ADVERTISEMENT

ಬೀದರ್‌ | ಜಿಲ್ಲಾಧಿಕಾರಿಯಿಂದ ಬ್ರಿಮ್ಸ್‌ ಅಧಿಕಾರಿಗಳ ತರಾಟೆ

ಹುಚ್ಚು ನಾಯಿ ಕಡಿತದ ಔಷಧಿ ಇದ್ದರೂ ಹೊರಗೆ ಶಿಫಾರಸು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 6:32 IST
Last Updated 8 ಆಗಸ್ಟ್ 2025, 6:32 IST
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಬ್ರಿಮ್ಸ್‌ಗೆ ಭೇಟಿ ಕೊಟ್ಟು ನಿರ್ದೇಶಕ ಡಾ.ಶಿವಕುಮಾರ ಶೆಟಕಾರ್‌ ಅವರಿಂದ ಮಾಹಿತಿ ಪಡೆದರು. ಮಕ್ಕಳ ಪೋಷಕರು ಹಾಜರಿದ್ದರು
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಬ್ರಿಮ್ಸ್‌ಗೆ ಭೇಟಿ ಕೊಟ್ಟು ನಿರ್ದೇಶಕ ಡಾ.ಶಿವಕುಮಾರ ಶೆಟಕಾರ್‌ ಅವರಿಂದ ಮಾಹಿತಿ ಪಡೆದರು. ಮಕ್ಕಳ ಪೋಷಕರು ಹಾಜರಿದ್ದರು   

ಬೀದರ್‌: ಚಿಟಗುಪ್ಪ ತಾಲ್ಲೂಕಿನ ಮನ್ನಾಏಖ್ಖೆಳ್ಳಿಯಲ್ಲಿ ಹುಚ್ಚು ನಾಯಿ ಕಡಿತದಿಂದ ನಗರದ ಬ್ರಿಮ್ಸ್‌ನಲ್ಲಿ ದಾಖಲಾದವರಿಗೆ ಔಷಧಿ ಲಭ್ಯವಿದ್ದರೂ ವೈದ್ಯರು ಖಾಸಗಿಯಲ್ಲಿ ಖರೀದಿಸಲು ಶಿಫಾರಸು ಮಾಡಿರುವ ಘಟನೆ ನಡೆದಿದೆ.

ಮನ್ನಾಏಖ್ಖೆಳ್ಳಿಯಲ್ಲಿ ಮಂಗಳವಾರ (ಆ.6) ಸಂಜೆ 5ಗಂಟೆ ಸುಮಾರಿಗೆ ಎಂಟು ಮಕ್ಕಳ ಮೇಲೆ ಹುಚ್ಚು ನಾಯಿ ದಾಳಿ ನಡೆಸಿ, ಕಡಿದಿದೆ. ಇದರಲ್ಲಿ ಗಂಭೀರವಾಗಿ ಗಾಯಗೊಂಡ ಮೂವರು ಮಕ್ಕಳನ್ನು ಬ್ರಿಮ್ಸ್‌ಗೆ ಕಳಿಸಿಕೊಡಲಾಯಿತು. ಆದರೆ, ಅಲ್ಲಿನ ವೈದ್ಯರು ಆಸ್ಪತ್ರೆಯಲ್ಲಿ ಔಷಧಿ ಲಭ್ಯವಿಲ್ಲವೆಂದು ಹೇಳಿ ಹೊರಗೆ ಶಿಫಾರಸು ಮಾಡಿದ್ದಾರೆ.

ವಿಷಯ ತಿಳಿದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ದಿಢೀರನೆ ಆಸ್ಪತ್ರೆಗೆ ಭೇಟಿ ಕೊಟ್ಟು ಪರಿಶೀಲಿಸಿದಾಗ, ಔಷಧಿ ಲಭ್ಯವಿರುವುದು ಗಮನಕ್ಕೆ ಬಂದಿದೆ. ವೈದ್ಯರು ಹಾಗೂ ಅಲ್ಲಿನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ADVERTISEMENT

‘ಹುಚ್ಚು ನಾಯಿ ಹಲವು ಕಡೆಗಳಲ್ಲಿ ಕಚ್ಚಿದ್ದರಿಂದ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು. ಬ್ರಿಮ್ಸ್‌ಗೆ ಕರೆತಂದಾಗ ವೈದ್ಯರು ಚೀಟಿ ಬರೆದುಕೊಟ್ಟು, ಹೊರಗಿನ ಔಷಧಿ ಅಂಗಡಿಯಿಂದ ತರುವಂತೆ ಹೇಳಿದ್ದಾರೆ. ಬಳಿಕ ಜಿಲ್ಲಾಧಿಕಾರಿ ಬಂದು ಔಷಧಿಗೆ ವ್ಯವಸ್ಥೆ ಮಾಡಿದ್ದಾರೆ’ ಎಂದು ಮಕ್ಕಳ ಪೋಷಕರು ಹಾಗೂ ಸಂಬಂಧಿಕರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ‘ಹುಚ್ಚು ನಾಯಿ ಕಡಿತಕ್ಕೆ ‘ಆ್ಯಂಟಿ ರೇಬಿಸ್‌’, ‘ಇಮ್ಯುನೊಗ್ಲೋಬಿನ್‌’ ಔಷಧಿ ನೀಡಲಾಗುತ್ತದೆ. ನಾನು ಖುದ್ದು ಪರಿಶೀಲಿಸಿದ್ದು, ಎರಡೂ ಔಷಧಿ ಸ್ಟಾಕ್‌ ಇವೆ. ಸಂವಹನ ಕೊರತೆಯಿಂದ ವ್ಯತ್ಯಾಸ ಆಗಿದೆ. ಭವಿಷ್ಯದಲ್ಲಿ ಈ ರೀತಿಯ ಘಟನೆಗಳು ಆಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. 100 ವೈಲ್ಸ್‌ ಸದಾ ಇರಿಸಲು ನಿರ್ದೇಶನ ನೀಡಲಾಗಿದೆ’ ಎಂದು ಹೇಳಿದ್ದಾರೆ.

ಎಲ್ಲಾ ಅಗತ್ಯ ಔಷಧಿಗಳನ್ನು ಇರಿಸಬೇಕು. ಔಷಧಿ ಹೊರಗೆ ಬರೆದು ಕೊಡದಂತೆ ಸೂಚಿಸಲಾಗಿದೆ. ಬೀದಿನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಚರಣ ರೆಡ್ಡಿಯನ್ನು ಚಿಕಿತ್ಸೆ ನೀಡಿ ದಾಖಲಿಸಿಕೊಳ್ಳಲಾಗಿದೆ. ಶಮಿತಾ ಹಾಗೂ ಈಶ್ವರಿ ಹೆಸರಿನ ಬಾಲಕಿಯರು ಚಿಕಿತ್ಸೆ ಪಡೆದು ತೆರಳಿದ್ದಾರೆ ಎಂದು ಬ್ರಿಮ್ಸ್ ನಿರ್ದೇಶಕ ಡಾ.ಶಿವಕುಮಾರ ಶೆಟಕಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.