ADVERTISEMENT

ಬೀದರ್‌ಗೆ ಯುನಾನಿ ಕಾಲೇಜು ಮಂಜೂರಾತಿಗೆ ಆಗ್ರಹ

ಮುಖ್ಯಮಂತ್ರಿಗೆ ವಿಧಾನ ಪರಿಷತ್ ಸದಸ್ಯ ಅರಳಿ ಮನವಿ ಪತ್ರ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 13:52 IST
Last Updated 25 ಫೆಬ್ರುವರಿ 2021, 13:52 IST
ಅರವಿಂದಕುಮಾರ ಅರಳಿ
ಅರವಿಂದಕುಮಾರ ಅರಳಿ   

ಬೀದರ್: ಪ್ರಸಕ್ತ ಸಾಲಿನ ರಾಜ್ಯ ಬಜೆಟ್‍ನಲ್ಲಿ ಬೀದರ್ ಜಿಲ್ಲೆಗೆ ಯುನಾನಿ ವೈದ್ಯಕೀಯ ಕಾಲೇಜು ಹಾಗೂ ಕೃಷಿ ಕಾಲೇಜು ಮಂಜೂರು ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ 17 ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರ ಸಲ್ಲಿಸಿದ್ದಾರೆ.

ಜಿಲ್ಲೆಗೆ ಮಂಜೂರು ಮಾಡಲಾದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಬೇಕು. ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ರೂ. 400 ಕೋಟಿ ಅನುದಾನ ಒದಗಿಸಬೇಕು. ಮೌಲಾನಾ ಆಜಾದ್ ವಿಶ್ವವಿದ್ಯಾಲಯದ ಸ್ಯಾಟ್‍ಲೈಟ್ ಕೇಂದ್ರಕ್ಕೆ ಜಮೀನು ಮಂಜೂರು ಮಾಡಬೇಕು. ಔರಾದ್‍ಗೆ ಮಹಿಳಾ ಐಟಿಐ, ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ (ಬಿ) ಪಟ್ಟಣಕ್ಕೆ ಪದವಿ ಕಾಲೇಜು ಮಂಜೂರು ಮಾಡಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ.

ADVERTISEMENT

ಭೂ ಕಾಲುವೆ ಅಭಿವೃದ್ಧಿಗೆ ಅನುದಾನ ಕಲ್ಪಿಸಬೇಕು. ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ರೂ. 30 ಕೋಟಿ ನೆರವು ನೀಡಬೇಕು. ಔರಾದ್ ತಾಲ್ಲೂಕಿನಲ್ಲಿ ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸಬೇಕು. ಗೋದಾವರಿ ಜಲಾನಯನ ಪ್ರದೇಶದಲ್ಲಿ ನಾಲ್ಕು ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಲು ಅನುದಾನ ಒದಗಿಸಬೇಕು. ಪೊಲೀಸರಿಗೆ ವಸತಿಗೃಹ, ಈಗಾಗಲೇ ಮಂಜೂರು ಮಾಡಲಾದ ಮಹಿಳಾ ಪೊಲೀಸ್ ತರಬೇತಿ ಕೇಂದ್ರದ ಕಟ್ಟಡ ನಿರ್ಮಾಣ, ಎನ್‍ಇಕೆಆರ್‍ಟಿಸಿ ಚಾಲಕ, ನಿರ್ವಾಹಕ ಹಾಗೂ ಇತರ ಸಿಬ್ಬಂದಿ ವಸತಿ ಗೃಹ ನಿರ್ಮಾಣಕ್ಕೆ ಅನುದಾನ ಕೊಡಬೇಕು. ಜಿಲ್ಲೆಯಲ್ಲಿ ರೇಷ್ಮೆ ಮಾರಾಟ ಹಾಗೂ ಖರೀದಿ ಕೇಂದ್ರ ಸ್ಥಾಪಿಸಬೇಕು. ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಸ್ಥಗಿತಗೊಳಿಸಲಾದ ಕ್ರೈಸ್ತ ಅಭಿವೃದ್ಧಿ ನಿಗಮ ಪ್ರಾರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.