ADVERTISEMENT

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರಂಪರೆ ನಗರ ಅಣಿ

ವೃತ್ತಗಳಿಗೆ ದೀಪಾಲಂಕಾರ, ರಾರಾಜಿಸುತ್ತಿರುವ ನಾಡ ಧ್ವಜಗಳು

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 10:10 IST
Last Updated 29 ಫೆಬ್ರುವರಿ 2020, 10:10 IST
ಸುರೇಶ ಚನಶೆಟ್ಟಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ
ಸುರೇಶ ಚನಶೆಟ್ಟಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ   

ಬೀದರ್: ಎರಡು ದಿನಗಳ ಜಿಲ್ಲಾ 18ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರಂಪರೆ ನಗರ ಅಣಿಯಾಗಿದೆ.

ಪ್ರಮುಖ ಬೀದಿಗಳಲ್ಲಿ ಅಳವಡಿಸಿರುವ ಕಟೌಟ್, ಬ್ಯಾನರ್, ಫ್ಲೆಕ್ಸ್‌ಗಳು ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರಿಗೆ ಸಮ್ಮೇಳನಕ್ಕೆ ಸ್ವಾಗತ ಕೋರುತ್ತಿವೆ. ವೃತ್ತಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿವೆ. ಎಲ್ಲೆಡೆ ನಾಡ ಧ್ವಜಗಳು ರಾರಾಜಿಸುತ್ತಿವೆ.

ಸಮ್ಮೇಳನ ಸ್ಥಳವಾದ ಡಾ.ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಪುಸ್ತಕ, ಆಯುರ್ವೇದ ಔಷಧ, ಸಿರಿಧಾನ್ಯ, ಬಟ್ಟೆ, ಚಿತ್ರಕಲೆ ಪ್ರದರ್ಶನ ಸೇರಿದಂತೆ ವಿವಿಧ ಮಳಿಗೆಗಳು ತೆರೆದುಕೊಂಡಿದೆ. ಸಾರ್ವಜನಿಕರಿಗೆ ಕುಡಿಯುವ ನೀರು, ಊಟದ ವ್ಯವಸ್ಥೆ ಮಾಡಲಾಗಿದೆ.

ADVERTISEMENT

‘ಸಮ್ಮೇಳನ ಸರ್ವಾಧ್ಯಕ್ಷರು, ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ, ವೇದಿಕೆ ಕಾರ್ಯಕ್ರಮ ಸೇರಿದಂತೆ ಸಮ್ಮೇಳನದ ಸರ್ವ ಸಿದ್ಧತೆಗಳು ಪೂರ್ಣಗೊಂಡಿವೆ. ನಗರದ ಪ್ರಮುಖ ವೃತ್ತಗಳನ್ನು ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿದೆ. ಎಲ್ಲೆಡೆ ನಾಡ ಧ್ವಜಗಳನ್ನು ಕಟ್ಟಲಾಗಿದೆ. ಫ್ಲೆಕ್ಸ್‌, ಬ್ಯಾನರ್‌ಗಳನ್ನು ಅಳವಡಿಸಲಾಗಿದೆ.

ಶನಿವಾರ ಬೆಳಿಗ್ಗೆ 8.30ಕ್ಕೆ ನಗರದ ಕರ್ನಾಟಕ ಫಾರ್ಮಸಿ ಕಾಲೇಜಿನಿಂದ ಜಿಲ್ಲಾ ರಂಗಮಂದಿರದ ವರೆಗೆ ನಡೆಯಲಿರುವ ಸಮ್ಮೇಳನಾಧ್ಯಕ್ಷ ಸೋಮನಾಥ ಯಾಳವಾರ ಹಾಗೂ ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಗೆ ಕಲಾ ತಂಡಗಳು ಮೆರುಗು ನೀಡಲಿದೆ. ಕಲಬುರ್ಗಿಯ ಹಲಗೆ ವಾದನ, ಸ್ಥಳೀಯ ಡೊಳ್ಳು, ಕೋಲಾಟ, ಭಜನೆ ತಂಡಗಳು ಹಾಗೂ ಮುಖವಾಡಧಾರಿಗಳು ಪ್ರಮುಖ ಆಕರ್ಷಣೆಯಾಗಲಿದ್ದಾರೆ.

‘ಜಿಲ್ಲಾ ರಂಗಮಂದಿರದಲ್ಲಿ 10 ಮಳಿಗೆಗಳನ್ನು ಹಾಕಲಾಗಿದೆ. ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು, ರುಚಿಕರ ಊಟದ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನದ ಮೊದಲ ದಿನವಾದ ಶನಿವಾರ ಭೋಜನದಲ್ಲಿ ರವೆ ಹುಗ್ಗಿ, ಅನ್ನ, ಸಾಂಬಾರು ಇರಲಿದೆ. ಭಜ್ಜಿ, ಸಜ್ಜೆ ರೊಟ್ಟಿ, ಬಿಳಿಜೋಳದ ರೊಟ್ಟಿ, ಅನ್ನ ಹಾಗೂ ಸಾಂಬಾರು ಭಾನುವಾರದ ಊಟದ ವಿಶೇಷ ಆಗಿರಲಿದೆ’ ಎನ್ನುತ್ತಾರೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ.

‘ಸಮ್ಮೇಳನವನ್ನು ಸರ್ವ ರೀತಿಯಿಂದಲೂ ಯಶಸ್ವಿಗೊಳಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಟೊಂಕ ಕಟ್ಟಿ ನಿಂತಿದ್ದಾರೆ. ಎರಡು ವಾರಗಳಿಂದ ಹಗಲಿರುಳು ಸಿದ್ಧತಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿ ದ್ದಾರೆ.ಸಮ್ಮೇಳನ ಐತಿಹಾಸಿಕವಾಗುವ ವಿಶ್ವಾಸ ಇದೆ’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.