ADVERTISEMENT

ಬೀದರ್‌ಗೆ ಐದು ಬಾರಿ ಬಂದಿದ್ದ ವಿಶ್ವೇಶತೀರ್ಥರು

ಅಯೋಧ್ಯೆಯಲ್ಲಿ ರಾಮಮಂದಿರ ನೋಡುವುದು ನನ್ನ ಇಚ್ಛೆ ಎಂದಿದ್ದರು

ಚಂದ್ರಕಾಂತ ಮಸಾನಿ
Published 29 ಡಿಸೆಂಬರ್ 2019, 19:30 IST
Last Updated 29 ಡಿಸೆಂಬರ್ 2019, 19:30 IST
ಬೀದರ್‌ನಲ್ಲಿ 2012ರ ಅಕ್ಟೋಬರ್‌ 5ರಂದು ನೈಸ್ ಮುಖ್ಯಸ್ಥ ಅಶೋಕ ಖೇಣಿ ಅವರ 63ನೇ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಸರ್ವಧರ್ಮ ಸಮ್ಮೇಳನವನ್ನು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಉದ್ಘಾಟಿಸಿದ್ದರು. ಅಶೋಕ ಖೇಣಿ, ಭಾಲ್ಕಿಯ ಚನ್ನಬಸವ ಪಟ್ಟದ್ದೇವರು, ಹಾರಕೂಡದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಹುಲಸೂರಿನ ಶಿವಾನಂದ ಸ್ವಾಮೀಜಿ, ಕೌಠಾದ ಬೆಲ್ದಾಳ ಶರಣರು ಇದ್ದಾರೆ
ಬೀದರ್‌ನಲ್ಲಿ 2012ರ ಅಕ್ಟೋಬರ್‌ 5ರಂದು ನೈಸ್ ಮುಖ್ಯಸ್ಥ ಅಶೋಕ ಖೇಣಿ ಅವರ 63ನೇ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಸರ್ವಧರ್ಮ ಸಮ್ಮೇಳನವನ್ನು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಉದ್ಘಾಟಿಸಿದ್ದರು. ಅಶೋಕ ಖೇಣಿ, ಭಾಲ್ಕಿಯ ಚನ್ನಬಸವ ಪಟ್ಟದ್ದೇವರು, ಹಾರಕೂಡದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಹುಲಸೂರಿನ ಶಿವಾನಂದ ಸ್ವಾಮೀಜಿ, ಕೌಠಾದ ಬೆಲ್ದಾಳ ಶರಣರು ಇದ್ದಾರೆ   

ಬೀದರ್‌: ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಒಂದಲ್ಲ, ಎರಡಲ್ಲ ಒಟ್ಟು ಐದು ಬಾರಿ ಗಡಿ ಜಿಲ್ಲೆ ಬೀದರ್‌ಗೆ ಬಂದಿದ್ದರು.
ವಿಶ್ವೇಶತೀರ್ಥ ಶ್ರೀಗಳು ಮೊದಲ ಬಾರಿಗೆ 1973ರಲ್ಲಿ ಪರ್ಯಾಯ ಪೂರ್ವ ಸಂಚಾರಕ್ಕೆ ಬಂದಾಗ ಅಖಿಲ ಭಾರತೀಯ ಮಧ್ವ ಮಹಾಪರಿಷತ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಹಾಗೂ 1984ರಲ್ಲಿ ನಗರದಲ್ಲಿ ಆಯೋಜಿಸಿದ್ದ ಧರ್ಮ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತರಿಗೆ ಆಶೀರ್ವಚನ ನೀಡಿದ್ದರು.

