
ಬೀದರ್: ‘ಬೀದರ್ ಜಿಲ್ಲೆಯ ಸಕಾರಾತ್ಮಕವಾದ ವಿಷಯಗಳ ಮೇಲೆ ಹೆಚ್ಚು ಬೆಳಕು ಚೆಲ್ಲುವುದರ ಮೂಲಕ ಪ್ರವಾಸೋದ್ಯಮ ಬೆಳೆಸಬೇಕಿದೆ’ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸಲಹೆ ಮಾಡಿದರು.
ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಬೆಂಗಳೂರು ಕಚೇರಿ ಮತ್ತು ಸಹಾಯಕ ನಿರ್ದೇಶಕರ ಕಚೇರಿ ಸಹಯೋಗದಲ್ಲಿ ‘ಡಿಸ್ಕವರ್ ಬೀದರ್’ ಎಫ್‌ಎಎಮ್ ಟ್ರಿಪ್ ಅಂಗವಾಗಿ ನಗರದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಓರಿಯಂಟೇಶನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸೋಷಿಯಲ್ ಇನ್‌ಫ್ಲುಯೆನ್ಸರ್ಸ್ ಕಥೆಗಳನ್ನು ಹೇಳುತ್ತಾರೆ. ಟೂರ್ ಆಪರೇಟರ್ಸ್‌ಗಳು ಅದನ್ನು ವಾಸ್ತವ ರೂಪಕ್ಕೆ ಇಳಿಸುತ್ತಾರೆ. ಪ್ರವಾಸೋದ್ಯಮ ಬೆಳವಣಿಗೆಯಲ್ಲಿ ಇವರ ಕೊಡುಗೆ ಬಹಳ ದೊಡ್ಡದು. ಬೀದರ್ ಜಿಲ್ಲೆಯ ಸಾಂಸ್ಕೃತಿಕ ವಿಷಯಗಳನ್ನು ಸಕಾರಾತ್ಮಕವಾಗಿ ಹೆಚ್ಚು ಪ್ರಚುರಪಡಿಸುವ ಕೆಲಸ ನಿಮ್ಮಿಂದ ಆಗಬೇಕಿದೆ ಎಂದು ಹೇಳಿದರು.
ಬೀದರ್ ಮಹಾನಗರ ಪಾಲಿಕೆಯ ಆಯುಕ್ತ ಮುಕುಲ್ ಜೈನ್ ಮಾತನಾಡಿ, ಬೀದರ್ ಜಿಲ್ಲೆ ಅನೇಕ ಪ್ರವಾಸಿ ತಾಣಗಳನ್ನು ಹೊಂದಿದೆ. ಎಲ್ಲಾ ತಾಲ್ಲೂಕುಗಳಲ್ಲಿ ಪ್ರವಾಸಿ ತಾಣಗಳಿವೆ. ಪ್ರವಾಸೋದ್ಯಮ ಎಷ್ಟು ಬೆಳೆಯಬೇಕಿತ್ತೋ ಅಷ್ಟು ಬೆಳೆದಿಲ್ಲ. ಪ್ರವಾಸೋದ್ಯಮ ಕ್ಷೇತ್ರ ಬೆಳೆದರೆ ಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭಿಸುತ್ತವೆ. ಅವರ ಆದಾಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಡೆಂಗಿ, ಅಭಿಷೇಕ್ ಚಿಂತಾಮಣಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಪ್ರವಾಸ ನಿರ್ವಾಹಕರು, ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸ್‌ರ್ಸ್, ಟೂರ್ ಆಪರೇಟರ್ಸ್, ಪ್ರವಾಸೋದ್ಯಮ ಪಾಲುದಾರರು, ಉದ್ಯಮಿಗಳು, ಹೋಟೆಲ್ ಮಾಲೀಕರು ಪಾಲ್ಗೊಂಡಿದ್ದರು.
ಬೀದರ್ ಜಿಲ್ಲೆಯೂ ಧಾರ್ಮಿಕ ಪಾರಂಪರಿಯ ಸ್ಥಳಗಳನ್ನು ಹೊಂದಿದೆ. ಬಿದರಿ ಕಲೆಗೆ ಜಿಐ ಟ್ಯಾಗ್ ಸಿಕ್ಕಿದೆ. ಜಗತ್ತಿನ ಮೊಟ್ಟ ಮೊದಲ ಸಂಸತ್ತು ಎಂಬ ಹೆಗ್ಗಳಿಕೆ ಹೊಂದಿರುವ ಅನುಭವ ಮಂಟಪ ಬಸವಕಲ್ಯಾಣದಲ್ಲಿದೆ. ಇದರ ಬಗ್ಗೆ ಸ್ವತಃ ಈ ದೇಶದ ಪ್ರಧಾನಿ ತಮ್ಮ ಭಾಷಣದಲ್ಲಿಯೇ ಉಲ್ಲೇಖಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು. ಬೀದರ್‌ನಲ್ಲಿ ಕೋಟೆ ಮಹಮೂದ್ ಗಾವಾನ್ ಮದರಸಾ ಗುರುದ್ವಾರ ಝರಣಿ ನರಸಿಂಹ ಸ್ವಾಮಿ ದೇವಸ್ಥಾನ ಪಾಪನಾಶ ದೇವಸ್ಥಾನದಂತಹ ಪ್ರಮುಖ ಪ್ರವಾಸಿ ತಾಣಗಳಿವೆ. ಇವುಗಳ ಬಗ್ಗೆ ಹೊರಜಗತ್ತಿಗೆ ಗೊತ್ತಾಗಬೇಕಿದೆ ಎಂದು ಹೇಳಿದರು.
ಪ್ರವಾಸೋದ್ಯಮ ಸಚಿವಾಲಯದ ಬೆಂಗಳೂರು ಕಚೇರಿಯ ನಿರ್ದೇಶಕಿ ಸಂಧ್ಯಾ ಹರಿದಾಸ್ ಮಾತನಾಡಿ ಬೀದರ್ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ದೇವಸ್ಥಾನಗಳು ಐತಿಹಾಸಿಕ ಸ್ಥಳಗಳಿವೆ. ಪ್ರವಾಸಿ ತಾಣಗಳಂತೂ ಹೆಚ್ಚಿನ ಸಂಖ್ಯೆಯಲ್ಲಿವೆ. ಪ್ರವಾಸೋದ್ಯಮಕ್ಕೆ ಪೂರಕವಾದ ವಾತಾವರಣ ಜಿಲ್ಲೆಯಲ್ಲಿದೆ. ಕೇಂದ್ರ ಸರ್ಕಾರದ ‘ಚಾಲೆಂಜ್ ಬೇಸ್ಡ್ ಡೆಸ್ಟಿನೇಶನ್ಸ್ ಡೆವಲಪ್‌ಮೆಂಟ್’ (ಸಿಬಿಡಿಪಿ) ಯೋಜನೆಯಡಿ ಬೀದರ್ ಜಿಲ್ಲೆಯ ಬಗ್ಗೆ ಹೆಚ್ಚಿನ ಪ್ರಚಾರ ಕೈಗೊಂಡು ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.