ಬೀದರ್: ಒಂದೆಡೆ ಮಳೆ ಬಿಡುವು ಕೊಟ್ಟರೆ, ಇನ್ನೊಂದೆಡೆ ಮಾಂಜ್ರಾ ಹಾಗೂ ಕಾರಂಜಾ ನದಿಯಲ್ಲಿ ಪ್ರವಾಹ ಇಳಿಮುಖಗೊಂಡಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.
ಸತತ ಮಳೆ ಹಾಗೂ ಮಹಾರಾಷ್ಟ್ರದ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರು ಹರಿಸಿದ ಪರಿಣಾಮ ಮಾಂಜ್ರಾ ನದಿಯಲ್ಲಿ ಪ್ರವಾಹ ಬಂದಿತು. ಜಿಲ್ಲೆಯ ಹುಲಸೂರ, ಕಮಲನಗರ, ಭಾಲ್ಕಿ, ಔರಾದ್ ಹಾಗೂ ಬೀದರ್ ತಾಲ್ಲೂಕಿನ ಹಲವು ಕಡೆಗಳಲ್ಲಿ ಸೇತುವೆಗಳು ಮುಳುಗಡೆಯಾಗಿ, ಸಂಚಾರ ಸ್ಥಗಿತಗೊಂಡಿತ್ತು. ಹುಲಸೂರಿನ 20 ಗ್ರಾಮಗಳ ಸಂಪರ್ಕ ಕಡಿದು ಹೋಗಿತ್ತು. ಕಮಲನಗರ, ಭಾಲ್ಕಿ ಮೂಲಕ ಮಹಾರಾಷ್ಟ್ರಕ್ಕೆ ತೆರಳುವ ಮಾರ್ಗ ಬಂದ್ ಆಗಿತ್ತು. ಈಗ ನದಿಯಲ್ಲಿ ನೀರಿನ ಪ್ರಮಾಣ ಇಳಿಮುಖಗೊಂಡಿರುವುದರಿಂದ ಸಂಪರ್ಕ ಸಹಜ ಸ್ಥಿತಿಗೆ ಬಂದಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವಾಹನ ಸಂಚಾರ ಮೊದಲಿನಂತೆ ಆರಂಭವಾಗಿದೆ. ನದಿ ತೀರದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಆದರೆ, ಈಗಲೂ ಗದ್ದೆಗಳಲ್ಲಿ ನೀರಿನ ಸಂಗ್ರಹ ಹಾಗೆಯೇ ಇದೆ. ಬಹುತೇಕ ಬೆಳೆ ಈಗಲೂ ನೀರಿನಲ್ಲಿಯೇ ಕೊಳೆಯುತ್ತಿದೆ. ರೈತರು ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಬೀದರ್ ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ಕೈಗೊಂಡು, ಪರಿಸ್ಥಿತಿಯ ಅವಲೋಕನ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಮುಖ್ಯಮಂತ್ರಿಯವರಿಗೆ ಜಿಲ್ಲೆಯಲ್ಲಿ ಕೃಷಿಭೂಮಿ, ಮನೆಗಳು ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಉಂಟಾದ ಭಾರಿ ಹಾನಿ ಬಗ್ಗೆ ಮನವರಿಕೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.