಡೆ ರಸ್ತೆಗಳು, ಸೇತುವೆಗಳಿಗೆ ಹಾನಿಯಾಗಿದೆ. ವಿದ್ಯುತ್ ಕಂಬ, ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟು ಹೋಗಿವೆ. ಅನೇಕ ಕಡೆಗಳಲ್ಲಿ ಮನೆಗಳು ಬಿದ್ದಿವೆ. ಅತಿವೃಷ್ಟಿಪೀಡಿತ ಜಿಲ್ಲೆಗೆ ತಕ್ಷಣ ತುರ್ತು ಪರಿಹಾರ ನೀಡಿ, ನೆರವಿಗೆ ಬರಬೇಕೆಂದು ಸರ್ಕಾರದ ಗಮನ ಸೆಳೆದರು.

ADVERTISEMENT

ಬೀದರ್ ದಕ್ಷಿಣ ಕ್ಷೇತ್ರದಲ್ಲೂ ಮಳೆಯಿಂದ ವ್ಯಾಪಕ ನಷ್ಟವಾಗಿದೆ. ಸಮೃದ್ಧ ಬೆಳೆಗಳು ನಾಶವಾಗಿ ರೈತರು ಕಣ್ಣೀರು ಸುರಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಸದ್ಯದ ಮಾಹಿತಿ ಪ್ರಕಾರ, ಒಂದು ಸಾವಿರ ಹೆಕ್ಟೇರ್ ಬೆಳೆ ಸಂಪೂರ್ಣ ಹಾಳಾಗಿದೆ. 25 ಕಿಮೀ ರಸ್ತೆ ಕಿತ್ತು ಹೋಗಿದೆ. ಮೂರು ಸೇತುವೆಗಳು ಹಾಳಾಗಿವೆ. 82ಕ್ಕೂ ಮನೆಗಳು ಕುಸಿದಿವೆ. 50 ಅಂಗನವಾಡಿ ಕೇಂದ್ರಗಳಿಗೆ ಹಾನಿಯಾಗಿದೆ. 200ಕ್ಕೂ ಹೆಚ್ಚು ವಿದ್ಯುತ್ ಕಂಬ ಮುರಿದಿವೆ. 12 ಟ್ರಾನ್ಸಫಾರ್ಮರ್‌ ಸುಟ್ಟು ನಷ್ಟವಾಗಿವೆ. ಕೂಡಲೇ ಸಮೀಕ್ಷೆ ನಡೆಸಿ, ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದರು.

ಬೀದರ್ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ, ಈವರೆಗೆ ಯಾವುದೇ ಪ್ರಗತಿ ಕಾರ್ಯ ಆಗಿಲ್ಲ. ಅನುದಾನ ಸಹ ಬಿಡುಗಡೆ ಮಾಡದ ಕಾರಣ ಜನಸಾಮಾನ್ಯರು ಕಷ್ಟ ಅನುಭವಿಸುತ್ತಿದ್ದಾರೆ. ನನ್ನ ದಕ್ಷಿಣ ಕ್ಷೇತ್ರದ ಒಂಬತ್ತು ಗ್ರಾಮಗಳು ಮಹಾನಗರಪಾಲಿಕೆಗೆ ಸೇರಿಸಲಾಗಿದೆ. ಅನುದಾನ ಇಲ್ಲದೆ ಇಲ್ಲಿ ಮೂಲಸೌಕರ್ಯ ಕೆಲಸ ಸ್ಥಗಿತವಾಗಿವೆ. ಕೂಡಲೇ ಪಾಲಿಕೆ ಚಟುವಟಿಕೆ ಆರಂಭಿಸಿ ಸೂಕ್ತ ಅನುದಾನ ಬಿಡುಗಡೆಗೆ ಆಗ್ರಹಿಸಿದರು.

Cut-off box - ‘ಶಾಸಕರ ಅನುದಾನ ₹5 ಕೋಟಿಗೆ ಹೆಚ್ಚಿಸಿ’ ‘ಶಾಸಕರಿಗೆ ಇದೀಗ ಪ್ರತಿ ವರ್ಷ ₹2 ಕೋಟಿ ಅನುದಾನ ನೀಡುತ್ತಿರುವುದು ಏತಕ್ಕೂ ಸಾಲದಾಗಿದೆ. ನನ್ನ ಕ್ಷೇತ್ರದಲ್ಲಿ 125ಕ್ಕೂ ಹೆಚ್ಚು ಹಳ್ಳಿ ತಾಂಡಾಗಳಿವೆ. ಹತ್ತಾರು ಜಾತಿ ವರ್ಗದವರಿಂದ ಸಮುದಾಯ ಭವನ ಸೇರಿದಂತೆ ನಾನಾ ಬೇಡಿಕೆ ಬಹಳಷ್ಟಿವೆ. ಈಗಿನ ಅನುದಾನದಲ್ಲಿ ಪ್ರತಿಯೊಂದು ಸಮಾಜದವರಿಗೆ ಆದ್ಯತೆ ಮೇಲೆ ಅನುದಾನ ನೀಡುವುದು ಅಸಾಧ್ಯ. ಇದೇ ಸಮಸ್ಯೆ ಎಲ್ಲ ಕ್ಷೇತ್ರಗಳ ಶಾಸಕರಿಗೂ ಕಾಡುತ್ತಿದೆ. ರಾಜ್ಯ ಸರ್ಕಾರ ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳ ಮಾದರಿಯಲ್ಲಿ ನಮಗೂ ಪ್ರತಿ ವರ್ಷ ₹5 ಕೋಟಿ ಅನುದಾನ ಕೊಡಬೇಕು’ ಎಂದು ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಸರ್ಕಾರದ ಗಮನ ಸೆಳೆದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.