
ಪಾದಚಾರಿ ಮಾರ್ಗದುದ್ದಕ್ಕೂ ತಳ್ಳುಗಾಡಿ ನಿಲ್ಲಿಸಿರುವುದು
ಬೀದರ್: ನಗರದ ಪ್ರಮುಖ ರಸ್ತೆಗಳಲ್ಲಿರುವ ಪಾದಚಾರಿ ಮಾರ್ಗಗಳನ್ನು ಅತಿಕ್ರಮಣ ಮಾಡಿರುವುದರಿಂದ ಜನ ಅನಿವಾರ್ಯವಾಗಿ ರಸ್ತೆಯ ಮೇಲೆ ಓಡಾಡುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.
ಇಂಥದ್ದೇ ರಸ್ತೆಯಂತಲ್ಲ. ನಗರದ ಎಲ್ಲ ರಸ್ತೆಗಳಲ್ಲೂ ಹೆಚ್ಚು ಕಮ್ಮಿ ಇದೇ ಪರಿಸ್ಥಿತಿ ಇದೆ. ಮಳಿಗೆ, ಹೋಟೆಲ್, ಪಾನಬೀಡಾ, ಗೂಡಂಗಡಿ ಹೀಗೆ ಪಾದಚಾರಿ ಮಾರ್ಗಯುದ್ದಕ್ಕೂ ಕಾಣಸಿಗುತ್ತವೆ.
ಕೆಲವರಂತೂ ರಾಜಾರೋಷವಾಗಿ ಯಾರ ಹೆದರಿಕೆಯೂ ಇಲ್ಲದೇ ಪಾದಚಾರಿ ಮಾರ್ಗದ ಮೇಲೆ ವ್ಯಾಪಾರ ಮಾಡುತ್ತಿದ್ದಾರೆ. ಅದಕ್ಕಾಗಿ ಶೆಡ್ ಕೂಡ ಹಾಕಿದ್ದಾರೆ. ಕೆಲವರು ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಿಕೊಂಡು ಹಗಲೆಲ್ಲಾ ವ್ಯಾಪಾರ ವಹಿವಾಟು ನಡೆಸುತ್ತಾರೆ. ರಾತ್ರಿ ವೇಳೆ ಸಾಮಾನು ಸರಂಜಾಮುಗಳನ್ನು ಮಳಿಗೆ ಬಾಗಿಲು ಮುಚ್ಚುವಾಗ ಒಳಗೆ ಕೊಂಡೊಯ್ದು ಇಡುತ್ತಾರೆ. ಆದರೆ, ಹೆಚ್ಚಿನವರು ಪಾದಚಾರಿ ಮಾರ್ಗದಲ್ಲೇ ಎಲ್ಲವೂ ಎಂಬಂತಾಗಿದೆ.
ಎಲ್ಲ ಕಡೆಗಳಲ್ಲಿ ಪಾದಚಾರಿ ಮಾರ್ಗಗಳನ್ನು ಕಬ್ಜಾ ಮಾಡಿರುವುದರಿಂದ ಜನ ಅನಿವಾರ್ಯವಾಗಿ ರಸ್ತೆಯ ಮೇಲೆ ಓಡಾಡುತ್ತಾರೆ. ಅದರಲ್ಲೂ ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಜನರು ರಸ್ತೆಯ ಮೇಲೆ ನಡೆದಾಡುತ್ತಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ. ಅಪಘಾತಗಳಿಗೂ ಕಾರಣವಾಗಿದೆ.
ಬೀದರ್ ನಗರದಲ್ಲಿ ಎಲ್ಲೆಲ್ಲಿ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಲಾಗಿದೆಯೋ ಅವುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಾಗುವುದು.–ಮುಕುಲ್ ಜೈನ್, ಆಯುಕ್ತ, ಬೀದರ್ ಮಹಾನಗರ ಪಾಲಿಕೆ
ಹೆಸರೇ ಹೇಳುವಂತೆ ಪಾದಚಾರಿ ಮಾರ್ಗಗಳು ಇರುವುದು ನಡೆದುಕೊಂಡು ಹೋಗುವವರಿಗಾಗಿ. ಆದರೆ, ಅವುಗಳನ್ನು ಮಳಿಗೆಗಳ ಮಾಲೀಕರ ವ್ಯಾಪಾರ ವಹಿವಾಟಿನ ಅನುಕೂಲಕ್ಕಾಗಿ ಎಂಬಂತಹ ಪರಿಸ್ಥಿತಿ ಇದೆ.
