ADVERTISEMENT

ಬೀದರ್ | ಕುಷ್ಟರೋಗ: ಆರಂಭದಲ್ಲೇ ಚಿಕಿತ್ಸೆ ಅವಶ್ಯ–ರವೀಂದ್ರ ದಾಮಾ

ಇಂದಿನಿಂದ ಫೆ.13ರವರೆಗೆ ಸ್ಪರ್ಶ ಕುಷ್ಠ ರೋಗ ಅರಿವು ಆಂದೋಲನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 6:14 IST
Last Updated 30 ಜನವರಿ 2026, 6:14 IST
ಬೀದರ್‌ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಸ್ಪರ್ಶ ಕುಷ್ಠ ರೋಗ ಅರಿವು ಆಂದೋಲನ ಕಾರ್ಯಕ್ರಮದ ತಾಲ್ಲೂಕು ಸಮನ್ವಯ ಸಮಿತಿ ಸಭೆಯಲ್ಲಿ ತಹಶೀಲ್ದಾರ್ ರವೀಂದ್ರ ದಾಮಾ ಮಾತನಾಡಿದರು
ಬೀದರ್‌ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಸ್ಪರ್ಶ ಕುಷ್ಠ ರೋಗ ಅರಿವು ಆಂದೋಲನ ಕಾರ್ಯಕ್ರಮದ ತಾಲ್ಲೂಕು ಸಮನ್ವಯ ಸಮಿತಿ ಸಭೆಯಲ್ಲಿ ತಹಶೀಲ್ದಾರ್ ರವೀಂದ್ರ ದಾಮಾ ಮಾತನಾಡಿದರು   

ಬೀದರ್: ‘ಇಂದಿನಿಂದ ಫೆ.13 ರವರೆಗೆ ಸ್ಪರ್ಶ ಕುಷ್ಠ ರೋಗ ಅರಿವು ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ರೋಗದ ಬಗ್ಗೆ ಸೂಕ್ತ ತಿಳಿವಳಿಕೆ ನೀಡಿ ಪ್ರಾರಂಭದ ಹಂತದ್ಲೇ ರೋಗ ಪತ್ತೆ ಮಾಡಿ ಔಷಧಿ, ಚಿಕಿತ್ಸೆ ಪಡೆಯುವುದರಿಂದ ಸಂಪೂರ್ಣವಾಗಿ ಗುಣಮುಖರಾಗುವುದಲ್ಲದೆ, ಮುಂದಾಗಬಹುದಾದ ಅಂಗವಿಕಲ್ಯವನ್ನು ಕೂಡ ತಡೆಗಟ್ಟಬಹುದು’ ಎಂದು ಬೀದರ್ ತಹಶೀಲ್ದಾರ್ ರವೀಂದ್ರ ದಾಮಾ ಹೇಳಿದರು.

ನಗರದ ತಹಶೀಲ್ದಾರ್ ಕಚೇರಿಯಲ್ಲಿ ಸ್ಪರ್ಶ ಕುಷ್ಠ ರೋಗ ಅರಿವು ಆಂದೋಲನ ಕಾರ್ಯಕ್ರಮದ ತಾಲ್ಲೂಕು ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ತಾಲ್ಲೂಕು ಮತ್ತು ಹೋಬಳಿ ಗ್ರಾಮ ಮಟ್ಟದಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನರಿಗೆ ಹೆಚ್ಚಿನ ಅರಿವು ಮೂಡಿಸಲಾಗುವುದು. ಪಾಕ್ಷಿಕ ಕಾರ್ಯಕ್ರಮದಲ್ಲಿ ಮನೆ-ಮನೆಗೆ ಆಶಾ ಕಾರ್ಯಕರ್ತೆಯವರಿಂದ ಅರಿವು ಮೂಡಿಸಲಾಗುವುದು. ಕುಷ್ಠರೋಗದ ಲಕ್ಷಣಗಳಿದ್ದವರಿಗೆ ಪತ್ತೆ ಹಚ್ಚಿ ರೋಗ ಖಚಿತವಾದ ಬಳಿಕ ಬಹು ಔಷಧಿ ಚಿಕಿತ್ಸೆ ಪ್ರಾರಂಭಿಸಲಾಗುವುದು’ ಎಂದು ಹೇಳಿದರು.

ADVERTISEMENT

ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಸಂಗಾರೆಡ್ಡಿ ಮಾತನಾಡಿ, ‘ತಾರತಮ್ಯವನ್ನು ಕೊನೆಗೊಳಿಸುವುದು, ಘನತೆಯನ್ನು ಖಚಿತಪಡಿಸುವುದು’ ಎಂಬ ಘೋಷಣೆಯೊಂದಿಗೆ ಸ್ಪರ್ಶ ಕುಷ್ಠ ರೋಗ ಅರಿವು ಆಂದೋಲನ ಕಾರ್ಯಕ್ರಮವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆಯ ಸಮನ್ವಯದೊಂದಿಗೆ ಜ.30ರಂದು ಎಲ್ಲಾ ಗ್ರಾಮ ಪಂಚಾಯಿತಿ, ಪುರಸಭೆಗಳಲ್ಲಿ ಸಂಬಂಧಪಟ್ಟ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡು ಕುಷ್ಠರೋಗ ನಿವಾರಿಸಲು ಸದಸ್ಯರು ಮತ್ತು ಸಾರ್ವಜನಿಕರ ಸಮೂಹದಲ್ಲಿ ಪ್ರತಿಜ್ಞೆ ಮಾಡಿ ಮಹಾತ್ಮ ಗಾಂಧೀಜಿಯವರ ಈ ಕನಸನ್ನು ನನಸಾಗಿಸೋಣ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸ್ವರ್ಶ ಕುಷ್ಠರೋಗ ಅರಿವು ಆಂದೋಲನದ ಭಿತ್ತಿ ಪತ್ರಗಳು, ಕರಪತ್ರಗಳು, ಬ್ಯಾನರ್‌ಗಳನ್ನು ಬಿಡುಗಡೆ ಮಾಡಿದರು.

ಡಾ. ಶೈಲಜಾ, ಡಾ. ನಿಶಾತ್ ಫಾತಿಮಾ, ಡಾ, ವೈಶಾಲಿ, ಡಾ. ಮಲ್ಲಿಕಾರ್ಜುನ, ಡಾ. ಅರ್ಚನಾ, ಓಂಕಾರ ಮಲ್ಲಿಗೆ, ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ಅಬ್ರಾಹಂ ಧನರಾಜ, ವೀರಶೆಟ್ಟಿ ಚನ್ನಶೆಟ್ಟಿ, ರೇವಣಪ್ಪಾ ತಿಮಗೊಂಡಿ, ಪ್ರದೀಪ ಪ್ರವೀಣ, ಅಬ್ದುಲ ಹೈ, ಅಫಜಲುದ್ದಿನ್, ಬೀದರ್‌ನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯೆದ್ಯಾಧಿಕಾರಿಗಳು, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.