
ಬೀದರ್: ‘ದಾಸರು ಅಜ್ಞಾನ ಮತ್ತು ಅಂಧಕಾರದಿಂದ ಬಳಲುತ್ತಿರುವ ಜನಸಾಮಾನ್ಯರಿಗೆ ಅವರ ಆಡುಭಾಷೆಯಲ್ಲೇ ಭಕ್ತಿ ಮಾರ್ಗ ತೋರಿಸಿದ್ದಾರೆ’ ಎಂದು ಅಹಿಲ್ಯಾಬಾಯಿ ಹೊಳ್ಕರ್ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಸೈಯದ್ ಸಲಾವುದ್ದೀನ್ ತಿಳಿಸಿದರು.
ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಅಹಿಲ್ಯಾಬಾಯಿ ಹೊಳ್ಕರ ಪ್ರೌಢ ಶಾಲೆಯ ಆವರಣದಲ್ಲಿ ಶಿವರಾತ್ರಿ ನಿಮಿತ್ತ ಏರ್ಪಡಿಸಿದ್ದ ‘ಹರಿದಾಸರ ದಾಸ ಸಾಹಿತ್ಯ ಸೌರಭ್ಯ ಮಾಲಿಕೆಯ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದಾಸರು ಸಾತ್ವಿಕ ವಿಚಾರಗಳಿಂದ ಲೋಕದ ಡೊಂಕನ್ನು ತಿದ್ದಿದ್ದಾರೆ. ಅದಕ್ಕಾಗಿ ಜನರಾಡುವ ಭಾಷೆಯಲ್ಲಿ ಸಾಹಿತ್ಯ ರಚಿಸಿದ್ದಾರೆ ಎಂದರು.
ಸಾಹಿತಿ ಸುನೀತಾ ಕೂಡ್ಲಿಕರ್ ಮಾತನಾಡಿ, ಹರಿದಾಸರು ಶಿವ ಭಕ್ತಿ ಪಾರಮ್ಯ ಮೆರೆದಿರುವುದು ವಿಶಿಷ್ಟ. ಅವರು ರುದ್ರದೇವರನ್ನು ಆಪ್ತ ದೇವರಾಗಿ ಸ್ತುತಿಸಿದ್ದಾರೆ. ಹರಿದಾಸರು ಶಿವ, ಮಹಾದೇವ, ಮಹಾರುದ್ರರ ಭಕ್ತಿ ಪರಾಕಾಷ್ಠೆಯನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು ಎಂದು ಹೇಳಿದರು.
ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ರವೀಂದ್ರ ಲಂಜವಾಡಕರ ಅಧ್ಯಕ್ಷತೆ ವಹಿಸಿ, ಹರಿದಾಸರು ಕನ್ನಡ ಸಾಹಿತ್ಯಕ್ಕೆ ಅಮೂಲ್ಯವಾದ ಕಾಣಿಕೆ ನೀಡಿದ್ದಾರೆ. ಹರಿದಾಸರ ತನು ಮನ ಶೋಧಿಸಿ ಬಾಳು ಬೆಳಗಿಸಿಕೊಳ್ಳುವ ಸಂದೇಶಗಳು ನಿರಂತರ ಪ್ರಚಾರ ಮಾಡಲಾಗುವುದು ಎಂದರು.
ವೈಜಿನಾಥ ಬಿರಾದಾರ ಅತಿಥಿಯಾಗಿ ಭಾಗವಹಿಸಿದ್ದರು. ಬಾಲಮ್ಮ ನಿರೂಪಿಸಿದರೆ, ರೋಹಿಣಿ ಸ್ವಾಗತಿಸಿದರೆ, ಪಲ್ಲವಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.