ನಗರದ ಮನ್ನಳ್ಳಿ ರಸ್ತೆ, ಚಿದ್ರಿ ರಸ್ತೆ, ಹೌಸಿಂಗ್ ಬೋರ್ಡ್ ಕಾಲೊನಿ ಸೇರಿದಂತೆ ಎಲ್ಲ ಕಡೆ ಇದೇ ಸ್ಥಿತಿ ಇದೆ. ‘ಕೆಲವು ಮಳಿಗೆಗಳ ಮಾಲೀಕರು ರಾಜಾರೋಷವಾಗಿ ಫುಟ್‌ಪಾತ್ ಅತಿಕ್ರಮಿಸಿದ್ದಾರೆ. ಇಷ್ಟೇ ಅಲ್ಲ, ಕೆಲವರು ಅವುಗಳ ಸ್ಥಳದಲ್ಲಿ ಗೂಡಂಗಡಿಗಳಿಗೆ ಅವಕಾಶ ಮಾಡಿಕೊಟ್ಟು ಅವರಿಂದ ಬಾಡಿಗೆ ಪಡೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತವಾದ ಸ್ಥಳದಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟು, ಪಾದಚಾರಿ ಮಾರ್ಗಗಳಲ್ಲಿ ಜನ ಓಡಾಡಲು ಬೀದರ್ ಮಹಾನಗರ ಪಾಲಿಕೆ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಸಂದೀಪ್ ಕೆ.
ಬೀದರ್‌ನ ಮಡಿವಾಳೇಶ್ವರ ವೃತ್ತದಿಂದ ಹೌಸಿಂಗ್ ಬೋರ್ಡ್ ಕಾಲೊನಿ ಹೋಗುವ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಗೂಡಂಗಡಿ ಇರಿಸಿರುವ ಕಾರಣ ಜನ ರಸ್ತೆಯ ಮೇಲೆ ನಡೆದು ಹೋಗಬೇಕಿದೆ –ಪ್ರಜಾವಾಣಿ ಚಿತ್ರ: ಲೋಕೇಶ್ ವಿ. ಬಿರಾದಾರ
ಕೆಂಪು ಮಣ್ಣಿನ ಸ್ನಾನ: ಬೀದರ್ ನಗರದ ಹಲವು ಕಡೆಗಳಲ್ಲಿ ಇನ್ನಷ್ಟೇ ಪಾದಚಾರಿ ಮಾರ್ಗ ನಿರ್ಮಿಸಬೇಕಿದೆ. ಉದಾಹರಣೆಗೆ ಮನ್ನಳ್ಳಿ ರಸ್ತೆಯುದ್ದಕ್ಕೂ ಜನವಸತಿ ಸಾಕಷ್ಟು ಬೆಳೆದಿದೆ. ಮೈಲೂರ್ ಕ್ರಾಸ್‌ನಿಂದ ಕರೋಡಿಮಲ್ ಲೇಔಟ್ ವರೆಗೆ ಫುಟ್‌ಪಾತ್ ನಿರ್ಮಿಸಬೇಕೆನ್ನುವುದು ಸಾರ್ವಜನಿಕರ ಬೇಡಿಕೆಯಾಗಿದೆ. ಈ ಸಂಬಂಧ ಸ್ಥಳೀಯರು ಹಲವು ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಫುಟ್‌ಪಾತ್ ಇಲ್ಲದ ಕಾರಣ ಎಲ್ಲ ಕಡೆ ಮಣ್ಣು ದೂಳಿನಿಂದ ಜನ ಸಮಸ್ಯೆ ಎದುರಿಸುತ್ತಿದ್ದಾರೆ.