1989ರಲ್ಲಿ ವಿಶ್ವ ಹಿಂದೂ ಪರಿಷತ್‌ ವತಿಯಿಂದ ಆಯೋಜಿಸಿದ್ದ ರಾಮಶೀಲಾ ಯಾತ್ರೆಯು ಬೀದರ್‌ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಹೊರಟಿದ್ದಾಗ ಮೆರವಣಿಗೆಯಲ್ಲಿ ಪಾಲ್ಗೊಂಡು ಕಾರ್ಯಕರ್ತರು ಹಾಗೂ ಭಕ್ತರಲ್ಲಿ ಉತ್ಸಾಹ ತುಂಬಿದ್ದರು. ನಗರದ ಗಣೇಶ ಮೈದಾನದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ‘ಅಯೋಧ್ಯೆಯಲ್ಲಿ ರಾಮಮಂದಿರ ನೋಡುವುದು ನನ್ನ ಇಚ್ಛೆ’ ಹೇಳಿದ್ದರು.

ವಿಎಚ್‌ಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾಗಿದ್ದ ಭೀಮಸೇನರಾವ್‌ ಕನಿಹಾಳ, ಬಿಜೆಪಿ ಮುಖಂಡ ಎನ್‌.ಆರ್.ವರ್ಮಾ ಮೊದಲಾದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

2001ರಲ್ಲಿ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ (ಎನ್‌ಎಸ್‌ಎಸ್‌ಕೆ) ಉದ್ಘಾಟನೆಯ ಸಂದರ್ಭದಲ್ಲಿ ಕಾರ್ಖಾನೆ ಆವರಣದಲ್ಲಿರುವ ಹನುಮಾನ ದೇವಸ್ಥಾನದಲ್ಲಿ ನಡೆದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಶ್ರೀಗಳ ಆಶೀರ್ವಾದ ಪಡೆದು ಕೃತಾರ್ಥರಾಗಿದ್ದರು.

ಕಿಶನ್‌ರಾವ್‌, ಭೀಮಸೇನರಾವ್‌ ಕನಿಹಾಳ ಸೇರಿದಂತೆ ಅನೇಕ ಪ್ರಮುಖರು ಶ್ರೀಗಳಿಗೆ ರಾಯರ ಮಠದಲ್ಲಿ ಊಟದ ವ್ಯವಸ್ಥೆ ಮಾಡಿಸಿದ್ದರು. ಕಾರ್ಖಾನೆ ಅಧ್ಯಕ್ಷರಾಗಿದ್ದ ಗುರುಪಾದಪ್ಪ ನಾಗಮಾರಪಳ್ಳಿ ಅವರು ತಮ್ಮ ಕಾರಿನಲ್ಲಿ ಶೀಗಳನ್ನು ಧಾರವಾಡಕ್ಕೆ ಕಳಿಸಿಕೊಟ್ಟಿದ್ದರು.

2012ರ ಅಕ್ಟೋಬರ್ 5 ರಂದು ನೈಸ್‌ ಮುಖ್ಯಸ್ಥ ಅಶೋಕ ಖೇಣಿ ಅವರ 63ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಆಯೋಜಿಸಿದ್ದ ಸಂತರ ಸರ್ವಧರ್ಮ ಸಮ್ಮೇಳನದಲ್ಲಿ ಶ್ರೀಗಳು ಬೆಂಗಳೂರಿನಿಂದ ಹೈದರಾಬಾದ್‌ ಮಾರ್ಗವಾಗಿ ಬೀದರ್‌ಗೆ ಬಂದು ಪಾಲ್ಗೊಂಡಿದ್ದರು.

ಸಮ್ಮೇಳನ ಉದ್ಘಾಟಿಸಿ ಆರ್ಶೀವಚನ ನೀಡಿದ್ದರು. ಭಾಲ್ಕಿಯ ಚನ್ನಬಸವ ಪಟ್ಟದ್ದೇವರು, ಹಾರಕೂಡದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಹುಲಸೂರಿನ ಶಿವಾನಂದ ಸ್ವಾಮೀಜಿ, ಕೌಠಾದ ಬೆಲ್ದಾಳ ಶರಣರು, ಸಿಖ್‌ ಹಾಗೂ ಮುಸ್ಲಿಂ ಧರ್ಮಗುರುಗಳು ಪಾಲ್ಗೊಂಡಿದ್ದರು. ಅಂದು ರಾತ್ರಿ 11 ಗಂಟೆಯಾದ್ದರಿಂದ ರಾಯರ ಮಠಕ್ಕೂ ಬಂದಿರಲಿಲ್ಲ. ಊಟ ಮಾಡದೆ ಹಾಗೆಯೇ ತೆರಳಿದ್ದರು.

