ಬಸವಕಲ್ಯಾಣ: ತಾಲ್ಲೂಕಿನ ಕೊಹಿನೂರನಲ್ಲಿ ಗುರುವಾರ ಎರಡು ಕೆರೆ ಒಡೆದು ಆಗಿರುವ ಹಾನಿಯ ಪುನರ್ ಸಮೀಕ್ಷೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಜಿ.ಪಂ ಮಾಜಿ ಸದಸ್ಯ ಆನಂದ ಪಾಟೀಲ ಮಾತನಾಡಿ, ‘ತಿಂಗಳ ಹಿಂದೆ ಅತಿವೃಷ್ಟಿಯಿಂದ ಅಟ್ಟೂರ ಮತ್ತು ಕೊಹಿನೂರ ಕೆರೆಗಳು ಒಡೆದು ನೂರಾರು ಎಕರೆಯಲ್ಲಿನ ಮಣ್ಣು ಕೊಚ್ಚಿಕೊಂಡು ಹೋಗಿದೆ. ಬಾವಿಗಳು ಮುಚ್ಚಿವೆ. ಹೀಗಾಗಿ ರೈತರು ಸಂಕಟ ಅನುಭವಿಸುತ್ತಿದ್ದರೂ ಸಮೀಕ್ಷೆಗೆ ವಿಳಂಬ ಮಾಡಲಾಗಿದೆ’ ಎಂದು ಹೇಳಿದರು.
‘300 ರೈತರು ಹಾನಿ ಅನುಭವಿಸಿದರೂ ಇದುವರೆಗೆ ಬರೀ 100 ರೈತರ ಪಟ್ಟಿ ಮಾತ್ರ ಸಿದ್ಧಪಡಿಸಲಾಗಿದೆ. ನಷ್ಟಕ್ಕೊಳಗಾದ ಅನೇಕ ರೈತರ ಹೆಸರು ಕೈಬಿಟ್ಟಿವೆ. ಏನೂ ಆಗದವರ ಹೆಸರುಗಳು ಸೇರ್ಪಡೆ ಆಗಿವೆ. ಆದ್ದರಿಂದ ಈ ಕಾರ್ಯದಲ್ಲಿ ಅವ್ಯವಹಾರ ನಡೆದಿರುವ ಶಂಕೆ ಇದೆ’ ಎಂದು ಹೇಳಿದರು.
‘ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರು ಈ ಬಗ್ಗೆ ತಕ್ಷಣ ಗಮನಹರಿಸಿ ನ್ಯಾಯ ನೀಡದಿದ್ದರೆ, ಉಗ್ರ ಹೋರಾಟ ಕೈಗೊಳ್ಳಲಾಗುವುದು' ಎಂದು ಅವರು ಎಚ್ಚರಿಸಿದ್ದಾರೆ.
ಮುಖಂಡರಾದ ಮಲ್ಲಿಕಾರ್ಜುನ ಹಡಪದ, ಪರಶುರಾಮ ಜಡಗೆ, ಬಲಭಿಮ ಅಣಕಲ, ಸಂಜೀವಕುಮಾರ ಪಾಟೀಲ, ಪ್ರಶಾಂತ ಲಕಮಾಜಿ, ಚಂದ್ರು ಮುನೋಳೆ, ವೀರಣ್ಣ ಮೂಲಗೆ, ಸೋಮಣ್ಣ ಕಲೋಜಿ, ಅನೀಲ ಮಣಕೋಜಿ, ಜಾಲಿಂದರ ಶಹಾಜಿ, ಪಾರ್ವತಿಬಾಯಿ, ಶಾಂತಮ್ಮ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.