ADVERTISEMENT

ಬೀದರ್: ಸರ್ಕಾರಿ ನೌಕರರ ಸಂಘದಲ್ಲಿ ಬದಲಾವಣೆ ಪರ್ವ

ಸೋಮನಾಥ ಬಿರಾದಾರ ಜಿಲ್ಲಾಧ್ಯಕ್ಷ, ದೇವಪ್ಪ ಖಜಾಂಚಿ, ರಾಜಕುಮಾರ ಮಾಳಗೆ ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 22 ಡಿಸೆಂಬರ್ 2024, 5:59 IST
Last Updated 22 ಡಿಸೆಂಬರ್ 2024, 5:59 IST
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ‌ ಚುನಾವಣೆಯಲ್ಲಿ ಜಯಭೇರಿ ಗಳಿಸಿದ ಸೋಮಶೇಖರ ಬಿರಾದಾರ ಚಿದ್ರಿ ಹಾಗೂ ಅವರ ಬಣದ ವಿಜೇತ ಅಭ್ಯರ್ಥಿಗಳನ್ನು ನೌಕರರು ಭುಜದ ಮೇಲೆ ಹೊತ್ತುಕೊಂಡು ಕುಣಿದು ಸಂಭ್ರಮಿಸಿದರು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ‌ ಚುನಾವಣೆಯಲ್ಲಿ ಜಯಭೇರಿ ಗಳಿಸಿದ ಸೋಮಶೇಖರ ಬಿರಾದಾರ ಚಿದ್ರಿ ಹಾಗೂ ಅವರ ಬಣದ ವಿಜೇತ ಅಭ್ಯರ್ಥಿಗಳನ್ನು ನೌಕರರು ಭುಜದ ಮೇಲೆ ಹೊತ್ತುಕೊಂಡು ಕುಣಿದು ಸಂಭ್ರಮಿಸಿದರು   

ಬೀದರ್: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೀದರ್ ಜಿಲ್ಲಾ ಘಟಕದಲ್ಲಿ ಬದಲಾವಣೆ ಪರ್ವ ಆರಂಭಗೊಂಡಿದೆ. ಜಿಲ್ಲಾಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಸೋಮಶೇಖರ ಬಿರಾದಾರ ಚಿದ್ರಿ ಬಣ ಭರ್ಜರಿ ಗೆಲುವು ಸಾಧಿಸಿದೆ.

ಸೋಮಶೇಖರ ಬಿರಾದಾರ ಅಧ್ಯಕ್ಷರಾಗಿ, ದೇವಪ್ಪ ಅವರು ಖಜಾಂಚಿ ಹಾಗೂ ರಾಜಕುಮಾರ ಮಾಳಗೆ ಅವರು ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆಯಾದರು.

ಹಿಂದಿನ ಎರಡು ಚುನಾವಣೆಗಳಲ್ಲಿ ಜಯಭೇರಿ ಬಾರಿಸಿ ಮೂರನೇ ಬಾರಿಗೆ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ಚುನಾವಣೆಯ ಕೊನೆಯ ಗಳಿಗೆವರೆಗೆ ರಾಜೇಂದ್ರಕುಮಾರ ಗಂದಗೆ ಹಾಗೂ ಅವರ ಬಣ ತೀವ್ರ ಕಸರತ್ತು ನಡೆಸಿತ್ತು. ಚುನಾವಣೆಗೆ ಮೂರ್ನಾಲ್ಕು ದಿನಗಳಿರುವಾಗ ಸೋಮಶೇಖರ ಬಿರಾದಾರ ಬಣವನ್ನು ಬೆಂಬಲಿಸಿ ಕಣದಿಂದ ಗಂದಗೆ ಹಿಂದೆ ಸರಿದರು. ಆಗಲೇ ಸೋಮಶೇಖರ ಬಿರಾದಾರ ಬಣ ಗೆಲ್ಲುವುದು ಖಚಿತವಾಗಿತ್ತು.

ADVERTISEMENT

ಬಹುತೇಕ ನಿರ್ದೇಶಕರು ಈ ಸಲ ಬದಲಾವಣೆ ಬಯಸಿ ಸೋಮಶೇಖರ ಬಿರಾದಾರ ಅವರ ಬೆಂಬಲಕ್ಕೆ ನಿಂತಿದ್ದರು. ಚುನಾವಣೆಯಲ್ಲಿ ಆಗಬಹುದಾದ ದೊಡ್ಡ ಮುಖಭಂಗದಿಂದ ಗಂದಗೆ ಹಿಂದೆ ಸರಿದಿದ್ದರು ಎಂದು ಮೂಲಗಳು ತಿಳಿಸಿವೆ.

