ಬೀದರ್: ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ನಿರ್ಮಾಣ ಚಟುವಟಿಕೆಗಳು ಹೆಚ್ಚಿರುವುದರಿಂದ ಅಳಿವಿನಂಚಿನಲ್ಲಿರುವ ಅಪರೂಪದ ವನ್ಯಜೀವಿಗಳ ಆವಾಸ ಸ್ಥಾನಕ್ಕೆ ಕುತ್ತು ಬಂದೊದಗಿದೆ.
ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದ ಅನತಿ ದೂರದಲ್ಲಿ ‘ಇಂಡಿಯನ್ ಗ್ರೇ ವುಲ್ಫ್’ಗಳ (ಭಾರತೀಯ ಬೂದುಬಣ್ಣದ ತೋಳ) ಆವಾಸ ಸ್ಥಾನವಿದೆ. ಇದು ಅಳಿವಿನ ಅಂಚಿನಲ್ಲಿರುವ ವನ್ಯಜೀವಿ ಎಂದು ಗುರುತಿಸಿ, ಸರ್ಕಾರವು ಇದನ್ನು ಶೆಡ್ಯೂಲ್ ಒಂದರಲ್ಲಿ ಸೇರಿಸಿದೆ.
ಶೆಡ್ಯೂಲ್ ಒಂದಕ್ಕೆ ಸೇರ್ಪಡೆಯಾದ ವನ್ಯಜೀವಿಗಳಿದ್ದರೆ ಆ ಪ್ರದೇಶವನ್ನು ಅರಣ್ಯ ಇಲಾಖೆ ಸಂರಕ್ಷಿತ ಮೀಸಲು ಪ್ರದೇಶವಾಗಿ ಘೋಷಿಸಬೇಕು. ಯಾವುದೇ ರೀತಿಯ ನಿರ್ಮಾಣ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು. ಆದರೆ, ಈ ಭಾಗದಲ್ಲಿ ಎಗ್ಗಿಲ್ಲದೇ ಚಟುವಟಿಕೆಗಳು ಜರುಗುತ್ತಿವೆ.
ಇನ್ನು, ಈ ಭಾಗದಲ್ಲಿ ಕೃಷ್ಣಮೃಗಗಳು ಕೂಡ ಅಧಿಕ ಸಂಖ್ಯೆಯಲ್ಲಿವೆ. ನಿರ್ಮಾಣ ಚಟುವಟಿಕೆಗಳು ನಡೆದರೆ ಇವುಗಳ ಸಹಜ ಚಲನವಲನಕ್ಕೆ ಅಡ್ಡಿ ಉಂಟಾಗುತ್ತದೆ. ಅವುಗಳ ಸಂತಾನೋತ್ಪತ್ತಿ ಮೇಲೆಯೂ ಪರಿಣಾಮ ಬೀರುವ ಆತಂಕವಿದೆ ಎನ್ನುತ್ತಾರೆ ಪರಿಸರವಾದಿಗಳು.
‘ಬೀದರ್ ಜಿಲ್ಲೆಯಲ್ಲಿ ಆರು ಕ್ಲಸ್ಟರ್‌ಗಳನ್ನು ಸಂರಕ್ಷಿತ ಪ್ರದೇಶವಾಗಿ ಘೋಷಿಸಬೇಕೆಂಬ ಪ್ರಸ್ತಾವ ಇದೆ. ಇದರಲ್ಲಿ ಚಟ್ನಾಳ ಕೂಡ ಸೇರಿದೆ. ಈಗಾಗಲೇ ಈ ನಿಟ್ಟಿನಲ್ಲಿ ಸರ್ವೆ ಕೂಡ ಆಗಿದೆ. ಇಂತಹ ಪ್ರದೇಶದಲ್ಲಿ ಯಾರೇ ನಿರ್ಮಾಣ ಚಟುವಟಿಕೆ ಮಾಡಬೇಕಾದರೆ ಅರಣ್ಯ ಇಲಾಖೆಯ ಅನುಮತಿ ಪಡೆದುಕೊಳ್ಳಬೇಕು. ಅನ್ಯ ರಾಜ್ಯದ ಬಂಡವಾಳಶಾಹಿಗಳು ಅರಣ್ಯ ಜಮೀನಿಗೆ ಹೊಂದಿಕೊಂಡಂತಿರುವ ಪಟ್ಟಾ ಜಮೀನು ಖರೀದಿಸಿ, ನಿರ್ಮಾಣ ಚಟುವಟಿಕೆ ಕೈಗೊಂಡಿದ್ದಾರೆ. ಕಾಂಪೌಂಡ್ ನಿರ್ಮಿಸುತ್ತಿದ್ದಾರೆ. ಇದು ವನ್ಯಜೀವಿಗಳ ಸಂರಕ್ಷಣೆಯ ದೃಷ್ಟಿಯಿಂದ ಸರಿಯಾದ ಕ್ರಮವಲ್ಲ. ಅರಣ್ಯ ಇಲಾಖೆಯವರು ಕೂಡಲೇ ಮಧ್ಯ ಪ್ರವೇಶಿಸಿ ತಡೆಯಬೇಕು’ ಎಂದು ಎಂದು ರಾಜ್ಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ ಸದಸ್ಯ ವಿನಯ್ ಕುಮಾರ್ ಮಾಳಗೆ ಆಗ್ರಹಿಸಿದ್ದಾರೆ.
