
ಬೀದರ್: ನಗರದ ಹಡಪದ ಅಪ್ಪಣ್ಣ ವೃತ್ತದಿಂದ ಗುಂಪಾ ಸಿದ್ದಾರೂಢ ವೃತ್ತ ವರೆಗಿನ ರಿಂಗ್‌ರೋಡ್‌ನ ಒಂದು ಭಾಗ ಅತಿಕ್ರಮಣವಾಗಿದ್ದು, ವಾಹನ ಸಂಚಾರಕ್ಕೆ ತೊಡಕಾಗಿ ಅಪಘಾತಗಳು ಸಂಭವಿಸುತ್ತಿವೆ. ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ, ರಸ್ತೆ ಒತ್ತುವರಿ ತೆರವುಗೊಳಿಸಬೇಕು ಎಂದು ವಿವೇಕಾನಂದ ಕಾಲೊನಿ, ಸಿಎಂಸಿ ಕಾಲೊನಿ ಹಾಗೂ ಕೃಷಿ ಕಾಲೊನಿ ಸಮಸ್ತ ನಾಗರಿಕ ಸಮಿತಿ ಆಗ್ರಹಿಸಿದೆ.
ಈ ಸಂಬಂಧ ಮೂರೂ ಕಾಲೊನಿಯ ನಿವಾಸಿಗಳು ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರನ್ನು ಭೇಟಿ ಮಾಡಿ, ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ರಸ್ತೆ ಅತಿಕ್ರಮಣದಿಂದ ಗುಂಪಾ ರಿಂಗ್‌ರೋಡ್‌ನಲ್ಲಿರುವ ಸಿದ್ದಾರೂಢ ವೃತ್ತ ಅಥವಾ ಸಿಗ್ನಲ್ ಇರುವ ಜಂಕ್ಷನ್ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಇದು ನಗರ ಹಾಗೂ ಇತರೆ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದೆ. ಇಲ್ಲಿ ನಿತ್ಯ ಅಪಘಾತಗಳು ಸರ್ವೇ ಸಾಮಾನ್ಯವಾಗಿದೆ. ಇದನ್ನು ಆದ್ಯತೆಯ ಮೇರೆಗೆ ಜನರ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಅದಕ್ಕೂ ಮುನ್ನ ಇಲ್ಲಿ ತುರ್ತಾಗಿ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಿ, ಸಿಗ್ನಲ್ ಆರಂಭಿಸಬೇಕು. ಬೆಳಿಗ್ಗೆ 8ರಿಂದ ಮಧ್ಯಾಹ್ನ 12 ಹಾಗೂ ಸಂಜೆ 4ರಿಂದ ರಾತ್ರಿ 8ರ ವರೆಗೆ ಕನಿಷ್ಠ ಇಬ್ಬರು ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು. ಗುಂಪಾ ಹಾಗೂ ಮೈಲೂರ ನಡುವೆ ಇರುವ ವಿವೇಕಾನಂದ ಕಾಲೊನಿ, ಕೃಷಿ ಕಾಲೊನಿ ಹಾಗೂ ಸಿಎಮ್‌ಸಿ ಕಾಲೊನಿ ಲೇಔಟ್‌ಗಳು ಅಸ್ತಿತ್ವಕ್ಕೆ ಬಂದು ಮೂರು ದಶಕಗಳಿಗೂ ಹೆಚ್ಚು ಸಮಯ ಕಳೆದಿದೆ. ಆದರೆ, ಈಗಲೂ ಇಲ್ಲಿ ಹೇಳಿಕೊಳ್ಳುವಂತಹ ಮೂಲಸೌಕರ್ಯಗಳು ಇಲ್ಲ. ಅದನ್ನು ಕಲ್ಪಿಸಬೇಕು.
ಗುಂಪಾದಿಂದ ಮೌನೇಶ್ವರ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದ್ದು, ದುರಸ್ತಿಗೊಳಿಸಬೇಕು. 24X7 ಕುಡಿಯುವ ನೀರಿನ ಸಂಪರ್ಕ ಬಹುತೇಕ ಮನೆಗಳಿಗೆ ಕಲ್ಪಿಸಲಾಗಿದೆ. ಆದರೆ, ಹೇಳಲಿಕ್ಕಷ್ಟೇ 24X7. ನಿತ್ಯ ನೀರು ಬಿಡಬೇಕು. ಇಲ್ಲವಾದರೆ ಕನಿಷ್ಠ ಒಂದು ದಿನ ಬಿಟ್ಟು ಇನ್ನೊಂದು ದಿನ ನೀರು ಬಿಡಲು ವ್ಯವಸ್ಥೆ ಮಾಡಬೇಕು. ಮೂರೂ ಕಾಲೊನಿಯ ಉದ್ಯಾನಗಳನ್ನು ಅಭಿವೃದ್ಧಿಪಡಿಸಬೇಕು. ಈ ನಿಟ್ಟಿನಲ್ಲಿ 15 ದಿನಗಳ ಒಳಗೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಅನಿವಾರ್ಯವಾಗಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಮಹಾನಗರ ಪಾಲಿಕೆಯ ಆಯುಕ್ತ ಮುಕುಲ್ ಜೈನ್ ಅವರಿಗೂ ಪ್ರತ್ಯೇಕ ಮನವಿ ಸಲ್ಲಿಸಿದ್ದಾರೆ.
ಮಹಾನಗರ ಪಾಲಿಕೆಯ ಸದಸ್ಯ ರಾಜಾರಾಮ ಚಿಟ್ಟಾ, ನಾಗರಿಕ ಸಮಿತಿಯ ದೇವೇಂದ್ರಪ್ಪ ಚಿಮಕೋಡ್, ಕೆ. ಗೋಪಾಲ್ ರೆಡ್ಡಿ, ವಿಜಯಕುಮಾರ ಬೆಜಂಕಿ, ಶಿವನಾಥ ಧಾರಣೆ, ಮನ್ಮಥ ಸ್ವಾಮಿ, ಈಶ್ವರ ರೂಪನೋರೆ, ಕೃಷಿ ಕಾಲೊನಿ, ವಿವೇಕಾನಂದ ಕಾಲೊನಿ, ಸಿಎಮ್‌ಸಿ ಕಾಲೊನಿ, ಅಲ್ಲಮಪ್ರಭು ನಗರ, ಶಿವಾಜಿ ನಗರ ಬಡಾವಣೆಯ ನಿವಾಸಿಗಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.