ಗಂದಗೆ ಅವರ ಬೆನ್ನಿಗಿದ್ದ ರಾಜ್ಯ ಘಟಕದ ಅಧ್ಯಕ್ಷ ಷಡಕ್ಷರಿ ಕೂಡ ಗಂದಗೆ ಬಣಕ್ಕೆ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಸೂಚಿಸಿದ್ದರು ಎನ್ನಲಾಗಿದೆ. ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆಯ ಮೇಲೆ ಕಣ್ಣಿಟ್ಟು ಷಡಕ್ಷರಿ ಸೋಮಶೇಖರ ಬಿರಾದಾರ ಅವರನ್ನು ಬೆಂಬಲಿಸಲು ಗಂದಗೆ ಅವರಿಗೆ ತಾಕೀತು ಮಾಡಲು ಮುಖ್ಯ ಕಾರಣ ಎಂದು ತಿಳಿದು ಬಂದಿದೆ.

ಇಷ್ಟೇ ಅಲ್ಲ, ಚುನಾವಣೆಯ ಆರಂಭದಿಂದಲೂ ಎಲ್ಲ ರೀತಿಯ ರಣತಂತ್ರ ಹೆಣೆದು ಸೋಮಶೇಖರ ಬಿರಾದಾರ ಬಣದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವರು ಬೆಂಗಳೂರಿನ ಆರ್‌ಟಿ.ಒ ಕಚೇರಿಯ ಸೂಪರಿಟೆಂಡೆಂಟ್ ರಾಜಶೇಖರ ಬಿರಾದಾರ ಚಿದ್ರಿ. ಸಹೋದರನ ಬಣದ ಗೆಲುವಿಗೆ ಬೇಕಾದ ಬೆಂಬಲ ಕ್ರೋಢೀಕರಿಸಿ, ನಿರ್ಣಾಯಕ ಘಟ್ಟಕ್ಕೆ ಕೊಂಡೊಯ್ದವರು ರಾಜಶೇಖರ ಚಿದ್ರಿ. ಈ ಕಾರಣದಿಂದಲೂ ಭರ್ಜರಿ ಜಯ ಸಿಕ್ಕಿದೆ.

ಇನ್ನು, ಈ ಹಿಂದಿನ ಎರಡೂ ಚುನಾವಣೆಗಳಲ್ಲಿ ಗಂದಗೆ ಅವರ ಗೆಲುವಿಗೆ ಶ್ರಮಿಸಿದ ಅನೇಕರನ್ನು ಗಂದಗೆ ಕಡೆಗಣಿಸಿದರು. ಅವರನ್ನು ಗುರಿ ಮಾಡಿದರು. ನೌಕರರ ಸಂಘದ ಹಣದ ವಹಿವಾಟಿನಲ್ಲೂ ಅಕ್ರಮ ನಡೆದಿದೆ ಎಂಬ ಗಂಭೀರ ಸ್ವರೂಪದ ಆರೋಪಗಳು ಅವರ ವಿರುದ್ಧ ಕೇಳಿ ಬಂದಿದ್ದವು. ಚುನಾವಣೆಯಲ್ಲಿ ಇದೇ ವಿಷಯ ಪ್ರಮುಖವಾಗಿ ಪ್ರಸ್ತಾಪವಾಗಿತ್ತು. ಅಂತಿಮವಾಗಿ ಅದು ನೌಕರರು ಗಂದಗೆ ವಿರುದ್ಧ ತಿರುಗಿ ಬೀಳಲು ಕಾರಣವಾಯಿತು. ಮೂರನೇ ಸಲ ಅಧ್ಯಕ್ಷರಾಗಬೇಕೆನ್ನುವ ಗಂದಗೆ ಕನಸು ನುಚ್ಚು ನೂರಾಯಿತು.

ದೊಡ್ಡ ಅಂತರದ ಗೆಲುವು

ಚುನಾವಣೆಯಲ್ಲಿ ಸೋಮಶೇಖರ ಬಿರಾದಾರ ಚಿದ್ರಿ ಬಣ ದೊಡ್ಡ ಅಂತರದ ಗೆಲುವು ದಾಖಲಿಸಿದೆ. ಒಟ್ಟು 72 ನಿರ್ದೇಶಕರ ಪೈಕಿ 70 ಜನ ಹಕ್ಕು ಚಲಾಯಿಸಿದರು. ಒಬ್ಬ ಮತದಾರನಿಗೆ ಮೂವರು ಅಭ್ಯರ್ಥಿಗಳಿಗೆ ಹಕ್ಕು ಚಲಾಯಿಸಲು ಅವಕಾಶ ಇತ್ತು. ಸೋಮಶೇಖರ ಬಿರಾದಾರ ಅವರಿಗೆ 68 ದೇವಪ್ಪ ಅವರಿಗೆ 67 ಹಾಗೂ ರಾಜಕುಮಾರ ಮಾಳಗೆ ಅವರಿಗೆ 66 ಮತಗಳು ಬಿದ್ದವು. ಯಾವುದೇ ತಂಟೆ ತಕರಾರು ಇಲ್ಲದೆ ಮತದಾನ ಮತ ಎಣಿಕೆ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಬಸವರಾಜ ಸ್ವಾಮಿ ತಿಳಿಸಿದ್ದಾರೆ.

