ADVERTISEMENT

ಬೀದರ್‌ | ಆರ್ಥಿಕ ನಷ್ಟದ ನೆಪ: ಡಿಸಿಸಿ ಬ್ಯಾಂಕ್‌ ನೌಕರರಿಗೆ ಕೊಕ್‌

ಆರ್ಥಿಕ ನಷ್ಟದ ನೆಪವೊಡ್ಡಿ 40 ನೌಕರರಿಗೆ ಕೆಲಸದಿಂದ ಬಿಡುಗಡೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 12 ಡಿಸೆಂಬರ್ 2025, 6:55 IST
Last Updated 12 ಡಿಸೆಂಬರ್ 2025, 6:55 IST
ಬೀದರ್‌ ಡಿಸಿಸಿ ಬ್ಯಾಂಕ್‌
ಬೀದರ್‌ ಡಿಸಿಸಿ ಬ್ಯಾಂಕ್‌   

ಬೀದರ್‌: ನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಡಿಸಿಸಿ) 40 ಹೊರಗುತ್ತಿಗೆ ನೌಕರರಿಗೆ ಕೆಲಸದಿಂದ ಕೊಕ್‌ ನೀಡಲಾಗಿದೆ.

ಇದರಲ್ಲಿ ಕನಿಷ್ಠ 5 ವರ್ಷ, ಗರಿಷ್ಠ 20 ವರ್ಷಕ್ಕಿಂತ ಹೆಚ್ಚಿನ ಅವಧಿಯಿಂದ ನೌಕರರು ಬ್ಯಾಂಕಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ನವೆಂಬರ್‌ ತಿಂಗಳ ಅಂತ್ಯಕ್ಕೆ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ. ಎಲ್ಲಾ ಹೊರಗುತ್ತಿಗೆ ನೌಕರರನ್ನು ಕರೆದು, ಡಿಸೆಂಬರ್‌ ಮೊದಲ ದಿನದಿಂದ ಕೆಲಸಕ್ಕೆ ಬರುವುದು ಬೇಡ. ಸಂಸ್ಥೆ ಆರ್ಥಿಕ ನಷ್ಟದಲ್ಲಿದ್ದು, ಎಲ್ಲಾ ಸುಧಾರಿಸಿದ ನಂತರ ಕೆಲಸಕ್ಕೆ ಪುನಃ ಸೇರಿಸಿಕೊಳ್ಳುವುದರ ಬಗ್ಗೆ ಯೋಚಿಸಲಾಗುವುದು ಎಂಬುದಾಗಿ ಮೌಖಿಕವಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ADVERTISEMENT

‘ನಾವು ಕಾಯಂ ನೌಕರರಲ್ಲ ಎನ್ನುವುದು ಗೊತ್ತು. ಆದರೆ, ಕೆಲಸಕ್ಕೆ ಸೇರಿಸಿಕೊಳ್ಳುವಾಗ, ನೀವು ಕಾಯಂ ಅಲ್ಲದಿದ್ದರೂ ನಿಮ್ಮನ್ನು ನಡುವೆ ಕೆಲಸದಿಂದ ಕೈಬಿಡುವುದಿಲ್ಲ. ಪ್ರತಿವರ್ಷ ನಿಮ್ಮ ಸೇವೆ ಮುಂದುವರೆಸಲಾಗುವುದು ಎಂದು ಆಶ್ವಾಸನೆ ಕೊಟ್ಟಿದ್ದರು. ಅದರಂತೆ ನಾವು ಕೂಡ ನಿಯತ್ತಿನಿಂದ ಕೆಲಸ ಮಾಡುತ್ತಿದ್ದೆವು. ಆದರೆ, ಯಾವುದೇ ಮುನ್ಸೂಚನೆ ಇಲ್ಲದೆ ಏಕಾಏಕಿ, ಡಿಸೆಂಬರ್‌ನಿಂದ ಬರುವುದು ಬೇಡ ಎಂಬುದಾಗಿ ಹೇಳಿ, ಕೆಲಸದಿಂದ ಬಿಡುಗಡೆಗೊಳಿಸಿದ್ದಾರೆ. ಇದರಿಂದ ನಾವು ಅತಂತ್ರರಾಗಿದ್ದೇವೆ’ ಎಂದು ಹೆಸರು ಹೇಳಲಿಚ್ಛಿಸದ ನೌಕರರು ‘ಪ್ರಜಾವಾಣಿ’ಗೆ ಗೋಳು ತೋಡಿಕೊಂಡಿದ್ದಾರೆ.

‘ಕೆಲಸದಲ್ಲಿದ್ದ ಕಾರಣ ಮದುವೆ–ಮುಂಜಿ, ಮನೆ ನಿರ್ಮಾಣ ಸೇರಿದಂತೆ ಇತರೆ ಕೆಲಸಕ್ಕೆ ಸಾಲ ಮಾಡಿಕೊಂಡಿದ್ದೇವೆ. ಏಕಾಏಕಿ ನಮ್ಮನ್ನು ಕೆಲಸದಿಂದ ತೆಗೆದಿರುವುದರಿಂದ ದಿಕ್ಕು ತೋಚದಂತಾಗಿದೆ. ಇಂದು ಡಿಸಿಸಿ ಬ್ಯಾಂಕ್‌ ಈ ಮಟ್ಟಕ್ಕೆ ಬೆಳೆಯಬೇಕಾದರೆ ನಮ್ಮೆಲ್ಲರ ಶ್ರಮ ಇದೆ. ಅದನ್ನು ಮರೆಯಬಾರದು. 15 ವರ್ಷಗಳಿಂದ ನಾನು ಕೆಲಸ ಮಾಡುತ್ತಿದ್ದೆ. ಏಕಾಏಕಿ ನಮ್ಮನ್ನು ಬೀದಿಗೆ ತಳ್ಳಿರುವುದು ಸರಿಯಲ್ಲ’ ಎಂದು ಹೇಳಿದ್ದಾರೆ.

ನಾನು ಸದ್ಯ ಬೆಳಗಾವಿ ಅಧಿವೇಶನದ ನಿಮಿತ್ತ ಅಲ್ಲಿಗೆ ತೆರಳಿರುವೆ. ಈ ಕುರಿತು ಸದ್ಯ ಏನೂ ಪ್ರತಿಕ್ರಿಯಿಸಲು ಹೋಗುವುದಿಲ್ಲ
ಮಂಜುಳಾ ಸಿಇಒ ಡಿಸಿಸಿ ಬ್ಯಾಂಕ್‌
ಡಿಸಿಸಿ ಬ್ಯಾಂಕ್‌ ಎಂದೂ ಕೂಡ ಆರ್ಥಿಕ ನಷ್ಟಕ್ಕೆ ಒಳಗಾಗಿಲ್ಲ. ಆದಕಾರಣ ನೌಕರರನ್ನು ಕೆಲಸದಿಂದ ತೆಗೆಯುವುದು ಸರಿಯಲ್ಲ
ಕೆಲಸದಿಂದ ಬಿಡುಗಡೆಗೊಂಡ ಡಿಸಿಸಿ ಬ್ಯಾಂಕ್‌ ನೌಕರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.