‘ಊಟ ಮಾಡಿಯೇ ಹೋಗುವಂತೆ ಮಠದ ಭಕ್ತರು ನಿವೇದಿಸಿಕೊಂಡರೂ ಅವರು ನಯವಾಗಿಯೇ ನಿರಾಕರಿಸಿ ಬೆಂಗಳೂರಿಗೆ ಹೋಗಿ ಪೂಜೆ ಮಾಡಿ ಊಟ ಮಾಡುವುದಾಗಿ ಹೇಳಿ ಪ್ರಯಾಣ ಬೆಳೆಸಿದ್ದರು. ಅವರನ್ನು ಹಾಗೆಯೇ ಕಳಿಸಿದ್ದಕ್ಕೆ ಬಹಳ ಬೇಸರ ಪಟ್ಟುಕೊಂಡಿದ್ದೇವು’ ಎಂದು ಹಿರಿಯರಾದ ಭೀಮಸೇನರಾವ್‌ ಕನಿಹಾಳ ತಿಳಿಸಿದರು.

‘ಉಡುಪಿಯಿಂದ ಭದ್ರಿನಾಥಕ್ಕೆ ಪಾದಯಾತ್ರೆ ಹೊರಟಿದ್ದ ವಿಶ್ವಪ್ರಸನ್ನ ತೀರ್ಥರೊಂದಿಗೆ ನಾನು ಪಾದಯಾತ್ರೆಯ ಸಮಾರೋಪದಲ್ಲಿ ಪಾಲ್ಗೊಂಡಿದ್ದೆ. 2014ರ ಸೆಪ್ಟೆಂಬರ್‌ 18 ರಂದು ಭದ್ರಿನಾಥದಲ್ಲಿ ನಡೆದ ಪಾದಯಾತ್ರೆಯಲ್ಲಿ ಪೇಜಾವರ ಶ್ರೀಗಳು ಒಂದು ಕಿ.ಮೀ ವರೆಗೆ ನಡೆದುಕೊಂಡು ಬಂದಿದ್ದರು. ನಂತರ ಹೆಲಿಕಾಪ್ಟರ್‌ನಲ್ಲಿ ಮರಳಿದ್ದರು’ ಎಂದು ಹೇಳಿದರು.

‘ಬೆಂಗಳೂರಿನ ಕೊಠಡಿಯೊಂದರಲ್ಲಿ ಪ್ರಧಾನಮಂತ್ರಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ವಿಶ್ವೇಶತೀರ್ಥರು ಆಪ್ತಸಮಾಲೋಚನೆಯಲ್ಲಿ ತೊಡಗಿದ್ದರು. ಅನಂತಕುಮಾರ ಹೆಗಡೆ ಅವರ ಕುರಿತು ಶ್ರೀಗಳು ಮಾತನಾಡುತ್ತಿದ್ದಾಗ ಅಲ್ಲಿದ್ದ ಸಿಬ್ಬಂದಿ ಕೆಲವರಿಗೆ ಕೊಠಡಿಯಿಂದ ಹೊರಗೆ ಹೋಗುವಂತೆ ಮನವಿ ಮಾಡಿದರು. ಆದರೆ ಶ್ರೀಗಳು ಯಾರನ್ನೂ ಹೊರಗೆ ಕಳಿಸದಂತೆ ಸೂಚಿಸಿದರು. ಭಕ್ತರನ್ನು ಅಪಾರ ಗೌರವದಿಂದ ಕಾಣುತ್ತಿದ್ದರು. ಯಾರ ಮನಸ್ಸನ್ನೂ ನೋಯಿಸುತ್ತಿರಲಿಲ್ಲ ಎನ್ನುವುದಕ್ಕೆ ಅದು ಸಾಕ್ಷಿ’ ಎಂದು ಭೀಮಸೇನರಾವ್‌ ಕನಿಹಾಳ ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.