ಹರ್ಷೊಲ್ಲಾಸ ವಿಜಯೋತ್ಸವ ಚುನಾವಣೆಯಲ್ಲಿ ಜಯ ಗಳಿಸುತ್ತಿದ್ದಂತೆ ಸೋಮಶೇಖರ ಬಿರಾದಾರ ಚಿದ್ರಿ ಅವರ ಬಣದಲ್ಲಿ ಹರ್ಷೊಲ್ಲಾಸ ಮನೆ ಮಾಡಿತು. ಅವರ ಬೆಂಬಲಿಗರು ಹೂಮಾಲೆ ಹಾಕಿ ಜಯಘೋಷ ಹಾಕಿದರು. ನಗರದಲ್ಲಿ ವಿಜಯೋತ್ಸವ ಆಚರಿಸಿದರು. ಚುನಾವಣಾ ಫಲಿತಾಂಶ ಹೊರಬೀಳುವುದಕ್ಕೂ ಮುನ್ನವೇ ಅವರ ಬೆಂಬಲಿಗರು ನಗರದಲ್ಲಿ ಗೆಲುವಿನ ಶುಭಾಶಯ ಕೋರುವ ಫ್ಲೆಕ್ಸ್ ಗಳನ್ನು ನಗರದ ಪ್ರಮುಖ ರಸ್ತೆ ವೃತ್ತಗಳಲ್ಲಿ ಅಳವಡಿಸಿದ್ದರು.

ಫಲಿತಾಂಶ ಹೊರ ಬರುತ್ತಿದ್ದಂತೆ ಬೆಂಬಲಿಗರು ಕುಣಿದು ಕುಪ್ಪಳಿಸಿದರು. ಅಭ್ಯರ್ಥಿಗಳಿಗೆ ಜೆಸಿಬಿ ಮೂಲಕ ಹೂಮಳೆಗರೆದರು. ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು. ಈ ಸಂದರ್ಭಕ್ಕೆ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಷಡಕ್ಷರಿ ಕೂಡ ಸಾಕ್ಷಿಯಾದರು.ಬಳಿಕ ಎಲ್ಲರನ್ನೂ ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಲಾಯಿತು.

ಅಂಕಿ‌ ಅಂಶ

72 ಒಟ್ಟು ನಿರ್ದೇಶಕರ ಸ್ಥಾನ

70 ಚಲಾವಣೆಯಾದ ಮತಗಳು

68 ಸೋಮಶೇಖರ ಬಿರಾದಾರ ಪಡೆದ ಮತಗಳು

67 ದೇವಪ್ಪ ಪಡೆದ ಮತಗಳು

66 ರಾಜಕುಮಾರ ಮಾಳಗೆ ಪಡೆದ ಮತಗಳು

ಹೆಚ್ಚು ಮತಗಳನ್ನು ಕೊಟ್ಟು ಸರ್ಕಾರಿ ನೌಕರರು ನನ್ನ ಹಾಗೂ ನನ್ನ ಬಣದವರನ್ನು ಗೆಲ್ಲಿಸಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಎಲ್ಲರನ್ನೂ ಭರವಸೆಗೆ ತೆಗೆದುಕೊಂಡು ಕೆಲಸ ಮಾಡುವೆ
ಸೋಮಶೇಖರ ಬಿರಾದಾರ ಚಿದ್ರಿ, ನೂತನ ಜಿಲ್ಲಾಧ್ಯಕ್ಷ‌ ಸರ್ಕಾರಿ ನೌಕರರ ಸಂಘ
ಚುನಾವಣೆಯಲ್ಲಿ ಸೋಮಶೇಖರ ಬಿರಾದಾರ ಚಿದ್ರಿ ಬಣ ಗೆಲ್ಲುವುದು ಚುನಾವಣೆಗೆ ಮೊದಲೇ ಖಚಿತವಾಗಿತ್ತು. ದೊಡ್ಡ ಅಂತರದಿಂದ ಮತದಾರರು ಗೆಲ್ಲಿಸಿರುವುದಕ್ಕೆ ಕೃತಜ್ಞನಾಗಿದ್ದೇನೆ.
ರಾಜಕುಮಾರ ಮಾಳಗೆ, ನೂತನ ರಾಜ್ಯ ಪರಿಷತ್ ಸದಸ್ಯ
ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಷಡಕ್ಷರಿ ನೂತನ ಜಿಲ್ಲಾಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ ಹಾಗೂ ಇತರರನ್ನು ಸನ್ಮಾನಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.