ADVERTISEMENT

ಬೀದರ್ ಲಾಕ್‍ಡೌನ್‍ಗೆ ಅರಳಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 13:53 IST
Last Updated 19 ಏಪ್ರಿಲ್ 2021, 13:53 IST
ಅರವಿಂದಕುಮಾರ ಅರಳಿ
ಅರವಿಂದಕುಮಾರ ಅರಳಿ   

ಬೀದರ್: ಕೋವಿಡ್ ಸೋಂಕು ನಿಯಂತ್ರಣಕ್ಕೆ ಬೀದರ್ ಜಿಲ್ಲೆಯನ್ನು ಕನಿಷ್ಠ ಒಂದು ವಾರವಾದರೂ ಲಾಕ್‍ಡೌನ್ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಲಾಕ್‍ಡೌನ್ ಮಾಡುವಾಗ ಬಡವರು, ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರ ಹಿತವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಒಂದೇ ದಿನ 460ಕ್ಕೂ ಅಧಿಕ ಕೋವಿಡ್ ಪ್ರಕರಣಗಳು ಬೆಳಕಿಗೆ ಬಂದಿರುವುದು ಆಘಾತಕಾರಿ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬೆಡ್‍ಗಳಿಲ್ಲ. ರೆಮ್‌ಡಿಸಿವಿರ್ ಇಂಜೆಕ್ಷನ್‍ಗಾಗಿ ಪರದಾಡುವಂತಾಗಿದೆ. ಅನೇಕರು ತಮಗೆ ಕರೆ ಮಾಡಿ ಈ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಲು ತುರ್ತು ಕ್ರಮ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

ಜಿಲ್ಲೆ ತೆಲಂಗಾಣ ಹಾಗೂ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿದೆ. ಅಲ್ಲಿಗೆ ಹೋಗಿ ಬರುವವರಿಂದಲೇ ಹೆಚ್ಚು ತೊಂದರೆ ಆಗುತ್ತಿದೆ. ಜಿಲ್ಲೆಯಲ್ಲಿ ಪರಿಸ್ಥಿತಿ ಅಧೋಗತಿಗೆ ಹೋಗುವ ವರೆಗೆ ಕಾದು ಕೂರಬಾರದು. ಜಿಲ್ಲೆಗೆ ಬೇಕಾಗಿರುವಷ್ಟು ಔಷಧ ಹಾಗೂ ಉಪಕರಣಗಳನ್ನು ತರಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ಕೋವಿಡ್ ಕುರಿತು ಯೋಚಿಸಲು ಸಮಯ ಕೊಡುತ್ತಿಲ್ಲ. ಅವರಿಗೆ ಚುನಾವಣೆಯೇ ಮೊದಲ ಆದ್ಯತೆಯಾಗಿದೆ. ಜಿಲ್ಲಾಧಿಕಾರಿ ಕೂಡಲೇ ಈ ಸಂಬಂಧ ಕ್ರಮ ತೆಗೆದುಕೊಳ್ಳಬೇಕು. ಮುಂಜಾಗ್ರತಾ ಕ್ರಮವಾಗಿ ನಗರಸಭೆ ಚುನಾವಣೆಯನ್ನು ಮುಂದೂಡಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.