ಬೀದರ್: ‘ಬೀದರ್ ಜಿಲ್ಲಾ ಸೌಹಾರ್ದ ಸಹಕಾರಿ ಇಡೀ ರಾಜ್ಯದಲ್ಲಿಯೇ ಮಾದರಿ ಸಹಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ರಾಜ್ಯ ನಿರ್ದೇಶಕ ಗುರುನಾಥ್ ಜ್ಯಾಂತಿಕರ್ ತಿಳಿಸಿದರು.
ನಗರದ ಸಹಾರ್ದ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಬೀದರ್ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ 14ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಅನೇಕ ಜಿಲ್ಲೆಗಳಲ್ಲಿ ಒಕ್ಕೂಟ ರಚನೆಯಾಗಿವೆ. ಆದರೆ, ಅವುಗಳನ್ನು ನಡೆಸಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಆದರೆ, ಯಾವುದೇ ಆದಾಯ ಇಲ್ಲದಿದ್ದರೂ ಸದಸ್ಯರಿಂದ ವಾರ್ಷಿಕ ಶುಲ್ಕ ಪಡೆದು ಬೀದರ್ ಜಿಲ್ಲೆಯಲ್ಲಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕಲಬುರಗಿಯ ಶರಣಬಸಪ್ಪ ಅಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಒಕ್ಕೂಟದ ಉಪಾಧ್ಯಕ್ಷ ಸಂಜೀವ್ ಕುಮಾರ್ ಪಾಟೀಲ್ ಸ್ವಾಗತಿಸಿದರು. ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮೃತ್ ಹೊಸಮನಿ ಸಭೆಯ ನೋಟಿಸ್ ಓದಿದರು. ಹಿಂದಿನ ಸಾಮಾನ್ಯ ಸಭೆಯ ನಡಾವಳಿ ಮತ್ತು ನಿರ್ಣಯವನ್ನು ಸಂಜಯ್ ಕ್ಯಾಸಾ ಓದಿದರು. 2024-25 ನೇ ಸಾಲಿನ ಲೆಕ್ಕಪರಿಶೋಧನೆ ವರದಿಯನ್ನು ಉಪಾಧ್ಯಕ್ಷ ಸಂಜುಕುಮಾರ್ ಪಾಟೀಲ್ ಓದಿ ಅನುಮೋದನೆ ಪಡೆದರು.
2024–25ನೇ ಸಾಲಿನ ವಾರ್ಷಿಕ ವರದಿಯನ್ನು ನಿರ್ದೇಶಕ ಜಗನ್ನಾಥ ಕರಂಜೆ ನಡೆಸಿಕೊಟ್ಟರು. 2025–26ನೇ ಸಾಲಿನ ಕ್ರಿಯಾ ಯೋಜನೆಯನ್ನು ನಿರ್ದೇಶಕ ಕ್ರಾಂತಿಕುಮಾರ್ ಕುಲಾಲ್ ಓದಿದರು. ಕಳೆದ ಸಾಲಿನಲ್ಲಿ ಸದಸ್ಯತ್ವ ಪಡೆದ ಪಟ್ಟಿಯನ್ನು ನಿರ್ದೇಶಕ ಶಿವಬಸಪ್ಪ ಚನ್ಮಲ್ಲೆ ಮಂಡಿಸಿದರು. 2025–26ನೇ ಸಾಲಿನ ಅಂದಾಜು ಆಯವ್ಯಯವನ್ನು ನಿರ್ದೇಶಕ ಬಸವರಾಜ್ ಹುಡುಗಿ ಓದಿದರು. 25–26ನೇ ಸಾಲಿನ ಲೆಕ್ಕಪರಿಶೋಧಕರ ನೇಮಕಾತಿಯನ್ನು ರಾಜಶೇಖರ್ ನಾಗಮೂರ್ತಿ ನಡೆಸಿಕೊಟ್ಟರು.
ಉಳವಿ ಚನ್ನಬಸವ ಸೌಹಾರ್ದ ಸಹಕಾರಿ ನಿಯಮಿತದ ನಿರ್ದೇಶಕಿ ಪದ್ಮಜಾ ಪೊದ್ದರ್ ಅವರಿಗೆ ‘ಉತ್ತಮ ಸಹಕಾರಿ’, ಬಾಬುರಾವ್ ಕುಂಬಾರ್ ಅವರಿಗೆ ‘ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಂಕರ್ ಭಾರತೀಯ ಸಹಕಾರಿ ನೂತನ ಅಧ್ಯಕ್ಷ ಶಿವಬಸಪ್ಪ ಚನ್ಮಲೆ ಹಾಗೂ ಪ್ರಧಾನ ಕಾರ್ಯದರ್ಶಿ ಬಸವರಾಜ್ ಹುಡುಗೆ, ಸೌಹಾರ್ದ ಅಭಿವೃದ್ಧಿ ಅಧಿಕಾರಿ ವೀರಶೆಟ್ಟಿ ಕಾಮಣ್ಣ ಅವರನ್ನು ಸನ್ಮಾನಿಸಲಾಯಿತು. ವೀರಶೆಟ್ಟಿ ಕಾಮಣ್ಣ ನಿರೂಪಿಸಿದರೆ, ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮೃತ್ ಹೊಸಮನಿ ವಂದಿಸಿದರು. ನಿರ್ದೇಶಕ ಡಾ. ಹಾವಗಿರಾವ್ ಮೈಲಾರೆ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.