‘ಮೈಲೂರ್ ಕ್ರಾಸ್‌ನಿಂದ ಗುಂಪಾ ಚಿಟ್ಟಾ ಕ್ರಾಸ್ ತನಕ ಪಾದಚಾರಿ ಮಾರ್ಗ ಚರಂಡಿ ನಿರ್ಮಿಸುವುದು ಬಹಳ ಜರೂರಿ ಇದೆ. ಈ ಸಂಬಂಧ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿರುವೆ. ಫುಟ್‌ಪಾತ್ ಇಲ್ಲದ ಕಾರಣ ಜನ ರಸ್ತೆಯ ಮೇಲೆ ವಾಕಿಂಗ್ ಮಾಡಬೇಕಿದೆ. ನಗರದಲ್ಲಿ ಅತಿ ಹೆಚ್ಚು ಜನದಟ್ಟಣೆ ಇರುವ ಪ್ರದೇಶವಿದು’ ಎನ್ನುತ್ತಾರೆ ಗಾಂಧಿ ಮಿತ್ರ ಮಂಡಳಿ ಅಧ್ಯಕ್ಷ ರಾಜೇಂದ್ರಕುಮಾರ್ ಗಂದಗೆ.
‘ಟು ಇನ್ ಒನ್’ ಫುಟ್‌ಪಾತ್:
ಬೀದರ್ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಪಾಪನಾಶ್ ಗೇಟ್ ವರೆಗೆ ಹೊಸದಾಗಿ ಪಾದಚಾರಿ ಮಾರ್ಗವನ್ನು ಲೋಕೋಪಯೋಗಿ ಇಲಾಖೆ ನಿರ್ಮಿಸುತ್ತಿದ್ದು ‘ಟು ಇನ್ ಒನ್’ ಮಾದರಿ ಅನುಸರಿಸಲಾಗುತ್ತಿದೆ. ಸಾಮಾನ್ಯವಾಗಿ ರಸ್ತೆಗಿಂತ ಎತ್ತರದಲ್ಲಿ ಪಾದಚಾರಿ ಮಾರ್ಗ ನಿರ್ಮಿಸಲಾಗುತ್ತದೆ. ಆದರೆ ಈ ಭಾಗದಲ್ಲಿ ರಸ್ತೆಯ ಸಮನಾಗಿ ಪಾದಚಾರಿ ಮಾರ್ಗ ಮಾಡಲಾಗುತ್ತಿದೆ. ಪಾದಚಾರಿಗಳಿಲ್ಲದ ಸಮಯದಲ್ಲಿ ವಾಹನಗಳು ಅದರ ಮೂಲಕ ಸಂಚರಿಸಬಹುದು. ಪಾರ್ಕಿಂಗ್ ಕೂಡ ಮಾಡಬಹುದು. ಇದರಿಂದ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ ಎನ್ನುತ್ತಾರೆ ಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಶಂಕರ್ ಕಾಮಶೆಟ್ಟಿ.
‘ಈ ಹಿಂದೆ ಎಲ್ಲೆಲ್ಲಿ ರಸ್ತೆಗಿಂತ ಎತ್ತರದಲ್ಲಿ ಪಾದಚಾರಿ ಮಾರ್ಗ ನಿರ್ಮಿಸಲಾಗಿದೆಯೋ ಅಲ್ಲಿ ಮಳೆ ನೀರು ಸುಗಮವಾಗಿ ಹರಿದು ಹೋಗದೇ ರಸ್ತೆಗಳು ಬೇಗ ಹಾಳಾಗಿ ಹೋಗಿವೆ. ಇದನ್ನು ತಪ್ಪಿಸಲೆಂದು ಹೊಸ ವಿಧಾನ ಅನುಸರಿಸಲಾಗುತ್ತಿದೆ. ಇದರಿಂದ ಪಾದಚಾರಿ ಹಾಗೂ ವಾಹನ ಸವಾರರಿಗೂ ಅನುಕೂಲ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.