ADVERTISEMENT

ಬೀದರ್‌ ಸಾಂಸ್ಕೃತಿಕ ಉತ್ಸವಕ್ಕೆ ಸಿದ್ಧತೆ ಪೂರ್ಣ: ಸುರೇಶ ಚನಶೆಟ್ಟಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 5:41 IST
Last Updated 25 ನವೆಂಬರ್ 2025, 5:41 IST
ಸುರೇಶ ಚನಶೆಟ್ಟಿ
ಸುರೇಶ ಚನಶೆಟ್ಟಿ   

ಬೀದರ್‌: ‘ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಮರ್ಥ ಸ್ವಯಂ ಸೇವಾ ಸಂಸ್ಥೆಯ ಸಹಯೋಗದಲ್ಲಿ ನಗರದ ಮನ್ನಳ್ಳಿ ರಸ್ತೆ ಕರ್ನಾಟಕ ಫಾರ್ಮಸಿ ಕಾಲೇಜಿನ ಆವರಣದಲ್ಲಿ ಬುಧವಾರ (ನ.26) ಸಂಜೆ 5.30ಕ್ಕೆ ‘ಬೀದರ್‌ ಸಾಂಸ್ಕೃತಿಕ ಉತ್ಸವ’ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಸಿದ್ಧತೆ ಪೂರ್ಣಗೊಂಡಿದೆ’ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ತಿಳಿಸಿದರು.

ಹೆಸರಾಂತ ಬಹುಭಾಷಾ ಗಾಯಕ ವಿಜಯ್‌ಪ್ರಕಾಶ್‌ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ನಟಿ ಅಮೂಲ್ಯ, ನಿರೂಪಕಿ ಅನುಶ್ರೀ ಸೇರಿದಂತೆ ಸ್ಥಳೀಯ ಕಲಾವಿದರು ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಮೈಸೂರು ದಸರಾ, ಹಂಪಿ ಉತ್ಸವ ನಿರಂತರವಾಗಿ ನಡೆಯುತ್ತಿವೆ. ಆದರೆ, ಬೀದರ್‌ ಜಿಲ್ಲೆಯಲ್ಲಿ ನಿರಂತರವಾಗಿ ಉತ್ಸವಗಳು ಜರುಗುತ್ತಿಲ್ಲ. ಅದರ ಕೊರತೆ ನೀಗಿಸಲು ಸಾಹಿತ್ಯ ಪರಿಷತ್ತು ಈ ಕಾರ್ಯಕ್ರಮ ಏರ್ಪಡಿಸಿದೆ. ಸಂಗೀತ ಕಾರ್ಯಕ್ರಮದ ಮೂಲಕ ಕನ್ನಡ ಭಾಷೆ, ಸಾಹಿತ್ಯದ ಮಹತ್ವ ಸಾರುವುದು ಇದರ ಮುಖ್ಯ ಉದ್ದೇಶ ಎಂದು ಹೇಳಿದರು.

ADVERTISEMENT

ಶರಣರು, ದಾಸರು ಸಾಹಿತ್ಯದ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ಜಾನಪದ ಕಲಾವಿದರು ಹಾಡಿನ ಮೂಲಕ ಅದನ್ನು ಮತ್ತಷ್ಟು ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಜನರಲ್ಲಿ ಕನ್ನಡದ ಪ್ರಜ್ಞೆ ಮೂಡಿಸಲು ಈ ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ. ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಉತ್ಸವ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಪರಿಷತ್ತಿನ ಸದಸ್ಯರು, ಸಾಹಿತಿಗಳಿಗೆ ಉಚಿತ ಪ್ರವೇಶ ಇದೆ ಎಂದು ತಿಳಿಸಿದರು.

ಪ್ರಮುಖರಾದ ಜೈರಾಜ ಖಂಡ್ರೆ, ರೇವಣಸಿದ್ದಪ್ಪ ಜಲಾದೆ, ಗಣೇಶ ಭೋಸ್ಲೆ, ರೋಶನ್‌ ವರ್ಮಾ, ವಿಶ್ವನಾಥ, ಬಾಬುವಾಲಿ ಹಾಜರಿದ್ದರು.

ಐದು ಸಾವಿರ ಆಸನಗಳು

ಸಾಂಸ್ಕೃತಿಕ ಉತ್ಸವದ ವೀಕ್ಷಣೆಗೆ ಐದು ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ರೂಪದಲ್ಲಿ ಒಬ್ಬರಿಗೆ ತಲಾ ₹300 ಟಿಕೆಟ್‌ ದರ ನಿಗದಿಪಡಿಸಲಾಗಿದೆ. ಸಾರ್ವಜನಿಕರಿಗೆ ತಲಾ ₹500 ವಿಐಪಿ ಪಾಸ್‌ ತಲಾ ಒಬ್ಬರಿಗೆ ₹2 ಸಾವಿರ ಇದೆ. ದಾನಿಗಳು ಹಾಗೂ ಟಿಕೆಟ್‌ನಿಂದ ಸಂಗ್ರಹವಾಗುವ ಹಣದಿಂದ ಕಲಾವಿದರ ಸಂಭಾವನೆ ಭರಿಸಲಾಗುವುದು’ ಎಂದು ಸಮರ್ಥ ಸೇವಾ ಸಂಸ್ಥೆ ಸಲಹೆಗಾರರೂ ಆದ ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ ತಿಳಿಸಿದರು.

ಟಿಕೆಟ್‌ ಖರೀದಿಸಲು ಹೀಗೆ ಮಾಡಿ

‘ಬೀದರ್‌ ಸಾಂಸ್ಕೃತಿಕ ಉತ್ಸವದ ಟಿಕೆಟ್‌ ಖರೀದಿಸಲು ಕಾರ್ಯಕ್ರಮದ ಸ್ಥಳದಲ್ಲಿ ವಿಶೇಷ ಕೌಂಟರ್‌ ಕೂಡ ತೆರೆಯಲಾಗುವುದು. ಅಲ್ಲಿ ನಗದು ಪಾವತಿಸಿ ಟಿಕೆಟ್‌ ಪಡೆಯಬಹುದು. ಮುಂಚಿತವಾಗಿ ಟಿಕೆಟ್‌ ಬುಕ್‌ ಮಾಡ ಬಯಸುವವರು ಮೊಬೈಲ್‌ ಸಂಖ್ಯೆ: 9986792323 9019092259 ಸಂಪರ್ಕಿಸಬಹುದು’ ಎಂದು ಸಮರ್ಥ ಸೇವಾ ಸಂಸ್ಥೆಯ ಅಧ್ಯಕ್ಷ ವೀರೇಶ ಸ್ವಾಮಿ ತಿಳಿಸಿದರು. ಇದು ಸಾರ್ವಜನಿಕರಿಗಾಗಿ ಏರ್ಪಡಿಸಿರುವ ಕಾರ್ಯಕ್ರಮ. ವಿದ್ಯಾರ್ಥಿಗಳು ಯುವಜನರು ರೈತರು ಉದ್ಯಮಿಗಳು ಭಾಗವಹಿಸಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.