ADVERTISEMENT

ಬೀದರ್ | ‘ನೆಲದಾಳದ ವಿಸ್ಮಯ’ ಬಹಮನಿ ಅರಸರ ಕಾಲದ ಕರೇಜ್‌ ಮಾರ್ಗಕ್ಕೆ ಹಾನಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 13 ಜನವರಿ 2026, 23:41 IST
Last Updated 13 ಜನವರಿ 2026, 23:41 IST
ಬೀದರ್‌ನ ಅಲಿಯಾಬಾದ್‌ ಸಮೀಪದ ಕರೇಜ್‌ ಹತ್ತಿರದ ಕಿರು ಪುಷ್ಕರಣಿಯನ್ನು ಜೆಸಿಬಿ ಮೂಲಕ ಅಗೆದಿರುವುದು
ಬೀದರ್‌ನ ಅಲಿಯಾಬಾದ್‌ ಸಮೀಪದ ಕರೇಜ್‌ ಹತ್ತಿರದ ಕಿರು ಪುಷ್ಕರಣಿಯನ್ನು ಜೆಸಿಬಿ ಮೂಲಕ ಅಗೆದಿರುವುದು   

ಬೀದರ್‌: ನೆಲದಾಳದ ವಿಸ್ಮಯವೆಂದೇ ಕರೆಯುವ ಇಲ್ಲಿನ ಅಲಿಯಾಬಾದ್‌ ಸಮೀಪದ ‘ಕರೇಜ್‌’ ಪರಿಸರದಲ್ಲಿ ಖಾಸಗಿಯವರು ಎಗ್ಗಿಲ್ಲದೇ ಕಾಮಗಾರಿ ನಡೆಸಿದ್ದು, ಕರೇಜ್‌ನ ಸ್ವರೂಪಕ್ಕೆ ಧಕ್ಕೆಯಾಗುವ ಆಪತ್ತು ಎದುರಾಗಿದೆ.

ಕರೇಜ್‌ ಬಾಯಿಂದ (ಕರೇಜ್‌ ಮೌತ್‌) ಕೂಗಳತೆ ದೂರದಲ್ಲೇ ಜೆಸಿಬಿ ಉಪಯೋಗಿಸಿ, ನೆಲ ಅಗೆಯಲಾಗುತ್ತಿದೆ. ನೆಲದಾಳದ ನೀರಿನ ಮಾರ್ಗವನ್ನೂ ಅಗೆಯಲಾಗಿದೆ. ಕಿರು ಪುಷ್ಕರಣಿಯನ್ನು ಬೇಕಾಬಿಟ್ಟಿ ಅಗೆಯಲಾಗಿದೆ. ವರ್ಷದ ಎಲ್ಲಾ ದಿನಗಳಲ್ಲೂ ಒಂದೇ ಮಟ್ಟದಲ್ಲಿ ನೀರು ಹರಿಯುವುದು ಕರೇಜ್‌ ವಿಶೇಷ. ಆದರೆ, ಈಗ ಅಗೆದಿರುವುದರಿಂದ ನೀರು ವೇಗವಾಗಿ ಹರಿಯುತ್ತಿದ್ದು, ಕರೇಜ್‌ನ ನೀರು ಖಾಲಿಯಾಗುವ ಆತಂಕ ಎದುರಾಗಿದೆ.

15ನೇ ಶತಮಾನದಲ್ಲಿ ಬಹಮನಿ ಅರಸರ ಕಾಲದಲ್ಲಿ ನಿರ್ಮಾಣಗೊಂಡಿರುವ ‘ಕರೇಜ್‌’ 3 ಕಿ.ಮೀ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ. ಇದರ ನಿರ್ವಹಣೆ ಹಾಗೂ ಗಾಳಿ, ಬೆಳಕಿನ ವ್ಯವಸ್ಥೆಗೆ 27 ತೆರೆದ ಬಾವಿಗಳನ್ನು (ವೆಂಟ್ಸ್‌) ಕಟ್ಟಿಸಲಾಗಿದೆ. ಈ ಪೈಕಿ ಏಳು ‘ವೆಂಟ್ಸ್‌’ಗಳನ್ನು ಗುರುತಿಸಲಾಗಿದೆ. ಈ ‘ವೆಂಟ್ಸ್‌’ ಹಾಗೂ ‘ಕರೇಜ್‌’ ಹಾದು ಹೋಗಿರುವ 100 ಮೀಟರ್‌ ಸುತ್ತಮುತ್ತಲಿನ ಪ್ರದೇಶವನ್ನು ‘ಬಫರ್‌ ಜೋನ್‌’ ಎಂದು ಜಿಲ್ಲಾಡಳಿತ 2024ರಲ್ಲಿ ಗುರುತಿಸಿ, ಜಾಗ ಹದ್ದುಬಸ್ತು ಮಾಡಿದೆ.  ಕರೇಜ್‌ನಲ್ಲಿ ಹೂಳು ತೆಗೆದು 2017ರಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು.