‘ಈ ಸಂಬಂಧ ಈಗಾಗಲೇ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ. ಅವರಿಗೆ ತಿಳಿಸಲಾಗಿದೆ. ನಾನು ಖುದ್ದು ಈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ‘ಬೀಟ್ ಫಾರೆಸ್ಟ್’ ಅಧಿಕಾರಿಗೂ ಎಲ್ಲ ವಿವರಿಸಿದ್ದೇನೆ. ಉದ್ದೇಶಿತ ಸಂರಕ್ಷಿತ ಪ್ರದೇಶಗಳ ಸುತ್ತ ಯಾವುದೇ ರೀತಿಯ ಕೆಲಸಗಳು ಆಗಬಾರದು. ಕಂದಾಯ ಇಲಾಖೆಗೆ ಸೇರಿದ ಜಮೀನನ್ನು ಅರಣ್ಯ ಇಲಾಖೆಯವರು ತಮ್ಮ ಸುಪರ್ದಿಗೆ ಪಡೆದುಕೊಳ್ಳಬೇಕು. ವನ್ಯಜೀವಿಗಳನ್ನು ಸಂರಕ್ಷಿಸುವ ಅಗತ್ಯವಿದೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಆರು ಕ್ಲಸ್ಟರ್‌ಗಳನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸುವ ಪ್ರಸ್ತಾವಕ್ಕೆ ಇನ್ನಷ್ಟೇ ಅನುಮೋದನೆ ಸಿಗಬೇಕಿದೆ. ಈ ನಿಟ್ಟಿನಲ್ಲಿ ಅಗತ್ಯ ಪ್ರಕ್ರಿಯೆ ನಡೆಯುತ್ತಿದೆ.–ವಾನತಿ ಎಮ್.ಎಮ್. ಉಪ ಅರಣ್ಯ ಸಂರಕ್ಷಣಾಧಿಕಾರಿ
ಉದ್ದೇಶಿತ ಕೃಷ್ಣಮೃಗ ಸಂರಕ್ಷಿತ ಪ್ರದೇಶಗಳು ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಚಟ್ನಾಳ ಧೂಮತಮಹಾಗಾಂವ್ ಗಡಿಕುಶನೂರ ಖಾನಾಪೂರ (ಕೆ) ಕಮಲನಗರ ತಾಲ್ಲೂಕಿನ ಬಾಲೂರ (ಕೆ) ಭಾಲ್ಕಿ ತಾಲ್ಲೂಕಿನ ಕೋನಮೇಳಕುಂದಾ ಸೇರಿವೆ.
ಇನ್ನು ನಗರ ಹೊರವಲಯದ ತಾಲ್ಲೂಕಿನ ಬೆಳ್ಳೂರಾ ಸುತ್ತಮುತ್ತ ಕೃಷ್ಣಮೃಗಗಳು ಅಧಿಕ ಸಂಖ್ಯೆಯಲ್ಲಿವೆ. ಈ ಪ್ರದೇಶವು ನಗರಕ್ಕೆ ಹೊಂದಿಕೊಂಡಿದ್ದು ವಾಯುಪಡೆ ತರಬೇತಿ ಕೇಂದ್ರಕ್ಕೆ ಅಂಟಿಕೊಂಡಿದ್ದರಿಂದ ಇದುವರೆಗೆ ಇಲ್ಲಿನ ಕೃಷ್ಣಮೃಗಗಳಿಗೆ ಯಾವುದೇ ರೀತಿಯ ಅಪಾಯ ಇರಲಿಲ್ಲ. ಆದರೆ ವಾಯುಪಡೆ ತರಬೇತಿ ಕೇಂದ್ರದ ಕಾಂಪೌಂಡ್ ಸುತ್ತಮುತ್ತ ಎಗ್ಗಿಲ್ಲದೇ ಲೇಔಟ್‌ಗಳು ತಲೆ ಎತ್ತುತ್ತಿವೆ. ನಿರ್ಮಾಣ ಚಟುವಟಿಕೆಗಳು ಕೂಡ ಭರದಿಂದ ನಡೆಯುತ್ತಿವೆ. ಇದರಿಂದ ಕೃಷ್ಣಮೃಗಗಳಿಗೆ ಸಂಕಷ್ಟ ಎದುರಾಗಿದೆ. ಇಲ್ಲಿರುವ ಕೃಷ್ಣಮೃಗಗಳು ಚಿಟ್ಟಾ ಕಮಠಾಣ ಕಾಡವಾದ ವರೆಗೆ ಕ್ರಮಿಸುತ್ತವೆ. ಒಂದುವೇಳೆ ನಿರ್ಮಾಣ ಚಟುವಟಿಕೆಗಳು ಹೆಚ್ಚಿದಲ್ಲಿ ಇವುಗಳ ಸಹಜ ಓಡಾಟದ ಮೇಲೂ ಪರಿಣಾಮ ಬೀರಿ ಇವುಗಳ ಸಂತಾನೋತ್ಪತ್ತಿ ಬೆಳವಣಿಗೆಗೂ ತೊಡಕಾಗಬಹುದು ಎನ್ನುವುದು ಪ್ರಾಣಿಪ್ರಿಯರ ಆತಂಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.