ADVERTISEMENT

ಈಗ ಎರಡನೇ ಹಂತದಲ್ಲಿ ಇದರ ಅಭಿವೃದ್ಧಿಗೆ ಡಿಪಿಆರ್‌ ಸಿದ್ಧವಾಗಿದೆ. ಇನ್ನೇನು ಅಂತಿಮ ಅನುಮತಿ ಪಡೆದು ಕೆಲಸ ಆರಂಭಗವಾಗಬೇಕಿದೆ.

ಆದರೆ, ಕರೇಜ್‌ ಇರುವ ಮುಖ್ಯ ಜಾಗದಲ್ಲಿ ಯಾವುದೇ ರೀತಿಯ ಕಾವಲು, ಸಿಸಿಟಿವಿ ಕ್ಯಾಮೆರಾ ಇಲ್ಲದ ಕಾರಣ ಖಾಸಗಿಯವರು ಸದ್ದಿಲ್ಲದೇ ಕೆಲಸ ಆರಂಭಿಸಿದ್ದಾರೆ.

‘ಖಾಸಗಿಯವರಿಂದ ಕಾಮಗಾರಿ ತಿಳಿದು ಸ್ಥಳ ಪರಿಶೀಲಿಸಿದಾಗ ಕರೇಜ್‌ ಮುಖದಿಂದ ಕಾಲುವೆಗಿರುವ ಲಿಂಕ್‌ ಡ್ಯಾಮೇಜ್‌ ಆಗಿರುವುದು ಗೊತ್ತಾಗಿದೆ. ಈ ವಿಷಯ ಜಿಲ್ಲಾಡಳಿತದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕರೇಜ್‌ ಪ್ರವಾಸಿ ಸ್ಥಳವಷ್ಟೇ ಅಲ್ಲ, ಅದು ಅಂತರ್ಜಲಾಶಯ. ದೀರ್ಘಕಾಲೀನ ಯೋಜನೆ ರೂಪಿಸಿ, ಅದನ್ನು ಸಂರಕ್ಷಿಸಬೇಕಿದೆ. ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರೂ ಆಗಿರುವ ಸಾಮಾಜಿಕ ಕಾರ್ಯಕರ್ತ ವಿನಯ್‌ ಕುಮಾರ್‌ ಮಾಳಗೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಜೆಸಿಬಿ ಮೂಲಕ ನೆಲ ಅಗೆದ ಕಾರಣ ಕರೇಜಿನ ನೀರು ಹರಿದು ಹೋಗುತ್ತಿರುವುದು

ವಿದ್ಯುತ್‌ ದೀಪ ಬಳಸಿ  ಅಭಿವೃದ್ಧಿ ಕಾರ್ಯ ಕೈಗೊಂಡಾಗ ಕರೇಜ್‌ ಕಂಡಿದ್ದು

ಕರೇಜ್‌ ಅನ್ನು ಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿ ಸೇರಿಸಲು ಎಲ್ಲಾ ಪ್ರಯತ್ನ ನಡೆದಿದೆ. ಜಿಲ್ಲಾಡಳಿತ ಅಲ್ಲಿ ಯಾವುದೇ ಚಟುವಟಿಕೆಗೆ ಆಸ್ಪದ ಕೊಡಬಾರದು
ವಿನಯ್‌ ಕುಮಾರ್‌ ಮಾಳಗೆ ಸಾಮಾಜಿಕ ಕಾರ್ಯಕರ್ತ
ಕರೇಜ್‌ ಪರಿಸರದಲ್ಲಿ ಕೆಲವರು ಕಾಮಗಾರಿ ಕೈಗೆತ್ತಿಕೊಂಡಿರುವ ವಿಷಯ ಗಮನಕ್ಕೆ ಬಂದಿದೆ. ಅದನ್ನು ನಿಲ್ಲಿಸಲು ಸಂಬಂಧಪಟ್ಟವರಿಗೆ ಈಗಾಗಲೇ ಸೂಚನೆ ಕೊಡಲಾಗಿದೆ
ಶಿಲ್ಪಾ ಶರ್ಮಾ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.